ಪ್ಯಾರಿಸ್: ನಿಗದಿತ ತೂಕಗಿಂತ ಹೆಚ್ಚಿನ ಭಾರ ಇದ್ದ ಕಾರಣ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್(vinesh phogat) ಫೈನಲ್ ಪಂದ್ಯದಿಂದ ಅನರ್ಹಗೊಂಡು ಪದಕ ವಂಚಿತರಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಇದರ ಬೆನ್ನಲ್ಲೇ ಶುಕ್ರವಾರ ನಡೆದಿದ್ದ 57 ಕೆಜಿ ವಿಭಾಗದ ಪುರುಷರ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಅಮನ್ ಸೆಹ್ರಾವತ್(Aman Sehrawat) ಕೂಡ ಅನರ್ಹಗೊಳ್ಳುವ ಭೀತಿಗೆ ಎದುರಾಗಿದ್ದರಂತೆ. ಹೌದು, ಪಂದ್ಯಕ್ಕೂ ಮುನ್ನ ಅಮನ್ ಕೇವಲ 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿ ಕಂಚಿನ ಪದಕ ಗೆದ್ದ ರೋಚಕ ಸಂಗತಿಯೊಂದನ್ನು ಅವರ ಕೋಚ್ ಬಹಿರಂಗಪಡಿಸಿದ್ದಾರೆ.
ಹೌದು, ಅಮನ್ ಅವರು ಸೆಮಿಫೈನಲ್ ಪಂದ್ಯದಲ್ಲಿ ಸೋತ ಬಳಿಕ 61 ಕೆಜಿ ತೂಕ ಹೊಂದಿದ್ದರಂತೆ. ಈ ವೇಳೆ ಅವರ ಕೋಚ್ಗಳ ನೆರವಿನಿಂದ ಸತತ 10 ಗಂಟೆಗಳ ಕಾಲ ಕಸರತ್ತು ನಡೆಸಿ ಬರೋಬ್ಬರಿ 4.6 ಕೆಜಿ ತೂಕ ಇಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಹೇಗಿತ್ತು ಅಮನ್ ಕಸರತ್ತು?
ಕೋಚ್ ವೀರೇಂದ್ರ ದಹಿಯಾ(virender dahiya coach) ನೀಡಿದ ಮಾಹಿತಿ ಪ್ರಕಾರ, ಅಮನ್ ಗುರುವಾರ ಸಂಜೆ, ಅಂದರೆ ಸೆಮಿಫೈನಲ್ ಮುಕ್ತಾಯದ ಬಳಿಕ 61.5 ಕೆಜಿ ತೂಕವನ್ನು ಹೊಂದಿದ್ದರು. ನಿಗದಿತ ಮಿತಿಗಿಂತ ನಿಖರವಾಗಿ 4.5 ಕಿಲೋಗ್ರಾಂಗಳಷ್ಟು ಹೆಚ್ಚು ತೂಕ ಹೊಂದಿದ್ದರು. ಈಗಾಗಲೇ ಕುಸ್ತಿಯಲ್ಲಿ ಒಂದು ಪದಕ ಕಳೆದುಕೊಂಡು ಆಘಾತದಲ್ಲಿದ್ದ ಕಾರಣ ಯಾವುದೇ ಕಾರಣಕ್ಕೂ ನಾವು ಮತ್ತೊಂದು ಪದಕ ಕಳೆದುಕೊಳ್ಳಬಾರದೆಂದು ನಿರ್ಧರಿಸಿ ಆರು ಸದಸ್ಯರ ಕುಸ್ತಿ ತಂಡದ ಹಿರಿಯ ಭಾರತೀಯ ತರಬೇತುದಾರರಾದ ಜಗಮಂದರ್ ಸಿಂಗ್ ಜತೆಗೂಡಿ ಅಮನ್‌ಗೆ ವ್ಯಾಯಾಮ ಆರಂಭಿಸಲಾಯಿತು.
ತಮ್ಮ ಬಳಿ ಕೇವಲ 10 ಗಂಟೆ ಮಾತ್ರ ಉಳಿದಿತ್ತು. ಆರಂಭದಲ್ಲಿ ಅಮನ್‌ಗೆ 1 ಗಂಟೆ ಟ್ರೆಡ್‌ಮಿಲ್‌ನಲ್ಲಿ ನಾನ್‌ಸ್ಟಾಪ್ ಓಟ ಅಭ್ಯಾಸ ಮಾಡಿಸಲಾಯಿತು. ಇದಾದ ಬಳಿಕ 5 ನಿಮಿಷ ವಿರಾಮ ನೀಡಿ ಬಳಿಕ ಸತತ ಒಂದೂವರೆ ಗಂಟೆ ಮ್ಯಾಚ್ ಸೆಷನ್ ಅಭ್ಯಾಸ ಮಾಡಿಸಿ 30 ನಿಮಿಷಗಳ ಕಾಲ ವಿರಾಮ ನೀಡಲಾಯಿತು. ಬಳಿಕ ಬಿಸಿ ನೀರಿನ ಸ್ನಾನ ಮಾಡಿಸಲಾಯಿತು. ಎಲ್ಲ ವ್ಯಾಯಮ ಮುಗಿದ ಬಳಿಕ ಅವರು 3.6 ಕಿಲೋಗಳನ್ನು ಕಳೆದುಕೊಂಡರು.
ಇದನ್ನೂ ಓದಿ Aman Sehrawat: ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಅಮನ್ ಇಂದು ದೇಶಕ್ಕಾಗಿ ಕಂಚು ಗೆದ್ದ ಸಾಧಕ
ಅಂತಿಮವಾಗಿ ಮಸಾಜ್ ಮಾಡಿ, ನಂತರ ಲಘು ಜಾಗಿಂಗ್ ಮತ್ತು 15 ನಿಮಿಷಗಳ ರನ್ನಿಂಗ್ ಸೆಷನ್ ಮಾಡಲಾಯಿತು. ಇದಾದ ಬಳಿಕ ಬೆಳಗಿನ ಜಾವ 4:30 ರ ಹೊತ್ತಿಗೆ, ಅವರ ತೂಕವು 56.9 ಕಿಲೋಗಳಿಗೆ ಕಡಿಮೆಯಾಯಿತು, ಅನುಮತಿಸುವ ಮಿತಿಗಿಂತ 100 ಗ್ರಾಂ ಕಡಿಮೆಯೇ ಆಗಿತ್ತು. ಬಳಿಕ ನಾವು ನಿಟ್ಟುಸಿರುವ ಬಿಟ್ಟೆವು ಎಂದು ಕೋಚ್ ವೀರೇಂದ್ರ ದಹಿಯಾ ಹೇಳಿದ್ದಾರೆ.
ಕೇವಲ ನೀರು ಸೇವನೆ
ಅಮನ್‌ಗೆ ಯಾವುದೇ ಆಹಾರ ಪದಾರ್ಥಗಳನ್ನು ನೀಡಲಿಲ್ಲ. ಜೇನುತುಪ್ಪ ಬೆರಸಿದ ಉಗುರುಬೆಚ್ಚಗಿನ ನೀರು ಹಾಗೂ ಸ್ವಲ್ಪ ಕಾಫಿ ಕುಡಿಯಲು ಮಾತ್ರ ಅವಕಾಶ ನೀಡಲಾಗಿತ್ತು. ಅಲ್ಲದೇ ಕಂಚಿನ ಪದಕದ ಪಂದ್ಯ ಮುಗಿಯುವವರೆಗೂ ಅಮನ್ ನಿದ್ರೆಗೆ ಜಾರಲೇ ಇಲ್ಲ ಎಂದು ಕೋಚ್‌ಗಳು ತಿಳಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ.