ರಾವಲ್ಪಿಂಡಿ : ಆತಿಥೇಯ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ((ENGvsPAK)) ಮೊದಲ ಪಂದ್ಯದಲ್ಲಿ ೭೪ ರನ್‌ಗಳ ವಿಜಯ ಸಾಧಿಸಿರುವ ಪ್ರವಾಸಿ ಇಂಗ್ಲೆಂಡ್ ತಂಡ ಖುಷಿಯಲ್ಲಿರುವ ಸಂದರ್ಭದಲ್ಲೇ ಗಾಯದ ಆತಂಕ ಎದುರಾಗಿದೆ. ತಂಡದ ಪ್ರಮುಖ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ ಅವರು ಮುಂದಿನೆರಡು ಪಂದ್ಯಗಳಿಗೆ ಲಭ್ಯರಿಲ್ಲ ಎಂಬುದಾಗಿ ಇಂಗ್ಲೆಂಡ್ ತಂಡ ಮೂಲಗಳು ತಿಳಿಸಿವೆ.
ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ ೬೫೭ ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಅಂತೆಯೇ ಪಂದ್ಯದ ಎರಡನೇ ದಿನ ಪಾಕಿಸ್ತಾನ ತಂಡ ಬ್ಯಾಟಿಂಗ್ ಮಾಡುವಾಗ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಲಿಯಾಮ್ ಲಿವಿಂಗ್‌ಸ್ಟನ್ ಬಿದ್ದು ಮಂಡಿಗೆ ಗಾಯ ಮಾಡಿಕೊಂಡಿದ್ದರು. ತಕ್ಷಣ ಅವರು ಮೈದಾನ ತೊರೆದಿದ್ದರು. ಆದಾಗ್ಯೂ ಎರಡನೇ ಇನಿಂಗ್ಸ್‌ನಲ್ಲಿ ಅವರು ಬ್ಯಾಟ್ ಮಾಡಲು ಬಂದಿದ್ದರೂ ವಿಕೆಟ್‌ಗಳ ನಡುವಿನ ಓಡಾಟ ಮಾಡಲು ಅಡಚಣೆ ಎದುರಿಸಿದ್ದರು. ಬಳಿಕ ಅವರು ಕೊನೇ ದಿನವೂ ಫೀಲ್ಡಿಂಗ್ ಮಾಡಿರಲಿಲ್ಲ.
ಲಿವಿಂಗ್‌ಸ್ಟನ್ ಅವರಿಗೆ ಭಾನುವಾರ ಸ್ಕ್ಯಾನಿಂಗ್ ಮಾಡಲಾಗಿದ್ದು, ಮೂಳೆಗೂ ಗಾಯವಾಗಿರುವುದು ಗೊತ್ತಾಗಿದೆ. ಹೀಗಾಗಿ ಮುಂದಿನೆರಡು ಪಂದ್ಯಕ್ಕೆ ಅವರು ಇಲ್ಲ ಎಂಬುದಾಗಿ ತಂಡದ ಮೂಲಗಳು ಪ್ರಕಟಿಸಿವೆ. ದುರದೃಷ್ಟವೆಂದರೆ ಲಿಯಾಮ್‌ಗೆ ಇದು ಪದಾರ್ಪಣೆಯ ಟೆಸ್ಟ್ ಪಂದ್ಯ. ಆ ಪಂದ್ಯದ ಎರಡನೇ ದಿನವೇ ಅವರು ಗಾಯಗೊಂಡಿದ್ದಾರೆ. ಲಿಯಾಮ್ ಅವರ ಬದಲಿಗೆ ಯಾರು ಆಡಲಿದ್ದಾರೆ ಎಂಬುದನ್ನು ಇಂಗ್ಲೆಂಡ್ ತಂಡ ಇನ್ನೂ ಖಚಿತಪಡಿಸಿಲ್ಲ. ಆದರೆ, ಅವರ ಅಲಭ್ಯತೆಯಿಂದ ತಂಡಕ್ಕೆ ನಷ್ಟವಾಗಲಿದೆ. ಯಾಕೆಂದರೆ, ಸ್ಪಿನ್ ಬೌಲಿಂಗ್ ಮೂಲಕವೂ ಅವರು ತಂಡಕ್ಕೆ ನೆರವಾಗಬೇಕಾಗಿತ್ತು.
ಟೆಸ್ಟ್ ಸರಣಿಯ ಎರಡನೇ ಪಂದ್ಯ ಡಿಸೆಂಬರ್ ೯ರಂದು ಮುಲ್ತಾನ್‌ನಲ್ಲಿ ನಡೆಯಲಿದೆ.