ಬೆಂಗಳೂರು: ಕೊರೊನಾ ಬಂದ ಬಳಿಕ ಕ್ರಿಕೆಟ್ ಆಟದ ನಿಯಮಗಳಲ್ಲಿ ಕೆಲವೊಂದು ಬದಲಾವಣೆ ಮಾಡಿದೆ ಐಸಿಸಿ. ಅದರಲ್ಲಿ ಪ್ರಮುಖವಾದದ್ದು ಚೆಂಡಿಗೆ ಎಂಜಲು ಹಚ್ಚಿ ಹೊಳಪು ನೀಡುವುದಕ್ಕೆ ನಿಷೇಧ. ಬದಲಾಗಿ ಬೆವರು ಹಚ್ಚಿಕೊಂಡು ಹೊಳಪು ನೀಡುವುದಕ್ಕೆ ಅವಕಾಶ ಕೊಟ್ಟಿದೆ. ಬಹುತೇಕ ಕ್ರಿಕೆಟಿಗರಿಗೆ ಈ ಕುರಿತು ಮಾಹಿತಿ ಇದೆ. ಜತೆಗೆ ಕ್ರಿಕೆಟ್ ಕೋಚ್ಗಳು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ತನ್ನ ತಂಡದ ಆಟಗಾರರಿಗೆ ಹೇಳುತ್ತಾರೆ. ಹೀಗಾಗಿ ನಿಷೇಧಗೊಂಡಿರುವ ಕ್ರಿಯೆಯನ್ನು ಯಾರೂ ಮಾಡುವುದಿಲ್ಲ. ಅದರೆ, ಲಕ್ನೊ ಸೂಪರ್ ಜಯಂಟ್ಸ್ ತಂಡದ ಸ್ಪಿನ್ ಬೌಲರ್ ಅಮಿತ್ ಮಿಶ್ರಾಗೆ ಇದರ ಅರಿವಿಲ್ಲ ಎಂದು ಎನಿಸುತ್ತದೆ. ಹೀಗಾಗಿ ಆರ್ಸಿಬಿ ಪಂದ್ಯದಲ್ಲಿ ಚೆಂಡಿಗೆ ಎಂಜಲು ಹಚ್ಚಿ ನಿಯಮ ಉಲ್ಲಂಘಿಸಿದ್ದಾರೆ.
ಆರ್ಸಿಬಿ ತಂಡದ ಆರಂಭಿಕ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಎದುರಾಳಿ ತಂಡದ ನಾಯಕ ಕೆ. ಎಲ್ ರಾಹುಲ್ ಏನೇ ತಂತ್ರ ಮಾಡಿದರೂ ಅವರಿಬ್ಬರನ್ನು ಔಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ವೇಳೆ ಅವರು ಬೌಲಿಂಗ್ಗೆ ಇಳಿಸಿದ್ದು ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಅವರನ್ನು. ಅವರು ಬೌಲಿಂಗ್ ಮಾಡಲು ಬಂದವರೇ ಚೆಂಡಿಗೆ ಎಂಜಲು ಹಚ್ಚಿ ಹೊಳಪು ನೀಡಿದ್ದಾರೆ.
ಅಮಿತ್ ಮಿಶ್ರಾ ಚೆಂಡಿಗೆ ಎಂಜಲು ಹಚ್ಚಿದ್ದು ನೇರ ಪ್ರಸಾರದ ಟಿವಿ ಕ್ಯಾಮೆರಾಗಳಲ್ಲಿ ಕಾಣಿಸಿಕೊಂಡಿತು. ಆದರೆ ಅದು ಅಂಪೈರ್ ಗಮನಕ್ಕೆ ಬರಲಿಲ್ಲ. ಅಚ್ಚರಿಯೆಂದರೆ ಎಂಜಲು ಹಚ್ಚಿದ ಮೂರನೇ ಎಸೆತದಲ್ಲಿಯೇ ವಿರಾಟ್ ಕೊಹ್ಲಿ ಔಟಾದರು. ಮಿಶ್ರಾ ಎಸೆತಕ್ಕೆ ಸಿಕ್ಸರ್ ಬಾರಿಸಲು ಮುಂದಾದ ವಿರಾಟ್ ಕೊಹ್ಲಿ ಸ್ಟೊಯ್ನಿಸ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಎಂಜಲು ಹಚ್ಚಿದ್ದನ್ನು ವಿರಾಟ್ ಕೊಹ್ಲಿ ಮೊದಲೇ ಗಮನಿಸಿದ್ದರು. ಅದನ್ನು ನೋಡಿದ ಅವರು ಕೈಯೆತ್ತಿ ಮುಗುಳ್ನಕ್ಕು ಸುಮ್ಮನಾದರು. ವಿರಾಟ್ ಕೊಹ್ಲಿಗೆ ಅದನ್ನು ಪ್ರಶ್ನಸುವ ಅವಕಾಶ ಇತ್ತು. ಆದರೆ, ಹಾಗೆ ಮಾಡಲಿಲ್ಲ.
ಅಮಿತ್ ಮಿಶ್ರಾ ಎಂಜಲು ಹಚ್ಚಿದ್ದು ಇದು ಮೊದಲೇನಲ್ಲ. ಈ ಹಿಂದೆಯೂ ಅವರು ಆ ರೀತಿ ಮಾಡಿದ್ದರು. 2021ರಲ್ಲಿ ಕೊರೊನಾ ಭಯ ಜಾಸ್ತಿ ಇದ್ದಾಗಲೂ ಇದೇ ತಪ್ಪು ಮಾಡಿದ್ದರು. ಆಗ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಇದ್ದರು. ಅಂಪೈರ್ ತಕ್ಷಣ ಎಚ್ಚರಿಕೆ ಕೊಟ್ಟಿದ್ದರು. ಜತೆಗೆ ನಾಯಕ ರಿಷಭ್ ಪಂತ್ ಅವರಿಗೂ.
ತ್ರಿವಳಿ ಅರ್ಧ ಶತಕಗಳು
ವಿರಾಟ್ ಕೊಹ್ಲಿ (62), ಫಾಫ್ ಡು ಪ್ಲೆಸಿಸ್ (ಅಜೇಯ 79) ಹಾಗೂ ಮ್ಯಾಕ್ಸ್ವೆಲ್ (59) ಬಾರಿಸಿದ ತ್ರಿವಳಿ ಶತಕದ ನೆರವಿನಿಂದ ಮಿಂಚಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 16ನೇ ಆವೃತ್ತಿಯ ತನ್ನ ಮೂರನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ವಿರುದ್ದ ಮೊದಲು ಬ್ಯಾಟ್ ಮಾಡಿ 212 ರನ್ಗಳನ್ನು ಪೇರಿಸಿದೆ. ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನಡೆಸಿದ ಆರ್ಸಿಬಿ ಬ್ಯಾಟರ್ಗಳು ದೊಡ್ಡ ಎದುರಾಳಿ ತಂಡಕ್ಕೆ ದೊಡ್ಡ ಮೊತ್ತದ ಗುರಿಯನ್ನು ಒಡ್ಡಿದೆ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲ ಟಾಸ್ ಗೆದ್ದ ಲಕ್ನೊ ಸೂಪರ್ ಜಯಂಟ್ಸ್ ತಂಡದ ನಾಯಕ ಕೆ. ಎಲ್ ರಾಹುಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟಿಂಗ್ಗೆ ಆಹ್ವಾನ ಪಡೆದ ಆರ್ಸಿಬಿ ಬಳಗ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 212 ರನ್ ಬಾರಿಸಿತು.