ಬೆಂಗಳೂರು: ಕ್ರಿಕೆಟ್ ಪಂದ್ಯದ ಫಲಿತಾಂಶಗಳು ಎಂದಿಗೂ ಅನಿಶ್ಚಿತ. ಬಲಿಷ್ಠ ತಂಡವೂ ಕನಿಷ್ಠ ಮೊತ್ತಕ್ಕೆ ಕುಸಿದ ಹಲವಾರು ಉದಾಹರಣೆಗಳಿವೆ. ಅಂತೆಯೇ ಸಣ್ಣ ಪುಟ್ಟ ತಂಡಗಳು ರನ್ ಶಿಖರವನ್ನೇ ನಿರ್ಮಿಸಿದ ಹಲವಾರು ಪ್ರಸಂಗಗಳಿವೆ. ಅಂತೆಯೇ ಸ್ಪೇನ್ನಲ್ಲಿ ನಡೆದ ಟಿ20 ಕ್ರಿಕೆಟ್ ಮ್ಯಾಚ್ (T20 Cricket) ಒಂದು ಕನಿಷ್ಠ ಮೊತ್ತಕ್ಕೆ ಮುಕ್ತಾಯಗೊಳ್ಳುವ ಮೂಲಕ ವಿಶ್ವ ದಾಖಲೆ ಬರೆದಿದೆ. ಮೊದಲು ಬ್ಯಾಟ್ ಮಾಡಿದ ತಂಡ 10 ರನ್ಗೆ ಆಲ್ಔಟ್ ಆಗುವ ಮೂಲಕ ಕಳಪೆ ದಾಖಲೆ ಬರೆದರೆ, ಎದುರಾಳಿ ತಂಡ ಕೇವಲ 2 ಎಸೆತಗಳಲ್ಲಿ ಗುರಿ ಮುಟ್ಟಿ ವಿಶ್ವ ದಾಖಲೆ ಮಾಡಿದೆ. ಇದು ಆಧುನಿಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಎನಿಸಿಕೊಂಡಿದೆ.
ಇಸ್ಲೆ ಆಫ್ ಮ್ಯಾನ್ ಟೂರ್ ಆಫ್ ಸ್ಪೇನ್ ಟೂರ್ನಿಯಲ್ಲಿ ಇಂಥದ್ದೊಂದು ದಾಖಲೆ ಸೃಷ್ಟಿಯಾಗಿದೆ. ಅಚ್ಚರಿಯೆಂದರೆ ಅದು ಟೂರ್ನಿಯ ಫೈನಲ್ ಪಂದ್ಯ ಕೂಡ. ಲಾ ಮಂಗಾ ಕ್ಲಬ್ನ ಗ್ರೌಂಡ್ನಲ್ಲಿ ಈ ಟೂರ್ನಿ ಆಯೋಜನೆಗೊಂಡಿತ್ತು. ಇಸ್ಲೆ ಆಫ್ ಮ್ಯಾನ್ ಮತ್ತು ಕ್ರಿಸ್ಟಿಯನ್ ಮುನೋಜ್ ಮಿಲ್ಸ್ ಸ್ಪೇನ್ ತಂಡಗಳ ನಡುವೆ ಈ ಹಣಾಹಣಿ ನಡೆದಿದೆ.
ಟಾಸ್ ಗೆದ್ದ ಸ್ಪೇನ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರೆ ಬ್ಯಾಟಿಂಗ್ ಅವಕಾಶ ಪಡೆದ ಇಸ್ಲೆ ಆಫ್ ಮ್ಯಾನ್ ತಂಡ 8.4 ಓವರ್ಗಳಲ್ಲಿ ಆಲ್ಔಟ್ ಆಯಿತು. ಅಷ್ಟರೊಳಗೆ ಆ ತಂಡಕ್ಕೆ ಕೇವಲ 10 ರನ್ಗಳನ್ನು ಮಾತ್ರ ಬಾರಿಸಲು ಸಾಧ್ಯವಾಯಿತು. 11 ರನ್ ಗುರಿ ಬೆನ್ನಟ್ಟಿದ ಸ್ಪೇನ್ ತಂಡದ ಬ್ಯಾಟರ್ ಮೊದಲ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು. ಈ ಮೂಲಕ ಈ ಪಂದ್ಯ ಇತಿಹಾಸ ಸೃಷ್ಟಿಸಿತು.
ಇದನ್ನೂ ಓದಿ : Vijay Merchant Trophy | 6 ರನ್ಗೆ 11 ಬ್ಯಾಟ್ಸ್ಮನ್ಗಳು ಔಟ್, ಭಾರತದ ಕ್ರಿಕೆಟ್ ಇತಿಹಾಸದಲ್ಲೊಂದು ಕಳಪೆ ದಾಖಲೆ
ಕೆಲವು ವಾರಗಳ ಹಿಂದೆ ಮುಕ್ತಾಯಗೊಂಡ ಬಿಗ್ ಬ್ಯಾಷ್ ಲೀಗ್ನಲ್ಲಿ ಟಿ20 ಕ್ರಿಕೆಟ್ ಇತಿಹಾಸದ ಕನಿಷ್ಠ ಮೊತ್ತದ ದಾಖಲೆ ಸೃಷ್ಟಿಯಾಗಿತ್ತು. ಆ ಪಂದ್ಯದಲ್ಲಿ ಸಿಡ್ನಿ ಥಂಡರ್ ತಂಡ ಕೇವಲ 15 ರನ್ಗಳಿಗೆ ಆಲ್ಔಟ್ ಆಗುವ ಮೂಲಕ ಕಳಪೆ ದಾಖಲೆ ಮಾಡಿತ್ತು. ಅದನ್ನೀಗ ಇಸ್ಲೆ ಆಫ್ ಮ್ಯಾನ್ ತಂಡ ಮುರಿದಿದೆ.