ಮುಂಬಯಿ: ಬುಧವಾರ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧ 70 ರನ್ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಸೆಮಿಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಕೆಲ ಮಾಧ್ಯಮಗಳು ಬಿಸಿಸಿಐ ತನ್ನ ಅನುಕೂಲಕ್ಕೆ ತಕ್ಕಂತೆ ಪಿಚ್ ಸಿದ್ಧಪಡಿಸಿಕೊಂಡಿದೆ ಎಂದು ಸುದ್ದಿ ಬಿತ್ತರಿಸಿದ್ದವು. ಇದಕ್ಕೆ ತಿರುಗೇಟು ನೀಡಿದ ಮಾಜಿ ಆಟಗಾರ ಸುನಿಲ್ ಗವಾಸ್ಕರ್, ಪಿಚ್ ಬದಲಾವಣೆ ಬಗ್ಗೆ ಮಾತನಾಡುವುದನ್ನು ಮೊದಲು ನಿಲ್ಲಿಸಿ, ಇದು ಅಸಂಬದ್ಧ ಎಂದು ಹೇಳಿದ್ದಾರೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ಪಂದ್ಯ ಆರಂಭಕ್ಕೂ ಕೆಲವೇ ಗಂಟೆಗಳು ಬಾಕಿ ಇರುವಾಗ ಕೆಲ ಮಾಧ್ಯಮಗಳಲ್ಲಿ ಪಿಚ್ ವಿವಾದದ ಸುದ್ದಿಗಳು ಹರಿದಾಡಿದ್ದವು. ಐಸಿಸಿಗೆ ಮಾಹಿತಿಯನ್ನೇ ನೀಡದೆ ಬಿಸಿಸಿಐ ಭಾರತ ತಂಡಕ್ಕೆ ಅನುಕೂಲಕರವಾದ ಸ್ಲೋ ಪಿಚ್ ನಿರ್ಮಾಣ ಮಾಡಿದೆ ಎಂದು ಎಲ್ಲಡೆ ಸುದ್ದಿಯಾಗಿತ್ತು. ಇದು ಬಾರಿ ಚರ್ಚೆಗೂ ಕಾರಣವಾಗಿತ್ತು. ಇದೇ ವೇಳೆ ಬಿಸಿಸಿಐ ಈ ರೀತಿಯ ವರದಿಗಳನ್ನು ಸಾರಾಸಗಟಾಗಿ ನಿರಾಕರಿಸಿತ್ತು. ಟೂರ್ನಿಯ ನಾಕೌಟ್ ಪಂದ್ಯಗಳ ಪಿಚ್ ಐಸಿಸಿ ಕ್ಯುರೇಟರ್ ಅವರ ಸಮ್ಮುಕ್ಕದಲ್ಲೇ ಸಿದ್ಧಪಡಿಸಲಾಗಿದೆ. ಪಿಚ್ ತಯಾರಿಯಲ್ಲಿ ಬಿಸಿಸಿಐ ಅಧಿಕಾರಿಗಳು ತಲೆ ಹಾಕಿಲ್ಲ ಎಂದು ಸ್ಪಷ್ಟಣೆ ನೀಡಿತ್ತು.
ಇದನ್ನೂ ಓದಿ IND vs NZ: ಹಾಟ್ಸ್ಟಾರ್ನಲ್ಲಿ ದಾಖಲೆ ಬರೆದ ಭಾರತ-ನ್ಯೂಜಿಲ್ಯಾಂಡ್ ಸೆಮಿ ಪಂದ್ಯ
ಮೂರ್ಖರು…
ಪಿಚ್ ವಿವಾದದ ಬಗ್ಗೆ ಸುನಿಲ್ ಗವಾಸ್ಕರ್ ಅವರು “ಮೂರ್ಖರು” ಆತಿಥೇಯರ ಮೇಲೆ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಪಂದ್ಯ ಮುಗಿದ ಬಳಿಕದ ವಿಶ್ಲೇಷಣೆಯ ಸಂದರ್ಭದಲ್ಲಿ ಬಹಿರಂಗವಾಗಿಯೇ ಕಿಡಿಕಾರಿದರು. ಪಿಚ್ ಬದಲಾವಣೆಯ ಬಗ್ಗೆ ಮಾತನಾಡುತ್ತಿರುವ ಎಲ್ಲ ಮೂರ್ಖರು ಮೊದಲು ಸುಮ್ಮನಾಗಬೇಕು. ಭಾರತದ ಮೇಲೆ ಇಲ್ಲದೇ ಇರುವ ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಿ ಎಂದು ಗವಾಸ್ಕರ್ ಸುಳ್ಳು ಸುದ್ದಿ ಹಬ್ಬುವವರಿಗೆ ಎಚ್ಚರಿಕೆ ನೀಡಿದ್ದಾರೆ.
"All those morons who were talking about pitch change.." Sunil Gavaskar blasting the Pakistan cricketers and experts 😂pic.twitter.com/fqOfryzecl
— Keh Ke Peheno (@coolfunnytshirt) November 15, 2023
ಐಸಿಸಿ ಪ್ರಕಾರ ಸೆಮಿಫೈನಲ್ ಪಂದ್ಯ ವಾಂಖೆಡೆಯ ಪಿಚ್ ಸಂಖ್ಯೆ 7 ರಲ್ಲಿ ಆಡಬೇಕಿತ್ತು. ಅದು ತಾಜಾ ಪಿಚ್ ಆಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಈ ಪಿಚ್ ಬದಲಾಯಿಸಿ ಲೀಗ್ ಪಂದ್ಯಗಳು ನಡೆದ ಪಿಚ್ ಸಂಖ್ಯೆ 6ರಲ್ಲಿ ನಡೆಸಲಾಗಿದೆ, ಇದು ತುಂಬ ಸ್ಲೋ ಪಿಚ್ ಆಗಿದೆ ಎಂದು ಆಂಗ್ಲ ಮಾಧ್ಯವಮೊಂದು ವರದಿ ಮಾಡಿತ್ತು.
ಫೈನಲ್ ಪಂದ್ಯದ ಪಿಚ್ ಕೂಡ ಬದಲಾವಣೆ
ಭಾರತ ತಂಡ ಫೈನಲ್ ಪ್ರವೇಶಿಸಿದರೂ ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್ ಪಂದ್ಯದ ಪಿಚ್ ಕೂಡ ಬದಲಾವಣೆ ಮಾಡಲಾಗುವುದು ಎಂಬ ಆರೋಪವೂ ಕೇಳಿ ಬಂದಿತ್ತು. ಭಾರತ ಫೈನಲ್‌ಗೆ ಬಂದರೆ, ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿಧಾನಗತಿಯ ಪಿಚ್ ನಿರೀಕ್ಷಿಸಲಾಗಿದೆ ಎಂದು ವರದಿಯೊಂದು ಹೇಳಿತ್ತು. ಇದೆಲ್ಲದಕ್ಕೂ ಗವಾಸ್ಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವತಂತ್ರ ಪಿಚ್ ಸಲಹೆಗಾರ ಆ್ಯಂಡಿ ಅಟ್ಕಿನ್ಸನ್ ಅವರ ನೇತೃತ್ವದಲ್ಲೇ ಮಾಡಲಾಗಿದೆ. ಬೇಕಿದ್ದರೆ ಅವರನ್ನೇ ಕೇಳಿ ಎಂದು ಚಾಟಿ ಬೀಸಿದ್ದಾರೆ.