ದೋಹಾ : ಹಾಲಿ ಆವೃತ್ತಿಯ ಫುಟ್ಬಾಲ್ ವಿಶ್ವ ಕಪ್ (FIFA WORLD CUP ) ಕ್ರೀಡಾ ಪ್ರೇಮಿಗಳ ಪಾಲಿನ ಅತ್ಯಂತ ನಿರಾಶಾದಾಯಕ ಟೂರ್ನಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಮುಸ್ಲಿಮ್ ದೇಶವಾಗಿರುವ ಕತಾರ್‌ನಲ್ಲಿ ಮನುಷ್ಯನ ವಿನೋದಾವಳಿಗಳಿಗೆ ಏನೆಲ್ಲ ಬೇಕೋ ಅವೆಲ್ಲದಕ್ಕೂ ನಿಷೇಧ. ಅವರದ್ದೇ ರೂಲ್ಸ್ ಮತ್ತು ಅದೇ ಅಂತಿಮ. ಇವೆಲ್ಲದರಿಂದ ಬೇಸತ್ತಿರುವ ಫುಟ್ಬಾಲ್ ಅಭಿಮಾನಿಗಳು ಆಯೋಜಕರ ವಿರುದ್ಧ ಒಕ್ಕೊರಲ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಸ್ಲಿಮ್ ದೇಶಗಳಲ್ಲಿ ಮದ್ಯಪಾನ ಸಂಪೂರ್ಣ ನಿಷೇಧ. ಆದರೆ, ಫುಟ್ಬಾಲ್ ಅಭಿಮಾನಿಗಳಿಗೆ ಬಿಯರ್ ಗ್ಲಾಸ್ ಕೈಯಲ್ಲಿ ಹಿಡಿದುಕೊಂಡು ಪಂದ್ಯ ನೋಡುವುದೇ ಮಜಾ. ಆದರೆ, ಕತಾರ್ ಆಯೋಜಕರು ಅದಕ್ಕೆ ಅನುಮತಿ ನೀಡುತ್ತಿಲ್ಲ. ಇದರಿಂದ ಬೇಸತ್ತ ಅಭಿಮಾನಿಗಳು ಸ್ಟೇಡಿಯಮ್‌ನಲ್ಲೇ ಬಿಯರ್ ಕೊಡಿ ಎಂದು ಒಕ್ಕೊರಲಿನಿಂದ ಕೂಗಿದ ಪ್ರಸಂಗ ನಡೆದಿದೆ.
ಭಾನುವಾರ ರಾತ್ರಿ ನಡೆದ ಈಕ್ವೆಡಾರ್ ಹಾಗೂ ಕತಾರ್ ನಡುವಿನ ಉದ್ಘಾಟನಾ ಪಂದ್ಯದ ವೇಳೆ ಈ ಪ್ರಸಂಗ ನಡೆದಿದೆ. ಪಂದ್ಯ ನೋಡುತ್ತಿದ್ದ ಈಕ್ವೆಡಾರ್‌ನ ಅಭಿಮಾನಿಗಳಿಗೆ ಏಕಾಏಕಿ ಬೇಸರ ಮೂಡಿದ್ದು, “ಬೇಕೇ ಬೇಕು ಬಿಯರ್ ಬೇಕು’ ಎಂದು ಕೂಗಿದ್ದಾರೆ. ಅದರ ವಿಡಿಯೊ ವೈರಲ್ ಆಗಿದೆ.
೨೦೧೦ರಲ್ಲಿ ವಿಶ್ವ ಕಪ್ ಆಯೋಜನೆಗೆ ಕತಾರ್‌ಗೆ ಆತಿಥ್ಯ ಕೊಡುತ್ತಿದ್ದ ಬೆನ್ನಲ್ಲೇ ಫುಟ್ಬಾಲ್ ಪ್ರೇಮಿಗಳ ವಿರೋಧ ವ್ಯಕ್ತಗೊಂಡಿತ್ತು. ಮಾನವ ವಿರೋಧಿ ಧೋರಣೆ, ಪಾರದರ್ಶಕತೆ ಹೊಂದಿಲ್ಲದ ಹಾಗೂ ಧಾರ್ಮಿಕವಾಗಿ ಕಟ್ಟರ್ ನೀತಿಗಳನ್ನು ಅನುಸರಿಸುವ ಕತಾರ್‌ಗೆ ಆತಿಥ್ಯ ಕೊಟ್ಟಿರುವುದರಿಂದ ಎಲ್ಲರಿಗೂ ಸಮಸ್ಯೆ ಎಂಬ ಆರೋಪ ಕೇಳಿ ಬಂದಿತ್ತು. ಅವೆಲ್ಲವೂ ಈಗ ಬಯಲಾಗುತ್ತಿವೆ.
ಇದನ್ನೂ ಓದಿ | FIFA WORLD CUP | ಉದ್ಘಾಟನಾ ಪಂದ್ಯದಲ್ಲಿ ಕತಾರ್ ವಿರುದ್ಧ ಈಕ್ವೆಡಾರ್ ತಂಡಕ್ಕೆ 2-0 ಗೋಲ್‌ಗಳ ಜಯ