ಪ್ಯಾರಿಸ್: ವಿನೇಶ್ ಫೋಗಟ್ ಅವರು ಅನರ್ಹಗೊಂಡು ಪದಕವೊಂದನ್ನು ಕಳೆದುಕೊಂಡ ಆಘಾತದಲ್ಲಿರುವಾಗಲೇ ಭಾರತಕ್ಕೆ ಪ್ಯಾರಿಸ್ ಪಲಿಂಪಿಕ್ಸ್(Paris Olympics) ಕುಸ್ತಿಯಲ್ಲಿ ಪದಕವೊಂದು ದೊರೆಯುವ ಆಸೆ ಚಿಗುರೊಡೆದಿದೆ. ಯಾರು ನಿರೀಕ್ಷೆಯೂ ಮಾಡದ ಪುರುಷರ ಕುಸ್ತಿ ಸ್ಪರ್ಧೆಯ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ 21 ವರ್ಷದ ಭಾರತದ ಅಮನ್ ಸೆಹ್ರಾವತ್(Aman Sehrawat) ಸೆಮಿ ಫೈನಲ್‌ಗೆ ಪ್ರವೇಶಿಸಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಇಂದು ರಾತ್ರಿ 9.45ಕ್ಕೆ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಅಮನ್ ಜಪಾನ್ ರೇ ಹಿಗುಚಿ ಸವಾಲು ಎದುರಿಸಲಿದ್ದಾರೆ.
ಎದುರಾಳಿಗೆ ಒಂದೇ ಒಂದು ಅಂಕ ಬಿಟ್ಟು ಕೊಡದೆ ಸೆಮಿಫೈನಲ್ ಪ್ರವೇಶಿಸಿರುವ ಅಮನ್ ಸೆಹ್ರಾವತ್ ಭಾರತಕ್ಕೆ ಅನಿರೀಕ್ಷಿತ ಪದಕೊಂದನ್ನು ಗೆಲ್ಲುವ ತವಕದಲ್ಲಿದ್ದಾರೆ. ಸೆಮಿ ಒಂದು ಗೆದ್ದರೆ ಕನಿಷ್ಠ ಬೆನ್ಳ್ಳಿನು ಖಚಿತಪಡಿಸಿಕೊಳ್ಳಲಿದ್ದಾರೆ. ಅವರ ಆಟವನ್ನು ನೋಡುವಾಗ ಚಿನ್ನಕ್ಕೆ ಕೊರಳೊಡ್ಡುವ ಸಾಧ್ಯತೆ ಕಂಡು ಬಂದಿದೆ.
ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮನ್ ಅಲ್ಬೆನಿಯಾದ ಝೆಲಿಮ್ಖಾನ್ ಅಬಕರೋವ್ ವಿರುದ್ಧ 12-0 ಅಂತರದ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದರು. ಇದಕ್ಕೂ ಮುನ್ನ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ನಾರ್ತ್ ಮ್ಯಾಸೆಡೋನಿಯಾದ ವ್ಲಾಡಿಮಿರ್ ಎಗೊರೊವ್ ವಿರುದ್ಧ 10-0 ಅಂತರದ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಅಮನ್ ಅವರಿಗೆ ಇದು ಚೊಚ್ಚಲ ಒಲಿಂಪಿಕ್ಸ್ ಟೂರ್ನಿಯಾಗಿದೆ. ಮೊದಲ ಪ್ರಯತ್ನದಲ್ಲೇ ಅವರು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ನಡೆದಿದ್ದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಅಮನ್ ಅವರದ್ದಾಗಿದೆ.
ಇದನ್ನೂ ಓದಿ Paris Olympics: ಭರ್ಜರಿ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅಮನ್ ಸೆಹ್ರಾವತ್
ನೀರಜ್ ಮೇಲೆ ಚಿನ್ನ ನಿರೀಕ್ಷೆ
ಚಿನ್ನದ ಪದಕ ಭರವಸೆಯಾಗಿ ಉಳಿದಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರು ಇಂದು ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಟ್ರ್ಯಾಕ್ ಆ್ಯಂಡ್ ಫೀಲ್ಡ್ನಲ್ಲಿ ಐತಿಹಾಸಿಕ ಪದಕ ಗೆದ್ದ ನೀರಜ್ ಈ ಬಾರಿಯೂ ಚಿನ್ನಕ್ಕೆ ಗುರಿ ಇರಿಸಲಿ ಎನ್ನುವುದು ದೇಶವಾಸಿಗಳ ಹಾರೈಕೆ. ಫೈನಲ್ ಪಂದ್ಯ ರಾತ್ರಿ 11:55ಕ್ಕೆ ಅರಂಭವಾಗಲಿದೆ.
ಮಂಗಳವಾರ ನಡೆದಿದ್ದ ಅರ್ಹತಾ ಸುತ್ತಿನ ಪಂದ್ಯದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀ. ದೂರ ಜಾವೆಲಿನ್ ಎಸೆದು ನೇರವಾಗಿ ಫೈನಲ್ ಪ್ರವೇಶಿಸಿದ್ದರು. ನೀರಜ್ ಅವರೇ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದರು. ಹೀಗಾಗಿ ಫೈನಲ್ನಲ್ಲಿಯೂ ಅವರ ಮೇಲೆ ನಿರೀಕ್ಷೆ ಇರಿಸಲಾಗಿದೆ. ಜರ್ಮನಿಯ ಜೂಲಿಯನ್ ವೆಬ್ಬರ್, ಪಾಕಿಸ್ತಾನದ ಅರ್ಷದ್ ನದೀಮ್, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.