ಕೊಚ್ಚಿ : ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯಂತೆ ಐಪಿಎಲ್ 16ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ಯಾರೆಲ್ಲ ದೊಡ್ಡ ಮೊತ್ತವನ್ನು ಪಡೆಯಬಹುದು ಎಂದು ಅಂದಾಜಿಸಲಾಗಿತ್ತೋ ಅವರು ಅದಕ್ಕಿಂತ ಕೊಂಚ ಹೆಚ್ಚೇ ಹಣವನ್ನು ಪಡೆದುಕೊಂಡರು. ಅಲ್ಲದೆ, ಲೀಗ್ ಕ್ರಿಕೆಟ್ನಲ್ಲಿ ಆಲ್ರೌಂಡರ್ಗಳ ಪಾರುಪತ್ಯ ಹೆಚ್ಚುತ್ತಿರುವುದು ಮತ್ತೊಮ್ಮೆ ಸಾಬೀತಾಯಿತು. ಪ್ರಮುಖವಾಗಿ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಆಟಗಾರರಯ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡರು. ಗರಿಷ್ಠ ಮೊತ್ತ ಪಡೆದವರಲ್ಲಿ ಮೂವರು ಇಂಗ್ಲೆಂಡ್ ತಂಡದ ಆಟಗಾರರೇ ಇರುವುದು ಇದಕ್ಕೆ ಸಾಕ್ಷಿ.
ಕೊಚ್ಚಿಯಲ್ಲಿ ಮಧ್ಯಾಹ್ನ 2.30ರಿಂದ ಹರಾಜು ಪ್ರಕ್ರಿಯೆ ರಾತ್ರಿ 8.30ರವರೆಗೆ ನಡೆಯಿತು. ಇಂಗ್ಲೆಂಡ್ನ ಜನಪ್ರಿಯ ಹರಾಜು ನಿರೂಪಕ ಹ್ಯೂ ಎಡ್ಮಿಡೀಸ್ ಅವರು ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು. ಮೊದಲ ಸುತ್ತಿನ ಹರಾಜಿನಲ್ಲೇ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಲು ಪೈಪೋಟಿಗೆ ಬಿದ್ದವು. ಉಳಿದಿರುವ ಹಣವನ್ನು ಬಳಸಿಕೊಂಡು ಸೂಕ್ತ ಆಟಗಾರರನ್ನು ಆಯ್ಕೆ ಮಾಡಲು ಬುದ್ಧಿವಂತಿಕೆ ಬಳಸಿಕೊಂಡವು. ಅಂತಿಮವಾಗಿ ಒಟ್ಟು 80 ಆಟಗಾರರು ನಾನಾ ತಂಡಗಳಿಗೆ ಸೇರ್ಪಡೆಯಾದರೆ 167ಕೋಟಿ ರೂಪಾಯಿ ಮೊತ್ತವನ್ನು ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಬಳಸಿಕೊಂಡವು. ಇದರಲ್ಲಿ ಆಲ್ರೌಂಡರ್ಗಳಾದ ಸ್ಯಾಮ್ ಕರ್ರನ್, ಕ್ಯಾಮರೂನ್ ಗ್ರೀನ್ ಮತ್ತು ಬೆನ್ ಸ್ಟೋಕ್ಸ್ ಒಟ್ಟು ಮೊತ್ತದಲ್ಲಿ ₹52.25 ಕೋಟಿ ರೂಪಾಯಿ ತಮ್ಮ ಜೇಬಿಗೆ ಇಳಿಸಿಕೊಂಡರು.
ದಾಖಲೆ ಸೃಷ್ಟಿಸಿದ ಸ್ಯಾಮ್ ಕರ್ರನ್
ಇಂಗ್ಲೆಂಡ್ ತಂಡದ ಆಲ್ರೌಂಡರ್ ಸ್ಯಾಮ್ ಕರ್ರನ್ ಐಪಿಎಲ್ ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದರು. ಅವರು 18.50 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಹರಾಜಾಗುವ ಮೂಲಕ 2021 ರಲ್ಲಿ ಕ್ರಿಸ್ ಮೋರಿಸ್ ಅವರಿಗೆ ರಾಜಸ್ಥಾನ್ ರಾಯಲ್ಸ್ ತಂಡ ನೀಡಿದ್ದ 16.25 ಕೋಟಿ ರೂಪಾಯಿಯ ದಾಖಲೆ ಮುರಿದರು. ಹತ್ತು ಫ್ರಾಂಚೈಸಿಗಳಲ್ಲಿ ಏಳು ಫ್ರಾಂಚೈಸಿಗಳು ಕರ್ರನ್ ಅವರಿಗಾಗಿ ಪೈಪೋಟಿಗೆ ಇಳಿದವು. ಜಿದ್ದಿಗೆ ಬಿದ್ದ ಪಂಜಾಬ್, ಇತ್ತೀಚೆಗೆ ನಡೆದ ಟಿ20 ವಿಶ್ವ ಕಪ್ನ ಫೈನಲ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸ್ಯಾಮ್ಗೆ ಬಲೆ ಬೀಸಿತು.
ಆಸ್ಟ್ರೇಲಿಯಾ ತಂಡ ಪರ ಮಿಂಚುತ್ತಿರುವ ವೇಗದ ಬೌಲಿಂಗ್ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಅವರಿಗಾಗಿ ಫ್ರಾಂಚೈಸಿಗಳು ಮುಗಿ ಬಿದ್ದವು. ಅದರಲ್ಲೂ ಸ್ಯಾಮ್ ಕರ್ರನ್ ಅವರನ್ನು ಕಳೆದುಕೊಂಡಿದ್ದ ಮುಂಬಯಿ ಇಂಡಿಯನ್ಸ್ ಕೊನೆಗೂ ಅವರನ್ನು 17.50 ಕೋಟಿ ರೂಪಾಯಿಗೆ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಬೆನ್ ಸ್ಟೋಕ್ಸ್ 16.25 ಕೋಟಿ ರೂಪಾಯಿಗೆ ಸಿಎಸ್ಕೆ ಪಾಲಾದರೆ ನಿಕೋಲಸ್ ಪೂರನ್ 16 ಕೋಟಿ ರೂಪಾಯಿಗೆ ಲಖನೌ ಸೂಪರ್ ಜಯಂಟ್ಸ್ ತಂಡ ಸೇರಿದರು.
ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ ಕಳೆದ ವರ್ಷ ಬಿಡುಗಡೆ ಮಾಡಿತ್ತು. ಅವರು 8.25 ಕೋಟಿ ರೂಪಾಯಿಗೆ ಎಸ್ಆರ್ಎಚ್ ತಂಡ ಸೇರಿಕೊಂಡರು. ಅದಕ್ಕಿಂತ ಮೊದಲು ಇಂಗ್ಲೆಂಡ್ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ಅವರನ್ನೂ 13.25 ಕೋಟಿ ರೂಪಾಯಿಗೆ ಎಸ್ಆರ್ಎಚ್ ತನ್ನದಾಗಿಸಿಕೊಂಡಿತ್ತು. ಹೆಚ್ಚು ಮೊತ್ತ ಪಡೆದ ಅಗ್ರ 10 ಕ್ರಿಕೆಟಿಗರ ಪಟ್ಟಿಯಲ್ಲಿ ಇನ್ನೂ ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡದ ವೇಗದ ಬೌಲರ್ ಶಿವಂ ಮಾವಿ (6 ಕೋಟಿ ರೂಪಾಯಿ) ಹಾಗೂ ಮುಕೇಶ್ ಕುಮಾರ್ (5.50 ಕೋಟಿ ರೂಪಾಯಿ) ಕೂಡ ಇದ್ದಾರೆ.
ನಿರೀಕ್ಷೆಯಷ್ಟು ಮೊತ್ತ ಪಡೆಯದ ರೊಸ್ಸೊ
ದಕ್ಷಿಣ ಆಫ್ರಿಕಾ ತಂಡದ ಯುವ ಬ್ಯಾಟರ್ ರೀಲಿ ರೊಸ್ಸೊ ಅವರು ದೊಡ್ಡ ಮೊತ್ತವನ್ನು ಬಾಚಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು. ಮೊದಲ ಸುತ್ತಿನಲ್ಲಿ ಅವರು ಅನ್ಸೋಲ್ಡ್ ಆದರು. ಕೊನೇ ಹಂತದಲ್ಲಿ 4.60 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು. ಇವರ ಜತೆಗೆ ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ ಹಾಗೂ ಲಿಟನ್ ದಾಸ್ ಕೂಡ ಮೊದಲ ಸುತ್ತಿನಲ್ಲಿ ಫ್ರಾಂಚೈಸಿಗಳ ಗಮನ ಸೆಳೆಯಲಿಲ್ಲ. ಕೊನೇ ಹಂತದಲ್ಲಿ ಅವರಿಬ್ಬರೂ ಕೆ.ಕೆ. ಆರ್ ತಂಡ ಸೇರಿಕೊಂಡರು. ಸೇಲಾಗದವರ ಸಾಲಿನಲ್ಲಿ ಕನ್ನಡಿಗ ಶ್ರೇಯಸ್ ಗೋಪಾಲ್ ಕೂಡ ಇದ್ದಾರೆ.
ಐರ್ಲೆಂಡ್ ಎಂಟ್ರಿ
ಐರ್ಲೆಂಡ್ ತಂಡದ ಆಟಗಾರ ಜೋಶುವಾ ಲಿಟಲ್ ಅವರು ಹರಾಜಿನಲ್ಲಿ 4.4 ಕೋಟಿ ರೂಪಾಯಿಗೆ ಗುಜರಾತ್ ಟೈಟನ್ಸ್ ತಂಡ ಸೇರಿಕೊಂಡರು. ಈ ಮೂಲಕ ಐಪಿಎಲ್ಗೆ ಎಂಟ್ರಿ ಪಡೆದ ಮೊದಲ ಐರ್ಲೆಂಡ್ ಆಟಗಾರ ಎನಿಸಿಕೊಂಡರು.
ಹಿರಿಯ ಸ್ಪಿನ್ನರ್ಗಳಾದ ಅಮಿತ್ ಮಿಶ್ರಾ ಹಾಗೂ ಪಿಯೂಶ್ ಚಾವ್ಲಾ ಅವರಿಗೆ ಕೇವಲ 50 ಲಕ್ಷ ರೂಪಾಯಿ ಮಾತ್ರ ದೊರಕಿದವು.
ಹೇಗಿತ್ತು ಟ್ರೆಂಡ್
ಆಲ್ರೌಂಡರ್ ಆಟಗಾರರಿಗೆ ಹರಾಜಿನಲ್ಲಿ ಹೆಚ್ಚು ಮಣೆ ಹಾಕಲಾಗಿತ್ತು. ಬೌಲಿಂಗ್, ಬ್ಯಾಟಿಂಗ್ ಮಾಡುವ ಆಟಗಾರರು ಹೆಚ್ಚು ಮೊತ್ತ ಪಡೆದುಕೊಂಡರು. ಮಯಾಂಕ್ ಅಗರ್ವಾಲ್ ಅವರು ಎಸ್ಆರ್ಎಚ್ ತಂಡಕ್ಕೆ ನಾಯಕರಾಗುವ ನಿಟ್ಟಿನಲ್ಲಿ ದೊಡ್ಡ ಮೊತ್ತ ಪಡೆದರು. ವಿಕೆಟ್ ಕೀಪಿಂಗ್ ಮಾಡುವ ಸ್ಫೋಟಕ ಬ್ಯಾಟರ್ ವಿಂಡೀಸ್ ಆಟಗಾರ ನಿಕೋಲಸ್ ಪೂರನ್ಗೂ ದೊಡ್ಡ ಮೊತ್ತ ದೊರೆಯಿತು. ಅದೇ ರೀತಿಯ ಇನ್ನೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದ ಆಟಗಾರರೂ ಉತ್ತಮ ಗೌರವ ಪಡೆದುಕೊಂಡರು. ವಿಜಯ್ ಹಜಾರೆ ಟ್ರೋಫಿಯಲ್ಲಿ ವಿಶ್ವ ದಾಖಲೆ ಬರೆದ ಎನ್. ಜಗದೀಶನ್ ಅವರು ಕೇವಲ 90 ಲಕ್ಷ ರೂಪಾಯಿ ಪಡೆದು ಕೆಕೆಆರ್ ಬಳಗ ಸೇರಿಕೊಂಡಿರುವುದು ಅಚ್ಚರಿ ಮೂಡಿಸಿತು.
ಆರ್ಸಿಬಿ ಸಮಾಚಾರ
15 ಆವೃತ್ತಿಯಲ್ಲಿ ಆಡಿಯೂ ಒಂದೇ ಒಂದು ಟ್ರೋಫಿ ಗೆಲ್ಲದ ತಂಡಗಳಲ್ಲಿ ಒಂದಾಗಿರುವ ಆರ್ಸಿಬಿ ಹರಾಜಿನಲ್ಲಿ ಏಳು ಕೋಟಿ ರೂಪಾಯಿ ಖರ್ಚು ಮಾಡಿ ಏಳು ಆಟಗಾರರನ್ನು ಖರೀದಿ ಮಾಡಿತು. ಇಂಗ್ಲೆಂಡ್ ಬೌಲರ್ ರೀಸ್ ಟೋಪ್ಲೆಗೆ (1.9 ಕೋಟಿ ರೂಪಾಯಿ) ಮೊದಲು ಮಣೆ ಹಾಕಿದ ಆರ್ಸಿಬಿ ಬಳಿಕ ಇಂಗ್ಲೆಂಡ್ ಆಲ್ರೌಂಡರ್ ವಿಲ್ ಜಾಕ್ಸ್ (3.2 ಕೋಟಿ ರೂಪಾಯಿ) ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಮನೀಶ್ ಪಾಂಡೆಯನ್ನು ತಂಡಕ್ಕೆ ಸೇರಿಸುವ ಪ್ರಯತ್ನ ಮಾಡಿದರೂ ಅವರು ಡೆಲ್ಲಿ ಕ್ಯಾಪಿಟಲ್ಸ್ ಬಳಗ ಸೇರಿಕೊಂಡರು. ಉಳಿದಂತೆ ಸಣ್ಣ ಸಣ್ಣ ಮೊತ್ತಕ್ಕೆ ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡರು.
ಇದನ್ನೂ ಓದಿ | IPL Auction | ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಟಾಪ್ 10 ಆಟಗಾರರು ಇವರು