ಮುಂಬಯಿ: ಭಾರತ ಮತ್ತು ಪಾಕಿಸ್ತಾನದ(IND vs PAK) ಮಧ್ಯೆ ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ಸೋತರೆ ಇದನ್ನು ಸಹಿಸಲಾಗದೆ ಪಾಕಿಸ್ತಾನದ ಅಭಿಮಾನಿಗಳು ತಮ್ಮ ಟಿವಿಯನ್ನು ಒಡೆದು ಹಾಕುವುದು ಸರ್ವೆ ಸಾಮಾನ್ಯ. ಸೋಮವಾರ ಭಾರತ ತಂಡ ಪಾಕ್ ವಿರುದ್ಧ ಗೆಲುವು ಕಂಡ ಬಳಿಕ ಇದೇ ವಿಚಾರವಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಪಾಕಿಸ್ತಾನವನ್ನು ಟ್ರೋಲ್ ಮಾಡಿದ್ದಾರೆ.
ಮೊಬೈಲ್ ಕೂಡ ಒಡೆದು ಹೋಗಿರಬಹುದು
ಟ್ವಿಟರ್ನಲ್ಲಿ ಭಾರತ ಗೆಲುವನ್ನು ಸಂಭ್ರಮಿಸಿ ಪಾಕಿಸ್ತಾನವನ್ನು ಟ್ರೋಲ್ ಮಾಡಿರುವ ಇರ್ಫಾನ್ ಪಠಾಣ್,” ಪಾಕಿಸ್ತಾನದಲ್ಲಿ ನೀರವ ಮೌನ ಆವರಿಸಿದೆ. ಈ ಬಾರಿ ಪಾಕಿಸ್ತಾನದ ಅಭಿಮಾನಿಗಳು ತಮ್ಮ ಮನೆಯ ಟಿವಿ ಜತೆಗೆ ಮೊಬೈಲ್ ಕೂಡ ಒಡೆದು ಹೋಗಿರಬಹುದು” ಎಂದು ಹಾಸ್ಯ ಮಾಡಿದ್ದಾರೆ. ಇದಕ್ಕೆ ಅನೇಕ ಭಾರತದ ಅಭಿಮಾನಿಗಳು ಕಮೆಂಟ್ ಕೂಡ ಮಾಡಿದ್ದು ನಿಮ್ಮ ಮಾತು ನಿಜಕ್ಕೂ ಸತ್ಯ ಎಂದು ಬೆಂಬಲಿಸಿದ್ದಾರೆ.
khamoshi chaai hui hai kaafi🤐 lagta hai padosiyo ne Tv ke sath sath mobile bhi tod diye hai…
— Irfan Pathan (@IrfanPathan) September 11, 2023
ಕಳೆದ ವರ್ಷ ಟಿವಿ ಒಡೆದು ಹಾಕಿದ್ದ ಅಭಿಮಾನಿ
ಕಳೆದ ವರ್ಷ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಭಾರತ ತಂಡ ಇನ್ನೇನು ಸೋಲು ಕಂಡಿತು ಎಂದು ಪಾಕಿಸ್ತಾನದ ಅಭಿಮಾನಿಗಳು ಅತಿರೇಕದಿಂದ ಸಂಭ್ರಮಿಸಿದ್ದರು. ಇದೇ ವೇಳೆ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಪರಾಕ್ರಮದಿಂದ ಪಾಕಿಸ್ತಾನ ಆಟಗಾರರ ಸೊಕ್ಕಡಗಿಸಿ ಭಾರತಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟಿದ್ದರು. ಗೆಲ್ಲುವ ಪಂದ್ಯವನ್ನು ಕಳೆದುಕೊಂಡ ಪಾಕ್ ಆಟಗಾರರ ವಿರುದ್ಧ ಪಾಕಿಸ್ತಾನದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದಲ್ಲದೆ ಅಭಿಮಾನಿಯೊಬ್ಬ ಟಿವಿಯನ್ನು ಒಡೆದು ಹಾಕಿದ್ದರು ಈ ವಿಡಿಯೊ ಎಲ್ಲಡೆ ವೈರಲ್ ಆಗಿತ್ತು. ಇದಕ್ಕೆ ಹಲವರು ಇದೊಂದು ಪಂದ್ಯ, ಸೋಲು–ಗೆಲುವನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ IND vs SL: ಇಂದು ಭಾರತಕ್ಕೆ ಹಾಲಿ ಚಾಂಪಿಯನ್ ಲಂಕಾ ಎದುರಾಳಿ; ಗೆದ್ದರೆ ರೋಹಿತ್ ಪಡೆ ಫೈನಲ್ಗೆ
ದಾಖಲೆಯ ಮೊತ್ತದಲ್ಲಿ ಗೆದ್ದ ಟೀಮ್ ಇಂಡಿಯಾ
ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಪರಾಕ್ರಮ ಸಾಧಿಸಿದ ಭಾರತ ತಂಡ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್(Asia Cup 2023) ಸೂಪರ್-4 (Super 4 match) ಹಂತದ ಪಂದ್ಯದಲ್ಲಿ 228 ರನ್ಗಳ ಭರ್ಜರಿ ವಿಜಯ ಸಾಧಿಸಿತು. ಭಾರತ ತಂಡದ ಪರ ವಿರಾಟ್ ಕೊಹ್ಲಿ ( ಅಜೇಯ 122 ರನ್), ಕೆ. ಎಲ್ ರಾಹುಲ್ (ಅಜೇಯ 111 ರನ್) ಅವರ ಸ್ಫೋಟಕ ಬ್ಯಾಟಿಂಗ್ ನಡೆಸಿ ಮಿಂಚಿದರೆ. ಸ್ಪಿನ್ನರ್ ಕುಲ್ದೀಪ್ ಯಾದವ್ (25 ರನ್ಗಳಿಗೆ 5 ವಿಕೆಟ್) ಅವರ ಮಾರಕ ದಾಳಿ ನಡೆಸಿ ಬೌಲಿಂಗ್ನಲ್ಲಿ ಮಿಂಚಿದರು. ಇದು ಭಾರತ ತಂಡಕ್ಕೆ ಏಕದಿನ ಮಾದರಿಯಲ್ಲಿ ಪಾಕಿಸ್ತಾನ ತಂಡದ ವಿರುದ್ದ ಲಭಿಸಿದ ದಾಖಲೆಯ ಅಂತರದ ವಿಜಯವಾಗಿದೆ.
ಸೋಮವಾರ ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 356 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ 32 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 ರನ್ ಬಾರಿಸಿತು. ಹ್ಯಾರಿಸ್ ರವೂಫ್ ಹಾಗೂ ನಾಸಿಮ್ ಶಾ ಬ್ಯಾಟಿಂಗ್ ಮಾಡದ ಕಾರಣ ಪಾಕಿಸ್ತಾನ ತಂಡ ಆಲ್ಔಟ್ ಎಂದು ಪರಿಗಣಿಸಿ ಭಾರತಕ್ಕೆ ಜಯ ನೀಡಲಾಯಿತು. ಇಂದು ಮತ್ತೆ ಭಾರತ ತಂಡ ಶ್ರೀಲಂಕಾ ವಿರುದ್ಧ ಮತ್ತೊಂದು ಸೂಪರ್-4 ಪಂದ್ಯವನ್ನು ಆಡಲಿದೆ.