Site icon Vistara News

ICC World Cup 2023 : ವಿಶ್ವ ಕಪ್​ ನಡೆಯುವ 10 ಸ್ಟೇಡಿಯಮ್​ಗಳ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ಎಲ್ಲ ವಿವರ

HPCA Stadium

ಬೆಂಗಳೂರು: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ನ 13 ನೇ (ICC World Cup 2023) ಆವೃತ್ತಿಗೆ ಭಾರತ ಆತಿಥ್ಯ ವಹಿಸುತ್ತಿದೆ. ಇದೇ ಮೊದಲ ಬಾರಿಗೆ ಬಿಸಿಸಿಐ ಏಕಾಂಗಿಯಾಗಿ ಟೂರ್ನಿಯನ್ನು ಆಯೋಜಿಸುತ್ತಿದೆ.. ಈ ಹಿಂದೆ ಎರಡೆರಡು ದೇಶಗಳಿಗೆ ಅತಿಥ್ಯದ ಹಕ್ಕು ನೀಡಲಾಗುತ್ತಿತ್ತು. ಆದರೆ ಈ ಸಲ ಭಾರತವೊಂದರಲ್ಲೇ ಪೂರ್ತಿ ಟೂರ್ನಿ ನಡೆಯಲಿದೆ. ಬಿಸಿಸಿಐ ಕೂಡ ಟೂರ್ನಿ ಆಯೋಜನೆಗೆ ಸಂಪೂರ್ಣವಾಗಿ ಸಿದ್ಧತೆ ಮಾಡಿಕೊಂಡಿದೆ. ಶ್ರೀಮಂತ ಕ್ರಿಕೆಟ್​ ಸಂಸ್ಥೆಯಾಗಿರುವ ಬಿಸಿಸಿಐ ಟೂರ್ನಿಯ ಯಶಸ್ಸಿಗೆ ಅನೇಕ ಯೋಜನೆಗಳನ್ನು ಕೈಗೊಂಡಿದೆ. ಉದ್ಘಾಟನಾ ಕಾರ್ಯಕ್ರಮದಿಂದ ಹಿಡಿದು ಸಮಾರೋಪದ ತನಕ ವಿಶೇಷವಾಗಿ ಅಯೋಜಿಸಲು ಯೋಜನೆ ರೂಪಿಸಿಕೊಂಡಿದೆ.

ಭಾರತ ಮೊದಲೇ ಅಪ್ಪಟ ಕ್ರಿಕೆಟ್​ ಪ್ರೇಮಿಗಳ ದೇಶ. ಹೀಗಾಗಿ ಟೂರ್ನಿ ಭರ್ಜರಿಯಾಗಿ ನಡೆಯುವುದರಲ್ಲಿ ಯಾವುದೇ ಸಂಶಯ ಇಲ್ಲ. ಹೀಗಾಗಿ ಒಟ್ಟು 10 ತಾಣಗಳಲ್ಲಿ ಪಂದ್ಯಗಳನ್ನು ಆಯೋಜಿಸುವ ಮೂಲಕ ದೇಶದ ಬಹುತೇಕ ಪ್ರದೇಶಗಳ ಅಭಿಮಾನಿಗಳಿಗೆ ಕ್ರಿಕೆಟ್​ ಹಬ್ಬದ ರಸದೌತಣ ಉಣಬಡಿಸಲು ಬಿಸಿಸಿಐ ಮುಂದಾಗಿದೆ. ಹಾಗಾದರೆ ವಿಶ್ವ ಕಪ್​ ನಡೆಯುವ ಸ್ಟೇಡಿಯಮ್​ಗಳು ಯಾವುವು, ಅವುಗಳ ವಿಶೇಷತೆಗಳೇನು ಎಂಬುದನ್ನು ನೋಡೋಣ.

ನರೇಂದ್ರ ಮೋದಿ ಸ್ಟೇಡಿಯಮ್​ ಅಹಮದಾಬಾದ್​

ಗುಜರಾತ್​ನ ಅಹಮದಾಬಾದ್​ನಲ್ಲಿ ಈ ಕ್ರೀಡಾಂಗಣದ ವಿಶ್ವದ ಅತಿದೊಡ್ಡ ಕ್ರೀಡಾ ವೇದಿಕೆ. ಏಕ ಕಾಲಕ್ಕೆ 1.32 ಲಕ್ಷ ಮಂದಿ ಪಂದ್ಯ ವೀಕ್ಷಣೆ ಮಾಡಲು ಸಾಧ್ಯವಿದೆ. ಕ್ರಿಕೆಟ್​ ವಿಚಾರಕ್ಕೆ ಬಂದರೂ ವಿಶ್ವದ ಬೃಹತ್​ ಹಾಗೂ ಸುಸಜ್ಜಿತ ಸ್ಟೇಡಿಯಮ್​. ಇದು ಹಿಂದಿನ ಮೊಟೆರಾ ಸ್ಟೇಡಿಯಮ್ ಆಗಿತ್ತು. ಅಭಿವೃದ್ಧಿ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರು ಇಡಲಾಗಿದೆ. ಈ ಸ್ಟೇಡಿಯಮ್​ ಈ ಬಾರಿಯ ವಿಶ್ವ ಕಪ್​ನಲ್ಲಿ ಅತಿ ಹೆಚ್ಚು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಆರಂಭಿಕ ಪಂದ್ಯ, ಪ್ಲೇಆಫ್​ ಪಂದ್ಯಗಳು ಹಾಗೂ ಫೈನಲ್ ಇಲ್ಲೇ ನಡೆಯಲಿವೆ.

2021ರಲ್ಲಿ ನವೀಕರಿಸಲಾದ 132,000 ಸಾಮರ್ಥ್ಯದ ಸ್ಥಳವು ಕ್ರಿಕೆಟ್​ ಇತಿಹಾಸಕ್ಕೆ ಹೊಸತೇನಲ್ಲ. ಮಾರ್ಚ್ 1987ರಲ್ಲಿ, ಸುನಿಲ್ ಗವಾಸ್ಕರ್ ಈ (ಹಿಂದಿನ ಸರ್ದಾರ್​ ವಲ್ಲಭಾಬಾಯ್​ ಪಟೇಲ್​) ಕ್ರೀಡಾಂಗಣದಲ್ಲಿ 10,000 ಟೆಸ್ಟ್ ರನ್​ಗಳ ಗಡಿದಾಟಿದ ವಿಶ್ವದ ಮೊದಲ ಬ್ಯಾಟರ್​ ಎಂಬ ಖ್ಯಾತಿ ಪಡೆದಿದ್ದು ಇಲ್ಲೇ. ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತಕ್ಕೆ ಬಂದಿದ್ದ ವೇಳೆ ಅವರು ಇದೇ ಸ್ಟೇಡಿಯಮ್​ನಿಂದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು.

ಕ್ರೀಡಾಂಗಣವು ಕಳೆದ ಆವೃತ್ತಿಯ ಐಪಿಎಲ್ ಫೈನಲ್​ಗೆ ಆತಿಥ್ಯ ವಹಿಸಿದೆ. 2011 ರಲ್ಲಿ, ಭಾರತ ವಿಶ್ವ ಕಪ್ ಗೆದ್ದಿತ್ತು. ಆ ವರ್ಷ ಈ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಸೆಮಿಫೈನಲ್​ನಲ್ಲಿ ಸೋಲಿಸಿದ್ದು ಇಲ್ಲೇ.

ಇಲ್ಲಿನ ಪಿಚ್​ ಆರಂಭದಲ್ಲಿ ವೇಗಿಗಳಿಗೆ ನೆರವಾಗುತ್ತದೆ. ಹಾಗೆಂದು ಸಂಪೂರ್ಣವಾಗಿ ವೇಗಿಗಳಿಗೆ ಮೀಸಲಾಗಿಲ್ಲ. ಸ್ಪಿನ್ನರ್​ಗಳಿಗೂ ಪ್ರಭಾವ ಬೀರಲು ಅವಕಾಶ ನೀಡುವ ಮೂಲಕ ಸಮತೋಲಿತ ಪಿಚ್ ಎನಿಸಿಕೊಂಡಿದೆ. ಬ್ಯಾಟರ್​ಗಳಿಗೂ ಇಲ್ಲಿ ಹಬ್ಬ ಮಾಡುವ ಎಲ್ಲ ಅವಕಾಶ ಉಂಟು.

ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ಇದು ಕರ್ನಾಟಕದಲ್ಲಿರುವ ಏಕೈಕ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​. ಮಹಾನಗರದ ಹೃದಯಭಾಗದಲ್ಲಿಯೇ ಇರುವುದು ಇದರ ಹೆಗ್ಗಳಿಕೆ. ಜತೆಗೆ ಬಸ್​, ಟ್ಯಾಕ್ಸಿ ಹಾಗೂ ಮೆಟ್ರೊ ಸೇರಿದಂತೆ ಎಲ್ಲ ಸೇರಿದಂತೆ ಎಲ್ಲ ರೀತಿಯ ಸಾರಿಗೆ ವ್ಯವಸ್ಥೆಯನ್ನು ಒಳಗೊಂಡಿದೆ. ಈ ಕ್ರೀಡಾಂಗಣವು 34,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಚಿನ್ನಸ್ವಾಮಿ ಕ್ರೀಡಾಂಗಣವು ದೇಶದ ಅತ್ಯುತ್ತಮ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದೆ. ಮಳೆ ಎಷ್ಟೇ ಜೋರಾಗಿ ಬಂದರೂ ಕೇವಲ 15 ನಿಮಿಷಗಳ ನಂತರ ಸಬ್ ಏರ್ ವ್ಯವಸ್ಥೆಯು ಮೂಲಕ ಸ್ಟೇಡಿಯಮ್ ಅನ್ನು ಆಟಕ್ಕೆ ಸಜ್ಜುಗೊಳಿಸಲು ಸಾಧ್ಯವಿದೆ. ಈ ವರ್ಷದ ಆರಂಭದಲ್ಲಿ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಪಂದ್ಯ ಪ್ರಾರಂಭವಾಗುವ ಮೊದಲು ಭಾರಿ ಮಳೆ ಸುರಿದ ಹೊರತಾಗಿಯೂ ಪೂರ್ಣ ಪಂದ್ಯ ಆಡಿಸಲಾಗಿತ್ತು

ಇದನ್ನೂ ಓದಿ : ICC World Cup 2023: ವಿಶ್ವಕಪ್​ ಆಡುವ 10 ತಂಡಗಳ ಆಟಗಾರರ ಪಟ್ಟಿ

ಐದು ದಶಕಗಳಷ್ಟು ಹಳೆಯದಾದ ಈ ಕ್ರೀಡಾಂಗಣವು ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ವಿವಿಯನ್ ರಿಚರ್ಡ್ಸ್ ಅವರ ಚೊಚ್ಚಲ ಟೆಸ್ಟ್ ಪಂದ್ಯ ಮತ್ತು 1996 ರ ವಿಶ್ವ ಸುಂದರಿ ಸ್ಪರ್ಧೆಯಂತಹ ಪ್ರಮುಖ ಘಟನೆಗಳಿಗೆ ಆತಿಥ್ಯ ವಹಿಸಿದೆ. ಚಿನ್ನಸ್ವಾಮಿ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ನ ತವರು ಮೈದಾನವಾಗಿದೆ. ಸುಮಾರು 65 ಮೀಟರ್ ಬೌಂಡರಿ ಗಾತ್ರಗಳನ್ನು ಹೊಂದಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಹಾಲಿ ಟೂರ್ನಿಯಲ್ಲಿ ಬಿಗ್ ಸ್ಕೋರ್​ ಪಂದ್ಯಗಳಿಗೆ ಸಾಕ್ಷಿಯಾಗುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿನ ಪಿಚ್​​ ಬ್ಯಾಟರ್​ಗಳ ಸ್ವರ್ಗ. ಬೌಲರ್​ಗಳಿಗೆ ದೊಡ್ಡ ನಿರೀಕ್ಷೆ ಹುಟ್ಟಿಸದು. ಆದರೂ ಸ್ಪಿನ್ನರ್​​ಗಳಿಗೆ ಸ್ವಲ್ಪ ಕೈ ಚಳಕ ತೋರಬಹುದು.

ಈ ಬಾರಿ ಐದು ಪಂದ್ಯಗಳಿಗೆ ಈ ಸ್ಟೇಡಿಯಮ್​ ಆತಿಥ್ಯ ವಹಿಸಲಿದೆ. ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ (20 ಅಕ್ಟೋಬರ್ 02:00 ಗಂಟೆಗೆ), ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ (26 ಅಕ್ಟೋಬರ್ 02: 00 ಗಂಟೆಗೆ), ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ (04 ನವೆಂಬರ್ 10:30 ಕ್ಕೆ), ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ (09 ನವೆಂಬರ್ ಮಧ್ಯಾಹ್ನ 02:00 ಕ್ಕೆ), ಭಾರತ-ನೆದರ್ಲ್ಯಾಂಡ್ಸ್ (12 ನವೆಂಬರ್ ಮಧ್ಯಾಹ್ನ 02:00 ಗಂಟೆಗೆ),

2011ರಲ್ಲಿ ಐರ್ಲೆಂಡ್​​ನ ಕೆವಿನ್ ಒ’ಬ್ರಿಯಾನ್ ಏಕದಿನ ವಿಶ್ವಕಪ್​ನಲ್ಲಿ ಕೇವಲ 50 ಎಸೆತಗಳಲ್ಲಿ ಅತಿ ವೇಗದ ಶತಕ ಬಾರಿಸಿದ್ದರು. ಈ ಕ್ರೀಡಾಂಗಣವು 2000ರಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ನೆಲೆಯಾಗಿದೆ.

ಎಂ.ಎ. ಚಿದಂಬರಂ ಕ್ರೀಡಾಂಗಣ, ಚೆನ್ನೈ

ಹಿಂದೂ ಮಹಾಸಾಗರದ ಪಕ್ಕದಲ್ಲಿರುವ ಎಂ.ಎ.ಚಿದಂಬರಂ ಕ್ರೀಡಾಂಗಣವು ಎಲ್ಲಾ ಸ್ಥಳಗಳಲ್ಲಿ ಅತ್ಯಂತ ಆರ್ದ್ರ ವಾತಾವರಣ ಹೊಂದಿರುವ ಕ್ರಿಕೆಟ್​ ಸ್ಟೇಡಿಯಮ್ ಆಗಿದೆ. 1952 ರಲ್ಲಿ ಭಾರತದ ನಾಯಕ ವಿಜಯ್ ಹಜಾರೆ ಅವರ ತಂಡವು ಡೊನಾಲ್ಡ್ ಕಾರ್ ಅವರ ನೇತೃತ್ವದ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತವು ಟೆಸ್ಟ್ ಕ್ರಿಕೆಟ್​​ನಲ್ಲಿ ಮೊದಲ ಗೆಲುವನ್ನು ದಾಖಲಿಸಿದ ಕ್ರೀಡಾಂಗಣ ಇದು.

ಮರೀನಾ ಬೀಚ್​ನಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಈ ಕ್ರೀಡಾಂಗಣ 38,200 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. 1986ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಸಮಬಲ ಟೆಸ್ಟ್ ಪಂದ್ಯ ನಡೆದಿದ್ದು ಇಲ್ಲೇ.

ಚೆಪಾಕ್ ಕ್ರೀಡಾಂಗಣ ಎಂದೂ ಕರೆಯಲ್ಪಡುವ ಮುತ್ತಯ್ಯ ಅಣ್ಣಾಮಲೈ (ಎಂಎ) ಚಿದಂಬರಂ ಕ್ರೀಡಾಂಗಣಕ್ಕೆ ಬಿಸಿಸಿಐನ ಮಾಜಿ ಅಧ್ಯಕ್ಷ ಎಂ.ಎ.ಚಿದಂಬರಂ ಚೆಟ್ಟಿಯಾರ್ ಅವರ ಹೆಸರನ್ನು ಇಡಲಾಗಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಂತರ ಇದು ಭಾರತದ ಎರಡನೇ ಅತ್ಯಂತ ಹಳೆಯ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಎಂಎ ಚಿದಂಬರಂ ಕ್ರೀಡಾಂಗಣವು ಎರಡನೇ ಅತ್ಯಂತ ಯಶಸ್ವಿ ಮತ್ತು ಅತ್ಯಂತ ಜನಪ್ರಿಉ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ನ ತವರು ಮೈದಾನವಾಗಿದೆ. ಇದು ಮುಂಬರುವ ವಿಶ್ವಕಪ್ ನಲ್ಲಿ 5 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ಭಾರತ-ಆಸ್ಟ್ರೇಲಿಯಾ (08 ಅಕ್ಟೋಬರ್ ಮಧ್ಯಾಹ್ನ 02:00 ಕ್ಕೆ), ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ (13 ಅಕ್ಟೋಬರ್ ಮಧ್ಯಾಹ್ನ 02:00 ಗಂಟೆಗೆ), ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ (18 ಅಕ್ಟೋಬರ್ ಮಧ್ಯಾಹ್ನ 02:00 ಕ್ಕೆ), ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ (23 ಅಕ್ಟೋಬರ್ ಮಧ್ಯಾಹ್ನ 02:00 ಕ್ಕೆ), ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ (27 ಅಕ್ಟೋಬರ್ ಮಧ್ಯಾಹ್ನ 02:00 ಕ್ಕೆ).

ಇದು ಸ್ಪಿನ್ ಬೌಲರ್​ಗಳ ಸ್ವರ್ಗ. ಇಲ್ಲಿ ಸ್ಪಿನ್ನರ್​ಗಳನ್ನು ಎದುರಿಸಲು ಬ್ಯಾಟ್ಸಮನ್​ಗಳು ಹೆದರುತ್ತಾರೆ. ಇಲ್ಲಿಯೂ ಸ್ಪರ್ಧಾತ್ಮಕ ಪಂದ್ಯಗಳು ನಡೆಯುತ್ತವೆ . ದೊಡ್ಡ ಸ್ಕೋರ್​​ನ ಪಂದ್ಯಗಳಿಗೆ ಆಸ್ಪದವಿಲ್ಲ.

ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ

ಭಾರತದ ರಾಜಧಾನಿಯಲ್ಲಿರುವ ಈ ಸ್ಟೇಡಿಯಯಮ್​ ದೇಶದ ಅತ್ಯಂತ ಐತಿಹಾಸಿಕ ಕ್ರಿಕೆಟ್​ ತಾಣಗಳಲ್ಲಿ ಒಂದಾಗಿದೆ. 2005ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 35ನೇ ಶತಕ ಬಾರಿಸುವ ಮೂಲಕ ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಮುರಿದಿದ್ದು ಇಲ್ಲೆ. ಕ್ರೀಡಾಂಗಣವು ಈ ಹಿಂದೆ ನಿಧಾನಗತಿಯ ಪಿಚ್​ಗಳನ್ನು ಹೊಂದಿತ್ತು. ಆದರೆ ಸ್ಟೇಡಿಯಮ್​ ನವೀಕರಣದ ಬಳಿಕ ದೊಡ್ಡ ಸ್ಕೋರಿಂಗ್ ಪಂದ್ಯಗಳು ನಡೆಯುತ್ತಿವೆ.

ಮೂಲತಃ 1883 ರಲ್ಲಿ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣವಾಗಿ ಸ್ಥಾಪಿಸಲಾಯಿತು. ಹತ್ತಿರದ ಕೋಟ್ಲಾ ಕೋಟೆಯ ಹೆಸರನ್ನು ಇಡಲಾಗಿದೆ, ಇದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಂತರ ಭಾರತದ ಎರಡನೇ ಅತ್ಯಂತ ಹಳೆಯ ಸಕ್ರಿಯ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ. ಸೆಪ್ಟೆಂಬರ್ 12, 2019 ರಂದು, ಮಾಜಿ ಡಿಡಿಸಿಎ ಅಧ್ಯಕ್ಷ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನೆನಪಿಗಾಗಿ ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡಲಾಯಿತು. 2017 ರ ಹೊತ್ತಿಗೆ, ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡವು 28 ವರ್ಷಗಳಿಂದ ಈ ಮೈದಾನದಲ್ಲಿ ಟೆಸ್ಟ್ ಪಂದ್ಯವನ್ನು ಮತ್ತು 10 ವರ್ಷಗಳಿಗಿಂತ ಹೆಚ್ಚು ಕಾಲ ಏಕದಿನ ಪಂದ್ಯವನ್ನು ಸೋತಿಲ್ಲ.

ಇಲ್ಲಿ ಈ ಬಾರಿ ಐದು ಪಂದ್ಯಗಳು ನಡೆಯಲಿವೆ. ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ (07 ಅಕ್ಟೋಬರ್ 02:00 ಗಂಟೆಗೆ), ಭಾರತ-ಅಫ್ಘಾನಿಸ್ತಾನ, (11 ಅಕ್ಟೋಬರ್ 02:00 ಗಂಟೆಗೆ), ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್ (15 ಅಕ್ಟೋಬರ್ ಮಧ್ಯಾಹ್ನ 02:00 ಗಂಟೆಗೆ), ಆಸ್ಟ್ರೇಲಿಯಾ ವಿರುದ್ಧ ನೆದರ್ಲ್ಯಾಂಡ್ಸ್ (25 ಅಕ್ಟೋಬರ್ ಮಧ್ಯಾಹ್ನ 02:00 ಗಂಟೆಗೆ), ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ (06 ನವೆಂಬರ್ ಮಧ್ಯಾಹ್ನ 02:00 ಗಂಟೆಗೆ).

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ, ಧರ್ಮಶಾಲಾ

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ದೇಶದ ಹೊಸ ಸ್ಟೇಡಿಯಂಗಳಲ್ಲಿ ಒಂದಾಗಿದೆ. 2013 ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಬಳಿಕ ಅಂತರಾಷ್ಟ್ರೀಯ ಸ್ಟೇಡಿಯಮ್​ ಆಗಿ ಹೊರಹೊಮ್ಮಿತು 64 ಮೀಟರ್ ಬೌಂಡರಿಯೊಂದಿಗೆ ಇಲ್ಲಿ ದೊಡ್ಡ ಮೊತ್ತ ಗ್ಯಾರಂಟಿ. ಇದು ಬ್ಯಾಟರ್​ಗಳಿಗೆ ಅನುಕೂಲಕರ. ಸ್ವಲ್ಪ ಮಟ್ಟಿಗೆ ಸ್ಪಿನ್ನರ್​ಗಳಿಗೆ.

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಸಮುದ್ರ ಮಟ್ಟದಿಂದ 1,457 ಮೀಟರ್ ಎತ್ತರದಲ್ಲಿದೆ. ಎಚ್ಪಿಸಿಎ ಕ್ರೀಡಾಂಗಣವು ವಿಶ್ವದ ಅತ್ಯಂತ ಸುಂದರವಾದ ಒಂದಾಗಿದೆ. 2023ರ ಏಕದಿನ ವಿಶ್ವಕಪ್ ಟೂರ್ನಿಗೆ 5 ಪಂದ್ಯಗಳು ಆತಿಥ್ಯ ವಹಿಸಲಿವೆ. ಇಲ್ಲಿ ಐದು ಪಂದ್ಯಗಳು ನಡೆಯಲಿವೆ.

ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ (07 ಅಕ್ಟೋಬರ್ 10:30 ಕ್ಕೆ), ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ (10 ಅಕ್ಟೋಬರ್ 10:30 ಕ್ಕೆ ಬೆಳಿಗ್ಗೆ 10:30), ನೆದರ್ಲ್ಯಾಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ (17 ಅಕ್ಟೋಬರ್ ಮಧ್ಯಾಹ್ನ 02:00 ಕ್ಕೆ), ಭಾರತ-ನ್ಯೂಜಿಲೆಂಡ್ (22 ಅಕ್ಟೋಬರ್ ಮಧ್ಯಾಹ್ನ 02:00 ಗಂಟೆಗೆ), ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ (28 ಅಕ್ಟೋಬರ್ 10:30 ಕ್ಕೆ)

ಈಡನ್ ಗಾರ್ಡನ್ಸ್, ಕೋಲ್ಕತಾ

ನರೇಂದ್ರ ಮೋದಿ ಕ್ರೀಡಾಂಗಣದ ನವೀಕರಣಕ್ಕೆ ಮೊದಲು, ಈಡನ್ ಗಾರ್ಡನ್ಸ್ 68,000 ಪ್ರೇಕ್ಷಕರ ಸಾಮರ್ಥ್ಯದೊಂದಿಗೆ ಭಾರತದ ಅತಿದೊಡ್ಡ ಸ್ಟೇಡಿಯಮ್​ ಎಂಬ ಹೆಗ್ಗಳಿಕೆ ಮಾಡಿತ್ತು. ಇದು 1987 ರಲ್ಲಿ ವಿಶ್ವಕಪ್ ಫೈನಲ್​ಗೆ ಆತಿಥ್ಯ ವಹಿಸಿದ ಮೊದಲ ಕ್ರೀಡಾಂಗಣ ಇದಾಗಿದೆ. ಹೂಗ್ಲಿ ನದಿಯ ಪಕ್ಕದಲ್ಲಿರುವ ಉತ್ಸಾಹಭರಿತ ಪಿಚ್ ಮತ್ತು ಗಾಳಿಯ ಪರಿಸ್ಥಿತಿಗಳು ಕೆಲವು ಅದ್ಭುತ ಏಕದಿನ ಪಂದ್ಯಗಳಿಗೆ ಸಾಕ್ಷಿಯಾಗಲಿದೆ.

1864 ರಲ್ಲಿ ನಿರ್ಮಿಸಲಾದ ಇದು ಭಾರತದ ಅತ್ಯಂತ ಹಳೆಯ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಆಗಾಗ್ಗೆ “ಭಾರತೀಯ ಕ್ರಿಕೆಟ್​​ನ ಮೆಕ್ಕಾ” ಎಂದು ಕರೆಯಲ್ಪಡುವ ಈಡನ್ ಗಾರ್ಡನ್ಸ್ ದೇಶದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ವಿಶ್ವದ ಮೂರನೇ ಅತಿದೊಡ್ಡ ಕ್ರೀಡಾಂಗಣವೂ ಹೌದು. ಇದು 68,000 ಪ್ರೇಕ್ಷಕರನ್ನು ಹಿಡಿದಿಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಬೌಲಿಂಗ್​​ ಹಾಗೂ ಬ್ಯಾಟಿಂಗ್​ಗೆ ಸಮತೋಲಿತವಾಗಿದೆ. ಭಾರತದ ಪಾಲಿಗೂ ನೆಚ್ಚಿನ ಕ್ರೀಡಾಂಗಣ,

ಇದು ಐದು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಬಾಂಗ್ಲಾದೇಶ ವಿರುದ್ಧ ನೆದರ್ಲ್ಯಾಂಡ್ಸ್ (28 ಅಕ್ಟೋಬರ್ 02:00 ಗಂಟೆಗೆ), ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ (31 ಅಕ್ಟೋಬರ್ ಮಧ್ಯಾಹ್ನ 02:00 ಗಂಟೆಗೆ), ಭಾರತ-ದಕ್ಷಿಣ ಆಫ್ರಿಕಾ (05 ನವೆಂಬರ್ ಮಧ್ಯಾಹ್ನ 02:00 ಕ್ಕೆ), ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ (11 ನವೆಂಬರ್ ಮಧ್ಯಾಹ್ನ 02:00 ಗಂಟೆಗೆ) ಸೆಮಿಫೈನಲ್ (16 ನವೆಂಬರ್ ಮಧ್ಯಾಹ್ನ 02:00 ಗಂಟೆಗೆ).

ವಾಂಖೆಡೆ ಕ್ರೀಡಾಂಗಣ, ಮುಂಬೈ

ಭಾರತದ ವೈವಿಧ್ಯತೆಯ ನಗರವಾದ ಮುಂಬೈನಲ್ಲಿರುವ ವಾಂಖೆಡೆ ಕ್ರೀಡಾಂಗಣವು ಅಪ್ರತಿಮ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಥಳವಾಗಿದೆ. ಇದು ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಸೆಮಿಫೈನಲ್ ಪಂದ್ಯಕ್ಕೂ ಆತಿಥ್ಯ ವಹಿಸಲಿದೆ. ಇದು 2011 ರ ಕ್ರಿಕೆಟ್ ವಿಶ್ವಕಪ್​​ಗೆ ಮೊದಲು ಗಣನೀಯ ನವೀಕರಣಕ್ಕೆ ಒಳಗಾಗಿದೆ ಇದು 33,108 ಆಸನ ಸಾಮರ್ಥ್ಯ ಹೊಂದಿದೆ. ಹಿಂದೆ ಈ ಪಿಚ್​​ 45,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿತ್ತು. ಆದರೆ, ನವೀಕರಣದ ಬಳಿಕ ಆಸನ ಸಂಖ್ಯೆಗಳು ಕಡಿಮೆಯಾದವು.

ವಿಶಿಷ್ಟವಾದ ಕೆಂಪು-ಮಣ್ಣಿನ ಪಿಚ್ 1974 ರಲ್ಲಿ ನಿರ್ಮಾಣಗೊಂಡಿದ್ದು. ಕ್ರಿಕೆಟ್​​ನಲ್ಲಿ ಕೆಲವು ಸ್ಮರಣೀಯ ಸಾಧನೆಗಳನ್ನು ಕಂಡಿದೆ. ತನ್ನ ಇತಿಹಾಸದುದ್ದಕ್ಕೂ, ಈ ಕ್ರೀಡಾಂಗಣವು ಹಲವಾರು ಪ್ರತಿಷ್ಠಿತ ಕ್ರಿಕೆಟ್ ಮುಖಾಮುಖಿಗಳಿಗೆ ವೇದಿಕೆಯಾಗಿದೆ.. 2011ರ ಕ್ರಿಕೆಟ್ ವಿಶ್ವಕಪ್​ ಫೈನಲ್ ನಡೆದಿದ್ದು ಇಲ್ಲೇ ಹಾಗೂ ಧೋನಿ ವಿನ್ನಿಂಗ್ ಸಿಕ್ಸರ್ ಹೊಡೆದಿದ್ದು ಇದೇ ಮೈದಾನದಲ್ಲಿದೆ.

ಈ ಕ್ರೀಡಾಂಗಣವು ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತಳಪಾಯ ಹಾಕಿದ ಜಾಗ. ಇದು ಸಮತೋಲಿತ ಪಿಚ್​. ಬೌಲಿಂಗ್​ ಹಾಗೂ ಬ್ಯಾಟಿಂಗ್ ಎರಡಕ್ಕೂ ನೆರವಾಗುತ್ತದೆ. ಆದರೆ, ಇಬ್ಬನಿ ಪರಿಣಾಮ ಇಲ್ಲಿ ಹೆಚ್ಚಿರುತ್ತದೆ.

ಎಂಸಿಎ ಇಂಟರ್​ನ್ಯಾಷನಲ್ ಸ್ಟೇಡಿಯಂ, ಪುಣೆ

37,000 ಕ್ಕೂ ಹೆಚ್ಚು ಆಸನ ಸಾಮರ್ಥ್ಯ ಹೊಂದಿರುವ ಎಂಸಿಎ ಕ್ರೀಡಾಂಗಣವು ಮುಂಬರುವ ವಿಶ್ವಕಪ್​​ನ 5 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. 2007 ರಲ್ಲಿ ಪುಣೆ-ಮುಂಬೈ ಎಕ್ಸ್​ಪ್ರೆಸ್​ ವೇ ಸಮೀಪವಿರು ಈ ಸ್ಟೇಡಿಯಮ್ ಉದ್ಘಾಟನೆಗೊಂಡಿತು. ಇಂಗ್ಲಿಷ್ ವಾಸ್ತುಶಿಲ್ಪಿ ಮೈಕೆಲ್ ಹಾಪ್ಕಿನ್ಸ್ ಇದನ್ನು ನಿರ್ಮಿಸಿದ “ಆಳವಾದ ಬಟ್ಟಲಿನಂತೆ” ನಂತೆ ವಿನ್ಯಾಸಗೊಳಿಸಲಾಗಿದೆ. ಈ ಸ್ಟೇಡಿಯಮ್​ ಐದು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಭಾರತ-ಬಾಂಗ್ಲಾದೇಶ (19 ಅಕ್ಟೋಬರ್ 02:00 ಗಂಟೆಗೆ), ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ (30 ಅಕ್ಟೋಬರ್ ಮಧ್ಯಾಹ್ನ 02:00 ಗಂಟೆಗೆ), ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ (01 ನವೆಂಬರ್ ಮಧ್ಯಾಹ್ನ 02:00 ಗಂಟೆಗೆ), ಇಂಗ್ಲೆಂಡ್ ವಿರುದ್ಧ ನೆದರ್ಲ್ಯಾಂಡ್ಸ್ (08 ನವೆಂಬರ್ ಮಧ್ಯಾಹ್ನ 02:00 ಗಂಟೆಗೆ), ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ (11 ನವೆಂಬರ್ 10:30 ಕ್ಕೆ). ಇದು ಕೂಡ ಸಮತೋಲಿತ ಪಿಚ್. ಮುಂಬಯಿ ರೀತಿ ಇಬ್ಬನಿ ಪರಿಣಾಮ ಇಲ್ಲ. ಆದರೆ, ಸ್ಪಿನ್ನರ್​ಗಳಿಗೆ ಹೆಚ್ಚು ಅನುಕೂಲಕರ.

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್

ಹೈದರಾಬಾದ್​​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಿನಲ್ಲಿರುವ ಈ ಕ್ರೀಡಾಂಗಣವು 15 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. 55,000 ಆಸನ ಸಾಮರ್ಥ್ಯ ಇಲ್ಲಿದೆ. ಈ ಸ್ಟೇಡಿಯಮ್​ನಲ್ಲಿ ತಾಪಮಾನ ಹೆಚ್ಚಿರುತ್ತದೆ. ಬಿಗ್ ಸ್ಕೋರ್ ಮ್ಯಾಚ್​ಗಳನ್ನು ಆಯೋಜಿಸಲು ಸಾಧ್ಯವಿದೆ.

2005 ರಲ್ಲಿ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣವನ್ನು ನಿರ್ಮಿಸುವ ಮೊದಲು, ಹೈದರಾಬಾದ್​ನ ಎಲ್ಲಾ ಅಂತಾರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಆಡಲಾಗುತ್ತಿತ್ತು. 18 ವರ್ಷಗಳಲ್ಲಿ ಕ್ರೀಡಾಂಗಣದ ವ್ಯಾಪ್ತಿ ಗಗನಕ್ಕೇರಿದೆ. ನೆದರ್ಲ್ಯಾಂಡ್ಸ್ ವಿರುದ್ಧ ಪಾಕಿಸ್ತಾನ (06 ಅಕ್ಟೋಬರ್ ಮಧ್ಯಾಹ್ನ 02:00 ಗಂಟೆಗೆ) , ನೆದರ್ಲ್ಯಾಂಡ್ಸ್ ವಿರುದ್ಧ ನ್ಯೂಜಿಲೆಂಡ್ (09 ಅಕ್ಟೋಬರ್ 02:00 ಗಂಟೆಗೆ) ಪಾಕಿಸ್ತಾನ ವಿರುದ್ಧ ಶ್ರೀಲಂಕಾ ,(10 ಅಕ್ಟೋಬರ್ 02:00 ಗಂಟೆಗೆ) ಇಲ್ಲಿ ಭಾರತ ತಂಡಕ್ಕೆ ಯಾವುದೇ ಪಂದ್ಯಗಳು ಇಲ್ಲ.

ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣ, ಲಖನೌ

2017 ರಲ್ಲಿ ನಿರ್ಮಿಸಲಾದ ಲಕ್ನೋದ ಕ್ರಿಕೆಟ್ ಕ್ರೀಡಾಂಗಣವು ಈ ಹಿಂದೆ ಹೆಚ್ಚಿನ ಸಂಖ್ಯೆಯ ಅಂತರರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸಿಲ್ಲ. ಆದರೆ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಕ್ಕೆ ಪರಿಸ್ಥಿತಿಗಳು ಪೂರಕವಾಗಿವೆ. ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕ್ರೀಡಾಂಗಣವನ್ನು ತಮ್ಮ ತವರು ಸ್ಥಳವೆಂದು ಹೇಳಿಕೊಂಡಿದೆ. ಅಕ್ಟೋಬರ್ 12 ರಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕೆ ವೇದಿಕೆ ಸಿದ್ಧವಾಗಲಿದೆ, ಅಲ್ಲಿ ಕ್ರೀಡಾಂಗಣವು ತನ್ನ ಮೊದಲ ವಿಶ್ವಕಪ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಐಪಿಎಲ್​ ಪಂದ್ಯಗಳನ್ನು ವೀಕ್ಷಿಸಿ ಹೇಳುವುದಾದರೆ ನಿಧಾನಗತಿಯ ಪಿಚ್​ ಇದು. ಸಾಧಾರಣ ಸ್ಕೋರ್ ಬಾರಿಸಲೂ ಇಲ್ಲಿ ಸಾಧ್ಯವಾಗುವುದಿಲ್ಲ. ಬೌಲರ್​ಗಳಿಗೆ ಪರಾಕ್ರಮ ಮೆರೆಯಲೂ ಸೂಕ್ತ ಜಾಗ. ಮೈದಾನದಲ್ಲಿ ಪ್ಯಾಚ್​ಗಳು ಹೆಚ್ಚಿವೆ. ಇದು ಭಾರತದ ಐದನೇ ಅತಿದೊಡ್ಡ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, 50,000 ಪ್ರೇಕ್ಷಕರನ್ನು ಹಿಡಿದಿಡುವ ಸಾಮರ್ಥ್ಯವನ್ನು ಹೊಂದಿದೆ.

ಇಲ್ಲಿ ಐದು ವಿಶ್ವ ಕಪ್​ ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ (02 ಅಕ್ಟೋಬರ್ ಮಧ್ಯಾಹ್ನ 02:00 ಕ್ಕೆ), ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ (16 ಅಕ್ಟೋಬರ್ 02:00 ಗಂಟೆಗೆ), ನೆದರ್ಲ್ಯಾಂಡ್ಸ್ ವಿರುದ್ಧ ಶ್ರೀಲಂಕಾ (21 ಅಕ್ಟೋಬರ್ ಮಧ್ಯಾಹ್ನ 02:00 ಗಂಟೆಗೆ), ಭಾರತ-ಇಂಗ್ಲೆಂಡ್ (29 ಅಕ್ಟೋಬರ್ ಮಧ್ಯಾಹ್ನ 02:00 ಕ್ಕೆ), ಅಫ್ಘಾನಿಸ್ತಾನ ವಿರುದ್ಧ ನೆದರ್ಲ್ಯಾಂಡ್ಸ್ (03 ನವೆಂಬರ್ ಮಧ್ಯಾಹ್ನ 02:00 ಗಂಟೆಗೆ).

Exit mobile version