Site icon Vistara News

ind vs aus : ಮಹಿಳೆಯರ ತಂಡಕ್ಕೆ ಸೋಲು; ಸರಣಿ ಆಸ್ಟ್ರೇಲಿಯಾ ತಂಡದ ಪಾಲು

Australia Cricket team

ಮುಂಬಯಿ: ಜನವರಿ 9 ರಂದು (ಮಂಗಳವಾರ) ನಡೆದ ಟಿ20 ಸರಣಿಯ ನಿರ್ಣಾಯಕ ಹಾಗೂ 3ನೇ ಪಂದ್ಯದಲ್ಲಿ ಅಲಿಸ್ಸಾ ಹೀಲಿ ನೇತೃತ್ವದ ಆಸ್ಟ್ರೇಲಿಯಾ ತಂಡ ಆತಿಥೇಯ ಭಾರತ ವಿರುದ್ಧ 7 ವಿಕೆಟ್​ ಭರ್ಜರಿ ವಿಜಯ ದಾಖಲಿಸಿತು. ಇದರೊಂದಿಗೆ ಟಿ20 ಸರಣಿ 2-1 ಅಂತರದಿಂದ ಆಸ್ಟ್ರೇಲಿಯಾ ತಂಡದ ಪಾಲಾಯಿತು. ಭಾರತ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ನಂತರದ ಎರಡು ಪಂದ್ಯಗಳಲ್ಲಿ ಪ್ರವಾಸಿ ಆಸೀಸ್ ಪಡೆ ಗೆಲುವು ತನ್ನದಾಗಿಸಿಕೊಂಡಿತು. ಅಂತೆಯೇ ಆಸ್ಟ್ರೇಲಿಯಾ ತಂಡ ಈ ಪ್ರವಾಸದಲ್ಲಿ ಏಕ ದಿನ ಹಾಗೂ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿತು. ಏಕೈಕ ಪಂದ್ಯವಿದ್ದ ಟೆಸ್ಟ್​ ಸರಣಿಯಲ್ಲಿ ಭಾರತ ತಂಡ ಗೆಲುವು ಸಾಧಿಸಿದ್ದ ಕಾರಣ ಸಂಪೂರ್ಣ ಮುಖಭಂಗದಿಂದ ತಪ್ಪಿಸಿಕೊಂಡಿದೆ.

ಇಲ್ಲಿನ ಡಿವೈ ಪಾಟೀಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಬೆತ್ ಮೂನಿ (52*) ಮತ್ತು ನಾಯಕಿ ಅಲಿಸ್ಸಾ (55*) ಹೀಲಿ ಅರ್ಧಶತಕಗಳನ್ನು ಬಾರಿಸಿ ಆಸೀಸ್​ ತಂಡದ ಗೆಲುವಿನ ರೂವಾರಿಗಳೆನಿಸಿಕೊಂಡರು. ಭಾರತ ತಂಡದ ಬೌಲರ್​ಗಳು ಮತ್ತೊಂದು ಬಾರಿ ವೈಫಲ್ಯ ಕಂಡರು.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 147 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಇನ್ನೂ ಎಂಟು ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ಗೆ 149 ರನ್ ಬಾರಿಸಿ ಗೆಲುವು ಸಾಧಿಸಿತು.

ಇದನ್ನೂ ಓದಿ : Rohit Sharma: ವಿಶೇಷ ದಾಖಲೆಯ ಹೊಸ್ತಿಲಲ್ಲಿ ರೋಹಿತ್​; ಬೇಕಿದೆ 18 ಸಿಕ್ಸರ್​

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿಯರಾದ ಬೆತ್​ ಮೂನಿ ಮತ್ತು ನಾಯಕಿ ಅಲಿಸಾ ಹೀಲಿ ಎಚ್ಚರಿಕೆಯಿಂದ ಆಡಿದರು. ಸ್ವಲ್ಪ ಹೊತ್ತಿನಲ್ಲಿಯೇ ಅವರು ತಮ್ಮ ಅಬ್ಬರದ ಪ್ರದರ್ಶನ ನೀಡಲು ಆರಂಭಿಸಿದರು. ಕೊನೆಯಲ್ಲಿ, ಮೂನಿ 52 ರನ್ ಬಾರಿಸಿ ಅಜೇಯರಾಗಿ ಉಳಿದರು. ಅದಕ್ಕಿಂತ ಮೊದಲು ಹೀಲಿ 55 ರನ್ ಬಾರಿಸಿ ಔಟಾದರು. ತಾಹಿಲಾ ಮೆಕ್​ಗ್ರಾಥ್​ 20 ರನ್ ಬಾರಿಸಿದರು. ಲಿಚ್​ಫೀಲ್ಡ್​ 17 ರನ್ ಕೊಡುಗೆ ಕೊಟ್ಟರು. ಭಾರತದ ಬೌಲರ್​ಗಳು ಹೆಚ್ಚು ಪ್ರಭಾವ ಬೀರದ ಕಾರಣ ಪ್ರವಾಸಿ ತಂಡಕ್ಕೆ ಗೆಲುವು ಸುಲಭವಾಯಿತು.

ಭಾರತದ ಬ್ಯಾಟಿಂಗ್ ವೈಫಲ್ಯ

ಮೊದಲು ಬ್ಯಾಟ್​ ಮಾಡಿದ ಭಾರತ ಪರ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಆರಂಭಿಕರಾಗಿ ಕಣಕ್ಕಿಳಿದು 39 ರನ್ ಕಲೆಹಾಕಿದರು. ಆತಿಥೇಯ ಭಾರತ ಪವರ್ ಪ್ಲೇ ಅಂತ್ಯಕ್ಕೆ 51 ರನ್​ಗೆ 1 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಆಸ್ಟ್ರೇಲಿಯಾವು ಬೌಲಿಂಗ್​ನಲ್ಲಿ ಬಲವಾದ ಪುನರಾಗಮನ ಮಾಡಿತು. ಜೆಮಿಮಾ ರೊಡ್ರಿಗಸ್ (2) ಮತ್ತು ಹರ್ಮನ್ ಪ್ರೀತ್ ಕೌರ್ (3) ವೈಫಲ್ಯ ಕಂಡರು. ರಿಚಾ ಘೋಷ್ (34) ಭಾರತ ಪರ ಉತ್ತಮ ಸ್ಕೋರರ್ ಎನಿಸಿಕೊಂಡರು.

Exit mobile version