Site icon Vistara News

IPL 2023 : ಡೆಲ್ಲಿ ಮಾನ ಕಾಪಾಡಿದ ಅಮನ್​, ಗುಜರಾತ್​ ತಂಡಕ್ಕೆ 131 ರನ್​ಗಳ ಗೆಲುವಿನ ಗುರಿ

#image_title

ಅಹಮದಾಬಾದ್​: ಹಕಿಮ್ ಅಮನ್​ ಖಾನ್ (51) ಬಾರಿಸಿದ ಸಂದರ್ಭೋಚಿತ ಅರ್ಧ ಶತಕದ ನೆರವು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್​ 16ನೇ ಆವೃತ್ತಿಯ 44ನೇ ಪಂದ್ಯದಲ್ಲಿ ಲಕ್ನೊ ತಂಡದ ವಿರುದ್ಧ 130 ರನ್​ ಬಾರಿಸಿದೆ. ಆರಂಭಿಕ ಕ್ರಮಾಂಕದ ಬ್ಯಾಟರ್​ಗಳು ಮತ್ತೆ ವಿಫಲಗೊಂಡರು. ಅಮನ್ ಖಾನ್​ ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟರ್​​ಗಳು ತಂಡದ ಮರ್ಯಾದೆ ಕಾಪಾಡಿದರು. ಇದರಿಂದಾಗಿ ಆತಿಥೇಯ ಗುಜರಾತ್ ತಂಡದ ಗೆಲುವಿಗೆ 131 ರನ್​ಗಳ ಸಾಧಾರಣ ಸವಾಲು ಎದುರಾಗಿದೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್​​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ತಂಡದ ಬ್ಯಾಟರ್​​ಗಳು ನಿರ್ಧಾರಕ್ಕೆ ತಕ್ಕ ಹಾಗೆ ಬ್ಯಾಟಿಂಗ್​ ಮಾಡಲಿಲ್ಲ. ಹೀಗಾಗಿ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 130 ರನ್​ ಬಾರಿಸಿತು.

ದೊಡ್ಡ ಮೊತ್ತದ ರನ್​ ಕೂಡಿಕೆ ಮಾಡುವ ಉದ್ದೇಶದೊಂದಿಗೆ ಬ್ಯಾಟ್​ ಮಾಡಿದ ಡೆಲ್ಲಿ ತಂಡ ಹೀನಾಯ ಪ್ರದರ್ಶನ ನೀಡಿತು. ಆರಂಭಿಕ ಬ್ಯಾಟರ್​​ಗಳಾದ ಫಿಲ್ ಸಾಲ್ಟ್​ ಶೂನ್ಯಕ್ಕೆ ಔಟಾದರೆ ಡೇವಿಡ್​ ವಾರ್ನರ್ ಅನಗತ್ಯ ರನ್​ಔಟ್​ಗೆ ಬಲಿಯಾದರು. ಪ್ರಿಯಮ್ ಗರ್ಗ್​ ಕೊಡುಗೆ 10 ರನ್​. ಮಾರ್ಶ್​ ಬದಲಿಗೆ ಆಡುವ ಅವಕಾಶ ಪಡೆದ ರಿಲೀ ರೊಸ್ಸೊ ಬಂದ ಹಾಗೆ ಎರಡು ಫೋರ್​ ಬಾರಿಸಿ ವಿಶ್ವಾಸ ಮೂಡಿಸಿದರೂ ಹೆಚ್ಚು ಹೊತ್ತು ಕ್ರಿಸ್​ನಲ್ಲಿ ನಿಲ್ಲಲಿಲ್ಲ. ಮನೀಶ್ ಪಾಂಡೆಯ ಇನಿಂಗ್ಸ್​ 1 ರನ್​​ಗೆ ಕೊನೆಯಾಯಿತು. 23 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡ ಡೆಲ್ಲಿ 100 ರನ್ ಮಾಡುವುದೂ ಕಷ್ಟ ಎನಿಸಿತ್ತು.

ಅಕ್ಷರ್ ಪಟೇಲ್​ ಎಂದಿನಂತೆ ಆಡಿ 27 ರನ್ ಬಾರಿಸಿ ಔಟಾದರು. ಈ ವೇಳೆ ಜತೆಯಾದ ಅಮನ್​ ಖಾನ್​ ಹಾಗೂ ರಿಪಾಲ್​ ಪಟೇಲ್​ (23) ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಹೀಗಾಗಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ತಂಡಕ್ಕೆ ನೆರವಾಯಿತು.

ನೆರವಾದ ಅಮನ್​

ಆರಂಭಿಕ ಹಿನ್ನಡೆಯೊಂದಿಗೆ ಕುಸಿದಿದ್ದ ಡೆಲ್ಲಿ ತಂಡಕ್ಕೆ ಅಮನ್​ ಖಾನ್​ ಅನಿರೀಕ್ಷಿತವಾಗಿ ನೆರವಾದರು. ಅರಂಭದಲ್ಲ ನಿಧಾನವಾಗಿ ಆಡಿದ ಅವರು 3 ಸಿಕ್ಸರ್ ಹಾಗೂ 3 ಫೊರ್​​ಗಳೊಂದಿಗೆ ಅರ್ಧ ಶತಕ ಬಾರಿಸಿದರು. ಅವರು ರಿಪಾಲ್ ಪಟೇಲ್ ಜತೆ ಸೇರಿ 56 ರನ್​ಗಳ ಜತೆಯಾಟ ನೀಡಿದರು.

ಗುಜರಾ್ ತಂಡದ ಪರವಾಗಿ ಮೊಹಮ್ಮದ್​ ಶಮಿ 11 ರನ್​ಗಳಿಗೆ 4 ವಿಕೆಟ್ ಪಡೆದು ಮಿಂಚಿದರೆ, ಮೋಹಿತ್​ ಶರ್ಮಾ 33 ರನ್​​ಗಳಿಗೆ 2 ವಿಕೆಟ್​ ತಮ್ಮದಾಗಿಸಿಕೊಂಡರು.

Exit mobile version