ವಾರಾಣಸಿ: ವಿಶ್ವನಾಥನ ಸನ್ನಿಧಿಯಾಗಿರುವ ವಾರಾಣಸಿಯಲ್ಲಿ ಭವ್ಯ ಹಾಗೂ ಅತ್ಯಾಧುನಿಕ ಸೌಲಭ್ಯಗಳುಳ್ಳ ಕ್ರಿಕೆಟ್ ಸ್ಟೇಡಿಯಂ (Varanasi Stadium) ನಿರ್ಮಿಸಲಾಗುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ದೇವರ ನಗರಿ ಎಂದೇ ಖ್ಯಾತಿಯಾಗಿರುವ ವಾರಾಣಸಿಯ ಕ್ರೀಡಾಂಗಣವೂ ಶಿವನಿಂದ ಸ್ಫೂರ್ತಿಗೊಂಡು ನಿರ್ಮಿಸಲಾಗುತ್ತಿದೆ. ಕ್ರೀಡಾಂಗಣದ ಪ್ರತಿಯೊಂದು ವಿಭಾಗದಲ್ಲೂ ಶಿವನ ಛಾಯೆ ಇದೆ. ಹಾಗಾಗಿ, ವಾರಾಣಸಿ ಕ್ರೀಡಾಂಗಣವು ವಿಶೇಷವಾಗಿದೆ. ಇದರ ಎಲ್ಲ ವೈಶಿಷ್ಟ್ಯಗಳು, ಶಿವನ ಛಾಯೆ ಸೇರಿ ಹಲವು ಮಾಹಿತಿ ಇಲ್ಲಿದೆ.
ತ್ರಿಶೂಲ, ಡಮರು, ಶಿವತಾಂಡವ
ವಾರಾಣಸಿಯಲ್ಲಿ ನಿರ್ಮಿಸಲಾಗುತ್ತಿರುವ ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾಂಗಣದ ವಿನ್ಯಾಸವು ಶಿವನಿಂದ ಸ್ಫೂರ್ತಿಗೊಂಡಿದೆ. ಕ್ರೀಡಾಂಗಣದ ಮುಂಭಾಗದಲ್ಲಿ ನಿರ್ಮಿಸಲಿರುವ ಮಾಧ್ಯಮ ಕೇಂದ್ರ (Media Centre) ಶಿವನ ಕೈಯಲ್ಲಿರುವ ಡಮರುಗದಂತೆ ಇರಲಿದೆ.
ಅಷ್ಟೇ ಅಲ್ಲ, ಸ್ಟೇಡಿಯಂ ಚಾವಣಿಯು ಚಂದ್ರನ ಆಕಾರದಲ್ಲಿ, ಪ್ರವೇಶ ದ್ವಾರವು ಬಿಲ್ವಪತ್ರೆ ಹಾಗೂ ಹೊನಲು ಬೆಳಕಿನ ಪಂದ್ಯದ ವೇಳೆ ಝಳಪಿಸುವ ಫ್ಲಡ್‌ಲೈಟ್ ತ್ರಿಶೂಲದ ಆಕಾರದಲ್ಲಿ ಇರಲಿವೆ. ಹಾಗಾಗಿ, ಇಡೀ ಸ್ಟೇಡಿಯಂ ಶಿವನಿಂದ ಸ್ಫೂರ್ತಿಗೊಂಡಂತೆ ನಿರ್ಮಾಣವಾಗಲಿದೆ.
ಸ್ಟೇಡಿಯಂನಲ್ಲಿ ಏನೆಲ್ಲ ಇರಲಿದೆ?
ವಾರಾಣಸಿಯಲ್ಲಿ ನಿರ್ಮಿಸಲಾಗುತ್ತಿರುವ ಕ್ರಿಕೆಟ್ ಸ್ಟೇಡಿಯಂ ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾಂಗಣವಾಗಿದೆ. ಇದರಲ್ಲಿ 30 ಸಾವಿರ ಪ್ರೇಕ್ಷಕರು ಕುಳಿತು ಪಂದ್ಯವನ್ನು ವೀಕ್ಷಿಸಬಹುದಾಗಿದೆ. ರಾಜಾತಲಾಬ್ ಪ್ರದೇಶದ ರಿಂಗ್ ರೋಡ್ ಬಳಿ ಇದನ್ನು ನಿರ್ಮಿಸಲಾಗಿದ್ದು, ಏಳು ಪಿಚ್‌ಗಳು ಇರಲಿವೆ.
ಪಂದ್ಯದ ವೇಳೆ ಮಳೆ ಬಂದರೆ ಕ್ಷಿಪ್ರವಾಗಿ ನೀರು ಹೀರಿಕೊಳ್ಳುವ, ಅತ್ಯಾಧುನಿಕ ಸೌಕರ್ಯಗಳುಳ್ಳ ಡ್ರೆಸ್ಸಿಂಗ್ ರೂಮ್‌ಗಳು, ಮೂರು ಪ್ರಾಕ್ಟೀಸ್ ಪಿಚ್‌ಗಳು ಸೇರಿ ಹಲವು ಸೌಲಭ್ಯಗಳಿವೆ. 2025ರ ಡಿಸೆಂಬರ್‌ನಲ್ಲಿ ಕ್ರೀಡಾಂಗಣಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ICC World Cup: ಶೀಘ್ರದಲ್ಲೇ ಚಿನ್ನಸ್ವಾಮಿ ಸ್ಟೇಡಿಯಂಗೆ ಹೈಟೆಕ್ ಸ್ಪರ್ಶ
ಕಾಶಿ ವಿಶ್ವನಾಥನ ಊರಿನಲ್ಲಿ ನಿರ್ಮಾಣವಾಗುತ್ತಿರುವ ಕ್ರಿಕೆಟ್ ಸ್ಟೇಡಿಯಂಗೆ ಸುಮಾರು 451 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು 121 ಕೋಟಿ ರೂ. ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 330 ಕೋಟಿ ರೂ. ವಿನಿಯೋಗಿಸಲಿದೆ.