Site icon Vistara News

All-Weather Cricket Stadium: ಮಳೆ ಬಂದರೂ ಪಂದ್ಯ ನಿಲ್ಲದು; ಆಸೀಸ್​ನಲ್ಲಿ ನಿರ್ಮಾಣಗೊಳ್ಳಲಿದೆ ಹೊಸ ಕ್ರಿಕೆಟ್ ಸ್ಟೇಡಿಯಂ

All-Weather Cricket

All-Weather Cricket Stadium: Check Special Features And Other Details Here

ಸಿಡ್ನಿ: ಮಳೆ ಬಂದರೂ ಕೂಡ ಪಂದ್ಯಗಳನ್ನು ಯಾವುದೇ ಅಡೆತಡೆ ಇಲ್ಲದೆ ಆಯೋಜಿಸಲು ಅನುಕೂಲವಾಗುವಂತಹ ಒಳಾಂಗಣ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವ ಸಾಹಸಕ್ಕೆ ಆಸ್ಟ್ರೇಲಿಯಾ(Australia ) ಸರ್ಕಾರ ಕೈ ಹಾಕಿದೆ. ವಿಶ್ವದ ಮೊದಲ ಆಲ್-ವೆದರ್ ಕ್ರಿಕೆಟ್ ಸ್ಟೇಡಿಯಂ(All-Weather Cricket Stadium) ಇದಾಗಲಿದೆ.

ಈ ಸ್ಟೇಡಿಯಂನ ವಿನ್ಯಾಸಗಳ ಸಾಂಕೇತಿಕ ಫೋಟೊಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಸ್ಟೇಡಿಯಂನ ಮೇಲ್ಛಾವಣಿಗೆ ಗೋಲಾಕಾರದಲ್ಲಿ ಗ್ಲಾಸ್​ಗಳನ್ನು ನೀಡಲಾಗಿದೆ. ಹೀಗಾಗಿ ಮಳೆಯ ನಡುವೆಯೂ ಪಂದ್ಯವು ಸರಾಗವಾಗಿ ನಡೆಯಲಿದೆ. ಈ ಸ್ಟೇಡಿಯಂನಲ್ಲಿ 23,000-ಆಸನಗಳು ಇರಲಿದ್ದು, ಕ್ರಿಕೆಟ್ ಪಂದ್ಯಗಳು ಇಲ್ಲದ ಸಮಯದಲ್ಲಿ ಇತರೆ ಕ್ರೀಡೆಗಳಿಗೂ ಬಳಸುವಂತಹ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸ್ಟೇಡಿಯಂ ನಿರ್ಮಾಣಕ್ಕೆ ತಗಲುವು ಅಂದಾಜು ವೆಚ್ಚ ಮತ್ತು ಯಾವಾಗ ಕಾಮಗಾರಿ ಶುರುವಾಗಲಿದೆ ಎನ್ನುವ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಸದ್ಯ ಕಾಕ್ಸ್ ಆರ್ಕಿಟೆಕ್ಚರ್ ಸಿಇಒ ಅಲಿಸ್ಟೈರ್ ರಿಚರ್ಡ್‌ಸನ್ ಅವರು, ಈ ಕ್ರೀಡಾಂಗಣದ ವಿನ್ಯಾಸವು ಎಲ್ಲಾ ಸಮಯದಲ್ಲೂ ಕ್ರಿಕೆಟ್ ಆಡಲು ಅನುಕೂಲವಾಗುವಂತೆ ಮಾಡಲಾಗುವುದು, ವಿಶೇಷವಾಗಿ ಇದರ ಮೇಲ್ಛಾವಣಿಯು ಅತೀ ಎತ್ತರದಲ್ಲಿರಲಿದೆ ಎಂದು ಹೇಳಿದ್ದಾರೆ.


ಮೆಲ್ಬೋರ್ನ್​ನಲ್ಲಿ ಮೇಲ್ಛಾವಣಿ ಮುಚ್ಚುವಂತಹ ಟೆನಿಸ್​ ಕೋರ್ಟ್​​​ ಇದೆ. ಇದೀಗ ಕ್ರಿಕೆಟ್​ನಲ್ಲಿಯೂ ಇದೇ ರೀತಿಯ ಸ್ಟೇಡಿಯಂ ನಿರ್ಮಾಣಕ್ಕೆ ಆಸೀಸ್​ ಸರ್ಕಾರ ಮುಂದಾಗಿದೆ. ಆದರೆ ಈ ಸ್ಟೇಡಿಯಂ ಕ್ರಿಕೆಟ್​ ಆಡಲು ನೆರವಾಗಲಿದೆಯಾ ಎನ್ನುವುದು ಕ್ರಿಕೆಟ್​ ಅಭಿಮಾನಿಗಳ ಸಹಜ ಪ್ರಶ್ನೆಯಾಗಿದೆ. ಏಕೆಂದರೆ ಬ್ಯಾಟರ್​ಗಳು ಚೆಂಡನ್ನು ಎಷ್ಟು ಎತ್ತರಕ್ಕೆ ಹೊಡೆಯಬಲ್ಲರು ಎಂದು ಊಹಿಸಲು ಅಸಾಧ್ಯ. ಚೆಂಡು ಮೇಲ್ಛಾವಣಿಗೆ ಬಡಿಯುವ ಸಾಧ್ಯತೆಯೂ ಅಧಿಕವಾಗಿದೆ.

ಇದನ್ನೂ ಓದಿ Team India : ಭಾರತ ತಂಡಕ್ಕೆ ಸಿಕ್ಕಿದ 125 ಕೋಟಿ ರೂ. ಬಹುಮಾನದಲ್ಲಿ ಯಾರಿಗೆ ಎಷ್ಟು? ಮಾಹಿತಿ ಬಹಿರಂಗ

ಇತ್ತೀಚೆಗೆ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ (ಎಚ್‌ಪಿಸಿಎ)ಯ ಕ್ರೀಡಾಂಗಣದಲ್ಲಿ ಹೈಬ್ರಿಡ್‌ ಕ್ರಿಕೆಟ್‌ ಅಳವಡಿಸಲಾಗಿತ್ತು. ಇದು ಭಾರತದ ಮೊದಲ ಹೈಬ್ರಿಡ್‌ ಕ್ರಿಕೆಟ್‌ ಪಿಚ್‌ ಆಗಿದೆ. ನೆದರ್‌ಲೆಂಡ್ಸ್‌ ಮೂಲದ ಎಸ್‌ಐಎಸ್‌ ಸಂಸ್ಥೆಯು ಈ ಪಿಚ್‌ ಅಳವಡಿಕೆ ಮಾಡಿದ್ದು, ಶೇ.95ರಷ್ಟು ನೈಸರ್ಗಿಕ ಟರ್ಫ್‌ ಜತೆಗೆ ಶೇ.5ರಷ್ಟು ಸಿಂಥೆಟಿಕ್‌ ಫೈಬರನ್ನು ಈ ಪಿಚ್‌ ಒಳಗೊಂಡಿರಲಿದೆ. ಹೈಬ್ರಿಡ್‌ ಪಿಚ್‌ ಸಾಮಾನ್ಯ ಪಿಚ್‌ಗಿಂತ ಹೆಚ್ಚು ಸಮಯ ಬಳಕೆಗೆ ಯೋಗ್ಯವಾಗಿರಲಿದೆ. ಚೆಂಡಿನ ಬೌನ್ಸ್‌ನಲ್ಲಿ ಯಾವುದೇ ಏರುಪೇರು ಇರುವುದಿಲ್ಲ. ಪಿಚ್‌ ಮೇಲಿನ ತೇವಾಂಶವನ್ನು ಅಗತ್ಯ ಎನಿಸಿದಷ್ಟು ಮಟ್ಟಕ್ಕೆ ಕಾಯ್ದುಕೊಳ್ಳಬಹುದಾಗಿದೆ. ಇದರಿಂದಾಗಿ ಮೈದಾನ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆಯಾಗಲಿದೆ. ಜತೆಗೆ ಆಟದ ಗುಣಮಟ್ಟವೂ ಹೆಚ್ಚಾಗಲಿದೆ. ಈಗಾಗಲೇ ಈ ಪಿಚ್​ಗಳು ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್‌ ಹಾಗೂ ದಿ ಓವಲ್‌ ಕ್ರೀಡಾಂಗಣಗಳಲ್ಲಿ ಬಳಕೆಯಾಗುತ್ತಿದೆ.

ಈ ಪಿಚ್​ನಲ್ಲಿ ಸದ್ಯ ಐಪಿಎಲ್​ ಪಂದ್ಯಗಳು ನಡೆಯುವುದಿಲ್ಲ. ಕೇವಲ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ದೇಶೀಯ ಪಂದ್ಯಗಳು ಲಭ್ಯವಿಲ್ಲ. ಇತ್ತೀಚೆಗೆ ಟಿ20 ಹಾಗೂ ಏಕದಿನ ಪಂದ್ಯಗಳಿಗೆ ಹೈಬ್ರಿಡ್‌ ಪಿಚ್‌ಗಳ ಬಳಕೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ) ಒಪ್ಪಿಗೆ ನೀಡಿತ್ತು. ಹೈಬ್ರಿಡ್‌ ಪಿಚ್‌ಗಳ ಪರಿಚಯದಿಂದ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಯಾಗುವುದಂತು ನಿಜ.

Exit mobile version