Site icon Vistara News

INDvsSL | ಲಂಕಾ ಸರಣಿಯಲ್ಲಿ ಯುವ ಆಟಗಾರರಿಗೆ ಭರಪೂರ ಅವಕಾಶ; ಗಿಲ್​, ಗಾಯಕ್ವಾಡ್​ ನಡುವೆ ಪೈಪೋಟಿ

Team India

ಮುಂಬೈ: ಭಾರತ ಕ್ರಿಕೆಟ್​ ತಂಡ 2023ರ ಕ್ಯಾಲೆಂಡರ್​ ವರ್ಷದ ಮೊದಲ ಹಣಾಹಣಿಯಲ್ಲಿ ಪ್ರವಾಸಿ ಶ್ರೀಲಂಕಾ (INDvsSL) ತಂಡವನ್ನು ಎದುರಿಸಲಿದೆ. ಇತ್ತಂಡಗಳ ನಡುವೆ ಮಂಗಳವಾರ ಮುಂಬಯಿಯ ವಾಂಖೆಡೆ ಸ್ಟೇಡಿಯಮ್​ನಲ್ಲಿ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ. ಭಾರತದ ಯುವ ಆಟಗಾರರ ಪಾಲಿಗೆ ಇದು ಅವಕಾಶಗಳನ್ನು ಬಾಚಿಕೊಳ್ಳುವುದಕ್ಕೆ ಲಭಿಸಿರುವ ಅತ್ಯುತ್ತಮ ಅವಕಾಶ.

ಭಾರತ ತಂಡದ ಹಿರಿಯ ಆಟಗಾರರಾದ ರೋಹಿತ್​ ಶರ್ಮ, ಕೆ ಎಲ್​ ರಾಹುಲ್​ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಕಲ್ಪಿಸಲಾಗಿದೆ. ಅದೇ ರೀತಿ ಟೀಮ್​ ಇಂಡಿಯಾ 2024ರ ಟಿ20 ವಿಶ್ವ ಕಪ್​ಗಾಗಿ ತಂಡವನ್ನು ಸಜ್ಜುಗೊಳಿಸಲು ಮುಂದಾಗಿದೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಸರಣಿಯಿಂದಲೇ ಆಟಗಾರರ ಪರೀಕ್ಷೆ ಆರಂಭಗೊಳ್ಳಲಿದೆ. ಪ್ರಮುಖವಾಗಿ ಇಶಾನ್​ ಕಿಶನ್​​, ಶುಬ್ಮನ್​ ಗಿಲ್​, ಸಂಜು ಸ್ಯಾಮ್ಸನ್​, ದೀಪಕ್​ ಹೂಡ, ವೇಗದ ಬೌಲರ್​ ಶಿವಂ ಮಾವಿಗೆ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಅವಕಾಶ ಸಿಗಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ರೋಹಿತ್​ ಶರ್ಮ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿರುವ ಹಾರ್ದಿಕ್ ಪಾಂಡ್ಯಗೆ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ನಿರೂಪಿಸಲು ಸಿಗುತ್ತಿರುವ ಮತ್ತೊಂದು ಅವಕಾಶ.

ಕಳೆದ ವರ್ಷ ಭಾರತ ಪ್ರವಾಸ ಮಾಡಿದ್ದ ಶ್ರೀಲಂಕಾ ತಂಡ ಟಿ20 ಸರಣಿಯಲ್ಲಿ 3-0 ಅಂತರದಿಂದ ವೈಟ್​ವಾಷ್​ ಮಾಡಿಸಿಕೊಂಡಿತ್ತು. ಆದರೆ, 2022ರ ಅಕ್ಟೋಬರ್​ನಲ್ಲಿ ಯುಎಇನಲ್ಲಿ ನಡೆದ ಏಷ್ಯಾ ಕಪ್ ಸರಣಿಯಲ್ಲಿ ಲಂಕಾ ಬಳಗ ಭಾರತ ತಂಡವನ್ನು ಸೂಪರ್​ 4 ಹಂತದಲ್ಲಿ ಸೋಲಿಸುವ ಜತೆಗೆ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಅದೇ ವಿಶ್ವಾಸದಲ್ಲಿರುವ ಶ್ರೀಲಂಕಾ ತಂಡವನ್ನು ಹಾರ್ದಿಕ್​ ಪಾಂಡ್ಯ ಬಳಗ ಎಚ್ಚರಿಕೆಯಿಂದ ಎದುರಿಸಬೇಕು.

ಲಂಕಾ ಪ್ರೀಮಿಯರ್ ಲೀಗ್ ಆಡಿದ ಬಳಿಕ ಶ್ರೀಲಂಕಾ ತಂಡ ಭಾರತಕ್ಕೆ ಪ್ರವಾಸ ಬಂದಿದೆ. ಅಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರು ಪ್ರವಾಸಿ ತಂಡದಲ್ಲಿದ್ದಾರೆ. ಜತೆಗೆ ಹಿಂದೆ ಭಾರತ ತಂಡವನ್ನು ಸೋಲಿಸಿದ ಆತ್ಮವಿಶ್ವಾಸವೂ ಇದೆ. ಭಾರತದ ಉಪಖಂಡದ ತಾಣವಾಗಿರುವ ಕಾರಣ ಉತ್ತಮ ಪ್ರದರ್ಶನ ನೀಡುವ ಎಲ್ಲ ಅವಕಾಶಗಳಿವೆ.

ಯಾರು ಓಪನರ್​?

ಬಾಂಗ್ಲಾದೇಶ ವಿರುದ್ಧ ದಾಖಲೆಯ ದ್ವಿ ಶತಕ ಬಾರಿಸಿರುವ ಇಶಾನ್​ ಕಿಶನ್​ ಆರಂಭಿಕ ಬ್ಯಾಟರ್ ಆಗಿ ಅವಕಾಶ ಪಡೆಯಲಿದ್ದಾರೆ. ಎರಡನೇ ಓಪನರ್​ ಸ್ಥಾನಕ್ಕೆ ಶುಬ್ಮನ್​ ಗಿಲ್ ಹಾಗೂ ಋತುರಾಜ್ ಗಾಯಕ್ವಾಡ್​ ನಡುವೆ ಪೈಪೋಟಿಯಿದೆ. ಇಬ್ಬರೂ ಉತ್ತಮ ಫಾರ್ಮ್​ನಲ್ಲಿದ್ದು, ಪಂದ್ಯದ ಪರಿಸ್ಥಿತಿಗೆ ಪೂರಕವಾಗಿ ಅವಕಾಶ ಪಡೆಯಲಿದ್ದಾರೆ. ಗಿಲ್​ಗೆ ಅವಕಾಶ ಸಿಕ್ಕರೆ ಅವರು ಟಿ20 ಮಾದರಿಗೆ ಪದಾರ್ಪಣೆ ಮಾಡಿದಂತಾಗುತ್ತದೆ. ಹೀಗಾದರೆ ದೇಶಿ ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ ಆರು ಸಿಕ್ಸರ್​ ಬಾರಿಸಿದ ದಾಖಲೆ ಬರೆದಿರುವ ಹೊರತಾಗಿಯೂ ಋತುರಾಜ್​ ಬೆಂಚು ಕಾಯಬೇಕಾಗುತ್ತದೆ.

ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್​ ಯಾದವ್, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್​ ಮತ್ತು ಅಕ್ಷರ್ ಪಟೇಲ್​ ಅವಕಾಶ ಪಡೆಯಲಿದ್ದಾರೆ. ಅರ್ಶ್​ದೀಪ್ ಸಿಂಗ್​, ಉಮ್ರಾನ್​ ಮಲಿಕ್, ಹರ್ಷಲ್​ ಪಟೇಲ್​ ವೇಗದ ಬೌಲರ್​ಗಳಾಗಿರುತ್ತಾರೆ. ಸ್ಪಿನ್ನರ್​ ಯಜ್ವೇಂದ್ರ ಚಹಲ್​ಗೂ ಅವಕಾಶ ಖಂಡಿತ.

ಭಾರತ ಸಂಭಾವ್ಯ 11 ಆಟಗಾರರ ಬಳಗ

ಇಶಾನ್ ಕಿಶನ್, ಶುಬ್ಮನ್ ಗಿಲ್/ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ಅಕ್ಷರ್ ಪಟೇಲ್, ಅರ್ಶ್​ದೀಪ್​ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಯಜ್ವೇಂದ್ರ ಚಹಲ್​.

ಶ್ರೀಲಂಕಾ ಸಂಭಾವ್ಯ 11 ಆಟಗಾರರ ಬಳಗ

ಪಾಥುಮ್ ನಿಸಾಂಕ, ಕುಸಾಲ್‌ ಮೆಂಡಿಸ್ (ವಿ.ಕೀ), ಆವಿಷ್ಕಾ ಫೆರ್ನಾಂಡೊ, ಚರಿತ ಅಸಲಂಕ, ಭಾನುಕಾ ರಾಜಪಕ್ಷ, ದಸುನ್‌ ಶನಕ(ನಾಯಕ), ವಾನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್‌ ತೀಕ್ಷಣ, ಲಾಹಿರು ಕುಮಾರ, ದಿಲ್ಷಾನ್‌ ಮದುಸೂದನ್‌

ಇದನ್ನೂ ಓದಿ | Women’s Asia Cup | ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ತಂಡ ಏಳನೇ ಬಾರಿ ಚಾಂಪಿಯನ್‌

Exit mobile version