Site icon Vistara News

CWG- 2022 | ಬಾಕ್ಸಿಂಗ್‌ನಲ್ಲಿ ಎರಡನೇ ಬಂಗಾರದ ಪದಕ ಗೆದ್ದ ಅಮಿತ್ ಪಂಘಾಲ್‌

CWG-2022

ಬರ್ಮಿಂಗ್ಹಮ್‌ : ಕಾಮನ್ವೆಲ್ತ್‌ ಗೇಮ್ಸ್‌ನ (CWG- 2022) ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಎರಡನೇ ಬಂಗಾರದ ಪದಕ ಬಂದಿದೆ. ಪುರುಷರ ೫೧ ಕೆ.ಜಿ ವಿಭಾಗದಲ್ಲಿ ಭಾರತದ ಅಮಿತ್ ಪಂಘಾಲ್‌ ಇಂಗ್ಲೆಂಡ್‌ನ ಕಿಯರಾನ್‌ ಮೆಕ್‌ಡೊನಾಲ್ಡ್‌ ವಿರುದ್ಧ ಜಯ ಸಾಧಿಸಿ ಚಿನ್ನದ ಪದಕ ಗೆದ್ದುಕೊಂಡರು. ಇದು ಭಾರತದ ಪಾಲಿಗೆ ೧೫ನೇ ಬಂಗಾರದ ಪದಕವಾಗಿದೆ.

ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ಬಾಕ್ಸರ್‌ಗೆ ತೀರ್ಪುಗಾರರ ಸರ್ವಾನುಮತದ ಅಂಕಗಳು ಲಭಿಸಿದವು. ಭಾನುವಾರ ಭಾರತದ ನಾಲ್ವರು ಬಾಕ್ಸರ್‌ಗಳು ಫೈನಲ್‌ ಸ್ಪರ್ಧೆಯಲ್ಲಿದ್ದರು. ಅದರಲ್ಲಿ ಮೊದಲೆರಡು ಸ್ಪರ್ಧಿಗಳು ಬಂಗಾರ ಗೆದ್ದಂತಾಗಿದೆ. ಮೊದಲ ಬಂಗಾರವನ್ನು ಮಹಿಳಾ ಬಾಕ್ಸರ್‌ ನೀತೂ ಗಂಗಾಸ್‌ ಅವರು ತಮ್ಮದಾಗಿಸಿಕೊಂಡಿದ್ದರು. ಅವರೂ ಇಂಗ್ಲೆಂಡ್‌ನ ಬಾಕ್ಸರ್‌ ವಿರುದ್ಧವೇ ೫-೦ ಅಂತರದ ಜಯ ಸಾಧಿಸಿದ್ದರು.

ಎರಡನೇ ಪದಕ

ಅಮಿತ್ ಪಂಘಾಲ್‌ಗೆ ಇದು ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಲಭಿಸಿದ ಎರಡನೇ ಪದಕ. ೨೦೧೮ರ ಗೋಲ್ಡ್‌ ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಅವರು ಬೆಳ್ಳಿ ತಮ್ಮದಾಗಿಸಿಕೊಂಡಿದ್ದರು. ಆ ವರ್ಷ ಅವರು ಇಂಗ್ಲೆಂಡ್‌ನ ಸ್ಪರ್ಧಿಯ ವಿರುದ್ಧವೇ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದರು.

ಈ ಬಂಗಾರದ ಪದಕವಲ್ಲದೆ, ಅಮಿತ್‌ ಪಂಘಾಲ್‌ ಅವರು ೨೦೧೮ರ ಏಷ್ಯನ್‌ ಗೇಮ್ಸ್‌ನಲ್ಲಿ ಬಂಗಾರ ಗೆದ್ದಿದ್ದರು. ೨೦೧೯ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ರಜತ ಪದಕ ತಮ್ಮದಾಗಿಸಿಕೊಂಡಿದ್ದ ಅವರು, ಏಷ್ಯನ್‌ ಗೇಮ್ಸ್‌ನಲ್ಲಿ ಕಂಚು, ಬೆಳ್ಳಿ ಹಾಗೂ ಬಂಗಾರ ಸೇರಿ ಒಟ್ಟಾರೆ ಮೂರು ಪದಕಗಳನ್ನು ಗೆದ್ದಿದ್ದಾರೆ.

ಭಾರತದ ಇನ್ನೂ ಇಬ್ಬರು ಬಾಕ್ಸರ್‌ಗಳು ಫೈನಲ್‌ಗೇರಿದ್ದಾರೆ. ನಿಖತ್‌ ಜರೀನ್ ೫೦ ಕೆ.ಜಿ ವಿಭಾಗದ ಹಾಗೂ ಸಾಗರ್ ಅಹ್ಲಾವತ್‌ ೯೨ ಕೆ.ಜಿ ವಿಭಾಗದಲ್ಲಿ ಪ್ರಶಸ್ತಿ ಸುತ್ತಿನಲ್ಲಿದ್ದಾರೆ.

ಒಟ್ಟಾರೆ ಭಾರತ ೪೩ ಪದಕಗಳನ್ನು ಗೆದ್ದಿದ್ದು, ಅದರಲ್ಲಿ ೧೫ ಚಿನ್ನದ ಪದಕ, ೧೧ ಬೆಳ್ಳಿ ಹಾಗೂ ೧೭ ಕಂಚಿನ ಪದಕ ಸೇರಿಕೊಂಡಿದೆ.

ಇದನ್ನೂ ಓದಿ | CWG- 2022 | ನೀತು ಗಂಗಾಸ್‌ ಪಂಚ್‌ಗೆ ಒಲಿದ ಬಂಗಾರದ ಪದಕ

Exit mobile version