ಹೈದರಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಅಂಬಾಟಿ ರಾಯುಡು ಅವರ ಪತ್ನಿ ಚೆನ್ನುಪಲ್ಲಿ ವಿದ್ಯಾ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಇನ್ಸ್ಟಾಗ್ರಾಮ್ ಮೂಲಕ ಬಲಗೈ ಬ್ಯಾಟರ್ ಹಂಚಿಕೊಂಡಿದ್ದಾರೆ. “ಹೆಣ್ಣುಮಕ್ಕಳು ನಿಜವಾದ ಆಶೀರ್ವಾದ” ಎಂದು 37 ವರ್ಷದ ಆಟಗಾರ ಇನ್ಸ್ಟಾಗ್ರಾಮ್ ಚಿತ್ರಕ್ಕೆ ಶೀರ್ಷಿಕೆ ಬರೆದಿದ್ದಾರೆ. ಅವರ ಹಿರಿಯ ಮಗಳು ತನ್ನ ನವಜಾತ ಸಹೋದರಿಯ ಪಕ್ಕದಲ್ಲಿ ಕುಳಿತಿರುವ ಹೃದಯಸ್ಪರ್ಶಿ ಫೋಟೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
37 ವರ್ಷದ ಅಂಬಾಟಿ ರಾಯುಡು ಅವರ ಮೊದಲ ಮಗಳು 2020ರಲ್ಲಿ ಜನಿಸಿದ್ದರು. ಆ ವೇಳೆಯೂ ಅವರು ಸಿಹಿ ಸುದ್ದಿಯನ್ನು ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದರು. ಅದಕ್ಕೆ ಸಾವಿರಾರು ಅಭಿಮಾನಿಗಳು ಶುಭಾಶಯಗಳ ಮಳೆಯನ್ನೇ ಸುರಿಸಿದ್ದರು. ಅಂತೆಯೇ ಈ ಬಾರಿಯೂ ಅವರಿಗೆ ಅಗಣಿತ ಶುಭಾಶಯಗಳು ಬಂದಿವೆ. ಜತೆಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯೂ ಸುಭಾಶಯ ಹೇಳಿದೆ.
ಪ್ಲೇ ಆಫ್ ಅರ್ಹತೆಯ ಹೊಸ್ತಿಲಲ್ಲಿ ಚೆನ್ನೈ ಸೂಪರ್ ಕಿಂಗ್ಸ್
ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರಲ್ಲಿ ಅಂಬಾಟಿ ರಾಯುಡು ಪ್ರತಿನಿಧಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಪ್ರಸ್ತುತ, ರೋಹಿತ್ ಶರ್ಮಾ ಬಳಗ 13 ಪಂದ್ಯಗಳಿಂದ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.
ಏಳು ಪಂದ್ಯಗಳನ್ನು ಗೆದ್ದು, ಐದು ಪಂದ್ಯಗಳಲ್ಲಿ ಸೋತಿರುವ ಮತ್ತು ಒಂದು ಪಂದ್ಯ ಮಳೆಯಿಂದ ರದ್ದಾಗಿರುವ ಕಾರಣ ಅಂಕ ಹಂಚಿಕೊಂಡಿರುವ ಕಾರಣ ನಾಲ್ಕು ಬಾರಿಯ ಚಾಂಪಿಯನ್ ತಂಡ ಅರ್ಹತೆ ಪಡೆಯುವ ನಿಟ್ಟಿನಲ್ಲಿ ತನ್ನ ಪ್ರಯತ್ನ ಮುಂದುವರಿಸಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗುಂಪು ಹಂತದಲ್ಲಿ ಕೇವಲ ಒಂದು ಪಂದ್ಯ ಬಾಕಿ ಉಳಿದಿದೆ. ಎಂಎಸ್ ಧೋನಿ ನೇತೃತ್ವದ ತಂಡವು ಗೆಲುವಿನ ಮೂಳಕ ಪ್ಲೇಆಫ್ಗೆ ಪ್ರವೇಶಕ್ಕೆ ಹಾತೊರೆಯುತ್ತಿದೆ. ಮೇ 20ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಟೂರ್ನಿಯ 67ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಚೆನ್ನೈ ತಂಡ ಎದುರಿಸಲಿದೆ.
ಇದನ್ನೂ ಓದಿ : IPL 2023: ಡೆವೋನ್ ಕಾನ್ವೆ ಅಬ್ಬರ, ಪಂಜಾಬ್ ವಿರುದ್ಧ 200 ರನ್ ಬಾರಿಸಿದ ಚೆನ್ನೈ ಸೂಪರ್ ಕಿಂಗ್ಸ್
ಮೇ 13 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಸೋತ ನಂತರ ಡೆಲ್ಲಿ ಟೂರ್ನಿಯಿಂದ ಹೊರಗುಳಿದ ಮೊದಲ ತಂಡ ಎನಿಸಿಕೊಂಡಿದೆ. ಆದಾಗ್ಯೂ, ಚೆನ್ನೈ ತಂಡಕ್ಕೆ ಅಪಾಯಕಾರಿಯಾಗಿ ಕಾಡುವ ಸಾಧ್ಯತೆಗಳಿವೆ. ಏಕೆಂದರೆ ಡೆಲ್ಲಿ ತಂಡ ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ಆದರೆ, ಚೆನ್ನೈ ತಂಡ ಒತ್ತಡದಲ್ಲಿ ಆಡಬೇಕಾಗಿದೆ.
ಹಿಂದಿನ ಪಂದ್ಯದಲ್ಲಿ ಬಾರಿ ಉಭಯ ತಂಡಗಳು ಮುಖಾಮುಖಿಯಾದಾಗ ಡೆಲ್ಲಿಗೆ ಸೋಲು ಎದುರಾಗಿತ್ತು. ಈ ಬಾರಿಯೂ ಅದೇ ರೀತಿಯ ಫಲಿತಾಂಶಕ್ಕಾಗಿ ಕಾಯುತ್ತಿದೆ ಚೆನ್ನೈ ಸೂಪರ್ ಕಿಂಗ್ಸ್ ತಂಡ.