ಬೆಂಗಳೂರು: ಕೆಲವು ಕ್ರೀಡಾಪಟುಗಳ ಬಗ್ಗೆ ಬರೆಯುವಾಗ, ಓದುವಾಗ ಯಾವಾಗಲೂ ರೋಮಾಂಚನಗೊಳ್ಳುತ್ತೇವೆ. ಕಡು ಬಡತನದಲ್ಲಿ ಬೆಳೆದು ಕೊನೆಗೆ ಯಶಸ್ಸಿನ ಸಾಧನೆಯ ಗೌರಿಶಿಖರವನ್ನು ಏರಿ ಗೆಲುವಿನ ಬಾವುಟ ಹಾರಿಸಿದ ಅದೆಷ್ಟೋ ಕ್ರೀಡಾಪಟುಗಳಿದ್ದಾರೆ. ಇದೀಗ ಈ ಸಾಲಿಗೆ ಪ್ಯಾರಿಸ್ ಒಲಿಂಪಿಕ್ಸ್(paris olympics 2024) ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ 21 ವರ್ಷದ ಅಮನ್ ಸೆಹ್ರಾವತ್(Aman Sehrawat) ಸೇರ್ಪಡೆಗೊಂಡಿದ್ದಾರೆ.
ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ…
ಬಡ ಕುಟುಂಬದಿಂದ ಬಂದ ಅಮನ್ ಸೆಹ್ರಾವತ್ ಹರಿಯಾಣದ ಮೂಲದವರು. ಇಲ್ಲಿ ಜಜ್ಜರ್ ಜಿಲ್ಲೆಯ ಬಿರೋಹರ್ ಗ್ರಾಮದವರು. ಅವರ ಬಾಲ್ಯದ ಜೀವನ ಎಲ್ಲರಂತೆ ಖಷಿಯಿಂದ ಕೂಡಿರಲಿಲ್ಲ. ಕಾರಣ ಅವರು 11 ವರ್ಷ ಇದ್ದಾಗಲೇ ತಾಯಿಯನ್ನು(ತಾಯಿ ಕಮಲೇಶ್ ಸೆಹ್ರಾವತ್) ಕಳೆದುಕೊಂಡರು. ಈ ಆಘಾತದಿಂದ ಮಗ ಹೊರ ಬರಬೇಕು ಎನ್ನುವ ಉದ್ದೇಶದಿಂದ ಅಮನ್ ಅವರ ತಂದೆ(ಸೋಮ್ವೀರ್ ಸೆಹ್ರಾವತ್) ಮಗನನ್ನು ಕುಸ್ತಿಗೆ ಸೇರಿದರು. ತಾಯಿಯನ್ನು ಕಳೆದುಕೊಂಡ ನೋವು ಇನ್ನೇನು ಮಾಸಬೇಕು ಎನ್ನುವಷ್ಟರಲ್ಲಿ ಅಮನ್ಗೆ ಮತ್ತೊಂದು ಬರ ಸಿಡಿಲು ಬಡಿಯಿತು. ಅನಾರೋಗ್ಯದಿಂದ ತಂದೆಯನ್ನು ಕೂಡ ಕಳೆದುಕೊಂಡರು. ತಂದೆ ತಾಯಿ ಇಬ್ಬರನ್ನು ಕಳೆದುಕೊಂಡ ಅವರು ಅಕ್ಷರಶಃ ಅನಾಥರಾಗಿದ್ದರು.
ಅಣ್ಣನ ನೆರವಿಗೆ ನಿಂತ ತಂಗಿ…
ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಅಮನ್ ಮತ್ತು ಅವರ ಸಹೋದರಿ ಪೂಜಾ ಮುಂದೆ ಅಜ್ಜ, ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದರು. ಕುಸ್ತಿಯಲ್ಲಿ ಅಮನ್ ಮುಂದುವರಿಯುಂತೆ ಮಾಡಿದ್ದು ಅವರ ಸಹೋದರಿ. ಪ್ರತಿಭಾವಂತನಾಗಿದ್ದ ಅಮನ್ 18ನೇ ವಯಸ್ಸಿಗೆ 23 ವಯೋಮಿತಿಯ ಕುಸ್ತಿ ಆಡಿ ಚಾಂಪಿಯನ್ ಆಗಿದ್ದರು. ಈ ಪ್ರದರ್ಶನದಿಂದ ಅವರು ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ತರಬೇತಿಗೆ ಆಯ್ಕೆಯಾದರು. ಇಲ್ಲಿ ಪ್ರವೀಣ್ ದಹಿಯಾ ಅವರ ಅಡಿಯಲ್ಲಿ ಪಟ್ಟುಬಿಡದೆ ತರಬೇತಿ ಪಡೆದರು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ.
ಪದಕ ತಂದೆ-ತಾಯಿಗೆ ಅರ್ಪಣೆ
ಚೊಚ್ಚಲ ಪ್ರಯತ್ನದಲ್ಲೇ ಪದಕ ಗೆದ್ದ ಅಮನ್ ಸೆಹ್ರಾವತ್ ಈ ಪದಕವನ್ನು ಅಗಲಿದ ತಂದೆ-ತಾಯಿಗೆ ಅರ್ಪಿಸಿದ್ದಾರೆ. ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ಇತಿಹಾಸವನ್ನು ಕೂಡ ಅಮನ್ ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ ಪಿವಿ ಸಿಂಧು ಅವರ ಹೆಸರಿನಲ್ಲಿತ್ತು. ಸಿಂಧು ರಿಯೋ ಒಲಿಂಪಿಕ್ಸ್‌ನಲ್ಲಿ 21 ವರ್ಷ 1 ತಿಂಗಳು ಮತ್ತು 14 ದಿನಗಳಲ್ಲಿ ಪದಕ ಗೆದ್ದಿದ್ದರು.
ಭಾರತದಿಂದ ಸ್ಪರ್ಧಿಸಿದ್ದ ಏಕೈಕ ಕುಸ್ತಿಪಟು
ಅಮನ್ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗಿದ್ದ ಭಾರತದ ಏಕೈಕ ಪುರುಷ ಕುಸ್ತಿಪಟು ಎನಿಸಿಕೊಂಡಿದ್ದರು. 57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಕಳೆದ ಟೋಕಿಯೊ ಬೆಳ್ಳಿ ಪದಕ ಗೆದ್ದಿದ್ದ ರವಿ ದಹಿಯಾ ಅವರನ್ನು ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಮಣಿಸುವ ಮೂಲಕ ಅಮನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. -ಕಾರ್ಟರ್ ಫೈನಲ್ ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ತಾಂತ್ರಿಕ ಮೇಲುಗೈ ಸಾಧಿಸುವ ಮೂಲಕ ಜಯ ಸಾಧಿಸಿದ್ದಾಗಲೇ ಅಮನ್ ಪದಕ ಗೆಲ್ಲುವುದು ನಿಶ್ಚಿತ ಎನ್ನಲಾಗಿತ್ತು. ಸೆಮಿ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಪಾನ್‌ನ ರೀ ಹಿಗುಚಿ ವಿರುದ್ಧ ಸೋಲು ಕಂಡ ಕಾರಣ ಕಂಚಿನ ಪದಕ್ಕೆ ಹೋರಾಟ ನಡೆಸಿ ಇಲ್ಲಿ ಮೇಲುಗೈ ಸಾಧಿಸಿದರು. ಕಂಚಿನ ಪದಕ ಸ್ಪರ್ಧೆಯಲ್ಲಿ ಅಮನ್ ಪೆರುಗ್ವೆಯ ಡರಿಯನ್ ಟೊಯ್ ಕ್ರೂಜ್‌ರನ್ನು 13-5 ಅಂಕಗಳಿಂದ ಸೋಲಿಸಿ ಕಂಚಿಗೆ ಕೊರಳೊಡ್ಡಿದರು.