Site icon Vistara News

FIA World Rally : ಮಹತ್ವಾಕಾಂಕ್ಷೆಯ ಚಾಲಕಿ; ಪ್ರಶಸ್ತಿ ಬಾಚುವಲ್ಲಿ ಬೆಂಗಳೂರಿನ ಪ್ರಗತಿ ಚಾಲಾಕಿ

An aspiring driver, Pragati from Bengaluru has won many awards

#image_title

ಸುಖೇಶ ಪಡಿಬಾಗಿಲು ಬೆಂಗಳೂರು

ಮೋಟೋ ​ಸ್ಪೋರ್ಟ್ಸ್​ ಬಡವರ ಮನೆಯ ಮಕ್ಕಳಿಗಲ್ಲ ಎಂಬ ಮಾತಿದೆ. ರೇಸ್​ನಲ್ಲಿ ಓಡಿಸುವ ಕಾರು ಅಥವಾ ಬೈಕ್​ಗಳು, ಚಾಲಕರ ಸುರಕ್ಷತಾ ಸಾಧನಗಳು ಸೇರಿದಂತೆ ಈ ಕ್ರೀಡೆಗೆ ಬೇಕಾಗಿರುವ ಎಲ್ಲ ವಸ್ತುಗಳು ಸಿಕ್ಕಾಪಟ್ಟೆ ದುಬಾರಿಯಾಗಿರುವ ಕಾರಣ ಸ್ಥಿತಿವಂತರು ಮಾತ್ರ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆಲ್ಲ ಅಪವಾದ ಎಂಬಂತೆ ಬೆಂಗಳೂರಿನ ಹೆಣ್ಣು ಮಗಳೊಬ್ಬಳು ತಮ್ಮ ಪರಿಶ್ರಮದ ಮೂಲಕವೇ ರೇಸಿಂಗ್ ಕ್ಷೇತ್ರಕ್ಕೆ ಎಂಟ್ರಿ ಪಡೆದು ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದಾರೆ. ಅವರೀಗ ಜಾಗತಿಕ ಮಟ್ಟದ ಸ್ಪರ್ಧೆಯೊಂದಕ್ಕೆ ಆಯ್ಕೆಯಾದ ಮೊಟ್ಟ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿ ಗಿಟ್ಟಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿರುವವರು ಹಿರಿಸಾವೆ ಮೂಲದ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ಪ್ರಗತಿ ಗೌಡ.

ಕ್ರಾಸ್​ ಕಾರ್ಟ್​​​​ ರೇಸರ್​ ಆಗಿರುವ ಪ್ರಗತಿ ಗೌಡ 2022ರ ಅಕ್ಟೋಬರ್​ನಲ್ಲಿ ಚೆನ್ನೈನಲ್ಲಿ ನಡೆದ ರ‍್ಯಾಲಿ ಸ್ಟಾರ್​ ಪ್ರೋಗ್ರಾಮ್​ನ ಏಷ್ಯಾ ಪೆಸಿಫಿಕ್ ರೇಸ್​​ನ ಫೈನಲ್​ನ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್​ಪಟ್ಟ ಅಲಂಕರಿಸಿದ್ದಾರೆ. ಈ ಮೂಲಕ ಅವರು ಇಟಲಿಯಲ್ಲಿ ಮೇ ಆರಂಭದ ವಾರದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್​ಪಿಷ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅಲ್ಲಿ ಅವರು ಏಳು ಖಂಡಗಳ ತಲಾ ಒಬ್ಬರು ಸ್ಪರ್ಧಿಗಳೊಂದಿಗೆ ಟ್ರೋಫಿಗಾಗಿ ಸೆಣಸಲಿದ್ದಾರೆ. ಇದೀಗ ಅವರು ಸ್ಪರ್ಧೆಗಾಗಿ ಅಂತಿಮ ಹಂತದ ಸಿದ್ಧತೆ ನಡೆಸಿಕೊಳ್ಳುತ್ತಿದ್ದು, ಮುಂದಿನ ವಾರ ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ. ವಿಶ್ವ ಮಟ್ಟದ ಚಾಂಪಿಯನ್​ಷಿಪ್​ನಲ್ಲಿ ಗೆದ್ದರೆ ಎಫ್ಐಎ ಪ್ರಾಯೋಜಕತ್ವದಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೇಸ್​ನಲ್ಲಿ ಪಾಲ್ಗೊಳ್ಳುವ ಎಲ್ಲ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ. ಇಂಥದ್ದೊಂದು ಸಾಧನೆಯನ್ನು ಭಾರತದಲ್ಲಿ ಇದುವರೆಗೆ ಯಾರೂ ಮಾಡಿಲ್ಲ ಎಂಬುದೇ ವಿಶೇಷ.

ಚೆನ್ನೈನ ಮದ್ರಾಸ್​ ಮೋಟಾರ್​ ರ್ಯಾಲಿ ಟ್ರ್ಯಾಕ್​ನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಗತಿ ಗೌಡ ಅವರು 26 ಸ್ಪರ್ಧಿಗಳೊಂದಿಗೆ ಸೆಣಸಾಡಿ ಗೆದ್ದು ವಿಶ್ವ ಚಾಂಪಿಯನ್​ಷಿಪ್​ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಈ ಸಾಧನೆ ಕುರಿತು ವಿಸ್ತಾರನ್ಯೂಸ್​ ನೊಂದಿಗೆ ಮಾತನಾಡಿದ ಅವರು, ಇಟಲಿಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಗೆಲ್ಲುವುದು ನಾನೇ. ಗೆದ್ದೇ ಗೆಲ್ಲಬೇಕು ಎಂಬ ಗುರಿಯೊಂದಿಗೆ ಪ್ರಯಾಣ ಬೆಳೆಸುತ್ತಿದ್ದೇನೆ ಎಂದು ಮಹತ್ವಾಕಾಂಕ್ಷೆ ಪ್ರದರ್ಶಿಸಿದ್ದಾರೆ,

ಅವಕಾಶದ ಬಾಗಿಲು ತೆರೆಯಿತು

ಬೆಂಗಳೂರಿನ ಜಯನಗರದ ಜೈನ್​ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಪ್ರಗತಿ ಗೌಡ ರೇಸಿಂಗ್​ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದು ತೀರಾ ಇತ್ತೀಚೆಗೆ. 2019ರಲ್ಲಿ ಅವರು ರ‍್ಯಾಲಿ ಕಾರುಗಳ ಮೂಲಕ ಕರಾಮತ್ತು ತೋರಿಸಲು ಆರಂಭಿಸಿದ್ದರು. 2020ರಲ್ಲಿ ಅರುಣಾಚಲ ಪ್ರದೇಶದ ಇಟಾನಗರದಲ್ಲಿ ನಡೆದ ನ್ಯಾಷನಲ್​ ರ‍್ಯಾಲಿ ಚಾಂಪಿಯನ್​ಷಿಪ್​ (ಐಎನ್​ಆರ್​ಸಿ) ಮೂಲಕ ಪದಾರ್ಪಣೆ ಮಾಡಿ ಅಲ್ಲಿ ಅವರು ಅಗ್ರ 10ರೊಳಗೆ ಸ್ಥಾನ ಪಡೆದರು. ಈ ವೇಳೆ ಅವರು ಮೋಟೋ ಸ್ಪೋರ್ಟ್ಸ್​ ಕ್ಷೇತ್ರದ ಗಣ್ಯರ ಗಮನ ಸೆಳೆದಿದ್ದರು. ರೇಸ್​ ಪಂಡಿತರು ಈ ಹುಡುಗಿಗೆ ಭವಿಷ್ಯವಿದೆ ಎಂದು ನುಡಿದಿದ್ದರು. ಹಿಂದಿರುಗಿ ನೋಡದ ಪ್ರಗತಿ ಗೌಡ ಹಲವು ರೇಸ್​ಗಳನ್ನು ಗೆದ್ದು ಇದೀಗ ವಿಶ್ವ ಮಟ್ಟದ ಸ್ಪರ್ಧೆಗೆ ಅಣಿಯಾಗಿದ್ದಾರೆ.

ನಾನೀಗ ಸ್ಪರ್ಧೆ ಮಾಡಲ ಹೊರಟಿರುವ ಕ್ರಾಸ್ ಕಾರ್ಟ್ ರೇಸ್ ಮಾಮೂಲಿ ಕಾರು ರೇಸ್​ಗಿಂತ ಭಿನ್ನ. ಇಲ್ಲಿ ರಿಯರ್​ ವೀಲ್ ಡ್ರೈವ್ ಇರುತ್ತದೆ. ಫ್ರಂಟ್​ ವೀಲ್​ ಡ್ರೈವ್​ನಿಂದ ಅದಕ್ಕೆ ಹೊಂದಿಕೊಳ್ಳುವುದು ಸವಾಲಿನ ವಿಷಯ. ನನ್ನ ಕೌಶಲವನ್ನು ಬಳಸಿಕೊಂಡು ಗೆಲ್ಲುತ್ತೇನೆ ಎಂದಿದ್ದಾರೆ ಪ್ರಗತಿ ಗೌಡ. ಸವಾಲು ಸ್ವೀಕರಿಸುವುದು ಎಂದರೆ ನನಗಿಷ್ಟ. ಅದುವೇ ನನ್ನ ಗೆಲುವಿನ ಸೂತ್ರ ಎಂದೂ ಹೇಳುತ್ತಾರೆ ಅವರು.

ರೇಸ್​ ಕ್ಷೇತ್ರದ ಪ್ರವೇಶವೇ ಅಚ್ಚರಿ

ಪ್ರಗತಿ ಗೌಡ ಅವರು ರೇಸ್​ ಕ್ಷೇತ್ರಕ್ಕೆ ಪ್ರವೇಶ ಪಡೆದಿರುವುದೇ ಅಚ್ಚರಿಯ ವಿಚಾರ. ಸಾಮಾನ್ಯವಾಗಿ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವವರು ಬಾಲ್ಯದಲ್ಲಿಯೇ ಅಭ್ಯಾಸ ಆರಂಭಿಸುತ್ತಾರೆ. ಆದರೆ, ಎಲ್ಲೂ ಆ ರೀತಿ ಯೋಚಿಸಿರಲಿಲ್ಲ ಹಾಗೂ ಸಿದ್ಧತೆ ಮಾಡಿಕೊಂಡಿರಲಿಲ್ಲ ಅವರು. ತಮಗೆ ವಾಹನ ಚಾಲನಾ ನೈಪುಣ್ಯ ರಕ್ತಗತವಾದದ್ದು ಎನ್ನುತ್ತಾರೆ ರೇಸರ್​ ಪ್ರಗತಿ. ಆದಾಯ ತೆರಿಗೆ ಇಲಾಖೆಯಲ್ಲಿ ಚಾಲಕ ನೌಕರಿ ಮಾಡುತ್ತಿರುವ ನನ್ನ ತಂದೆ ವಾಹನ ಚಲಾಯಿಸುವುದನ್ನು ನೋಡಿ ಅದರ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ಯಾರಿಂದಲೂ ಡ್ರೈವಿಂಗ್​ ಕಲಿಯಲಿಲ್ಲ. ನೋಡಿ ಕಲಿತದ್ದನ್ನು ಒಂದು ದಿನ ಅಣ್ಣನಿಗೆ ಮಾಡಿ ತೋರಿಸಿದೆ. ನಾನು ಕಾರನ್ನು ಓಡಿಸುವ ರೀತಿಗೆ ಅಣ್ಣನೇ ಬೆಚ್ಚಿ ಬಿದ್ದ. ನೀನು ಒಳ್ಳೆಯ ಡ್ರೈವರ್​ ಆಗುತ್ತೀಯಾ ಎಂದ. ಅವನ ಮಾತನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಕಾರು ಓಡಿಸಲು ಆರಂಭಿಸಿದೆ. ರೇಸ್​ಗಳಲ್ಲಿ ಪಾಲ್ಗೊಂಡೆ. ಹಲವು ಟ್ರೋಫಿಗಳನ್ನು ಗೆದ್ದೆ. ದುರದೃಷ್ಟವೆಂದರೆ ಇಂದು ಆತ ನನ್ನೊಂದಿಗಿಲ್ಲ. ಬೈಕ್​ ಅಪಘಾತದಲ್ಲಿಯೇ ಮೃತಪಟ್ಟಿದ್ದಾನೆ. ನಾನು ಗೆಲ್ಲುತ್ತಿರುವುದು ಅಣ್ಣದ ಆಶೀರ್ವಾದದಿಂದ. ಅವನಿಗಾಗಿಯೇ ಚಾಂಪಿಯನ್ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಪ್ರಗತಿ.

ಅಣ್ಣ ತಂಗಿ ಇಬ್ಬರಿಗೂ ಬೈಕ್​ ರೈಡಿಂಗ್​ ಕ್ರೇಝ್​. ಬೈಕ್​ನಲ್ಲಿ ಬಹುತೇಕ ದೇಶವನ್ನೇ ಸುತ್ತಿದ್ದಾರೆ. ಅಣ್ಣನೊಂದಿಗೆ ಬೈಕ್​ ಓಡಿಸುತ್ತಾ ಪ್ರಗತಿ ಕೂಡ ಒಳ್ಳೆಯ ರೈಡರ್​ ಎನಿಸಿಕೊಂಡಿದ್ದಾರೆ. ಅದೇ ವಿಶ್ವಾಸವನ್ನು ಕಾರು ಓಡಿಸುವಾಗಲು ಪ್ರದರ್ಶಿಸುತ್ತಿದ್ದಾರೆ. ಅಣ್ಣನೊಂದಿಗಿನ ಬೈಕ್​ ಮತ್ತು ಕಾರಿನ ಸವಾರಿ ಅನುಭವವೇ ನನ್ನ ರೇಸಿಂಗ್​ ಗೆಲುವಿಗೆ ಕಾರಣ ಎನ್ನುತ್ತಾರೆ ಪ್ರಗತಿ ಗೌಡ.

ಮೂಲ ಸೌಕರ್ಯಗಳ ಕೊರತೆ

ಭಾರತದಲ್ಲಿ ರೇಸಿಂಗ್ ಕ್ಷೇತ್ರಕ್ಕೆ ಪ್ರವೇಶ ಪಡೆಯುವುದು ಅಷ್ಟೊಂದು ಸುಲಭವಲ್ಲ. ನಮ್ಮಲ್ಲಿ ಉತ್ತಮ ಟ್ರ್ಯಾಕ್​ಗಳಿಲ್ಲ. ಅದಕ್ಕೆ ಬೇಕಾದ ಮೂಲ ಸೌಕರ್ಯಗಳು ಕೂಡ ಇಲ್ಲ. ಎಲ್ಲಿ ಅವಕಾಶ ಸಿಗುತ್ತಿತ್ತೊ ಅಲ್ಲೆಲ್ಲ ಅಭ್ಯಾಸ ಮಾಡುತ್ತಿದ್ದೆ. ಇಂಥದ್ದೇ ಕಡೆ ಅಂತಿಲ್ಲ. ರೇಸ್​ ನಡೆಯುವ ಜಾಗಕ್ಕೆ ಹೋಗಿ ಸ್ಪರ್ಧೆಗೆ ಮೊದಲು ಕಾರು ಓಡಿಸಿದ್ದೇ ನನ್ನ ಪಾಲಿನ ಪ್ರಾಕ್ಟೀಸ್​. ಆದರೆ, ನನ್ನ ಕೌಶಲವನ್ನು ಸಂಪೂರ್ಣವಾಗಿ ಬಳಸಿಕೊಂಡು ಗೆಲ್ಲುತ್ತಿದ್ದೆ ಎಂದು ಪ್ರಗತಿ ಗೌಡ ಹೇಳುತ್ತಾರೆ.

ಸುಳ್ಳು ಹೇಳಿ ರೇಸ್​ಗೆ ಹೋಗುತ್ತಿದ್ದ ಪ್ರಗತಿ

ಪ್ರಗತಿಯ ಪೋಷಕರು ಆರಂಭದಲ್ಲಿ ರೇಸ್​ ಕ್ಷೇತ್ರದ ಆಯ್ಕೆಯ ಬಗ್ಗೆ ಅಸಮಾಧಾನ ಹೊಂದಿದ್ದರಂತೆ. ಅದು ಸುರಕ್ಷಿತವಲ್ಲ, ಪ್ರಾಣಾಪಾಯವಾಗುತ್ತದೆ ಎಂಬುದು ಅವರ ಕಲ್ಪನೆಯಾಗಿತ್ತು. ಹೀಗಾಗಿ ಮನೆಯಲ್ಲಿ ಸುಳ್ಳು ಹೇಳಿ ರೇಸ್​​ಗಳಿಗೆ ಹೋಗುತ್ತಿದ್ದರು. ಕಪ್​ ಗೆದ್ದರೆ ಅದನ್ನು ಗೆಳೆಯರ ಮನೆಯಲ್ಲಿ ಇಡುತ್ತಿದ್ದರು. ತಂದೆಯ ಸಹೋದ್ಯೋಗಿಯೊಬ್ಬರು ಪ್ರಗತಿ ರೇಸ್​ನಲ್ಲಿ ಚಾಂಪಿಯನ್​ ಆಗಿರುವ ಚಿತ್ರವನ್ನು ಪತ್ರಿಕೆಯಲ್ಲಿ ನೋಡಿ, ನಿಮ್ಮ ಮಗಳು ಪ್ರತಿಭಾವಂತೆ ಎಂದಿದ್ದರು. ಆದರೂ ತಂದೆಗೆ ಭಯ ಹೋಗಿರಲಿಲ್ಲ. ಕೊನೆಗೇ ರೇಸ್​ ನಡೆಯುವ ಜಾಗಕ್ಕೆ ಪೋಷಕರನ್ನು ಕರೆದುಕೊಂಡು ಹೋಗಿ ಚಾಲಕರ ಸುರಕ್ಷತಾ ಸಾಧನಗಳ ಬಗ್ಗೆ ವಿವರಿಸಿದ್ದರು ಪ್ರಗತಿ ಗೌಡ. ಅದನ್ನು ನೋಡಿದ ಬಳಿಕ ಅವರು ಸುಮ್ಮನಾಗಿದ್ದರು. ಇದೀಗ ಅವರು ಮಗಳ ಸಾಧನೆಗೆ ಹೆಮ್ಮೆ ಪಡುತ್ತಿದ್ದಾರೆ.

ಇದನ್ನೂ ಓದಿ : IPL 2023 : ಸೌದಿ ಅರೇಬಿಯಾದಲ್ಲಿ ನಡೆಯಲಿದೆ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​; ಭಾರತಕ್ಕೆ ಬಂದ ನಿಯೋಗ

ಪ್ರಗತಿ ಗೌಡ ಅವರ ಸಾಧನೆಗಳು

2019ರಲ್ಲಿ ಇಂಡಿಯನ್​ ನ್ಯಾಷನಲ್​ ಜಿಮ್ಖಾನಾ ಚಾಂಪಿಯನ್​ ಲೇಡಿಸ್​ ಕ್ಲಾಸ್​ನಲ್ಲಿ ಗೆದ್ದ ಪ್ರಗತಿ ಗೌಡ, ಅಹುರಾ ಟ್ಯಾಲೆಂಟ್​ ಹಂಟ್​ನಲ್ಲಿ ಮೊದಲ ರನ್ನರ್​ ಅಪ್​ ಸ್ಥಾನ ಪಡೆದುಕೊಂಡಿದ್ದರು. 2020ರಲ್ಲಿ ಟರ್ಮಾಕ್​ ಆಟೋಕ್ರಾಸ್​ ಕ್ಲಬ್​ ಸೀರಿಸ್​ನ ಲೇಡಿಸ್​ ಕ್ಲಾಸ್​ನಲ್ಲಿ ಚಾಂಪಿಯನ್​ ಮತ್ತು ರ‍್ಯಾಲಿ ಆಫ್​ ಅರುಣಾಚಲ್​ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದರು . 2011ರಲ್ಲಿ ಯುನೈಟೆಡ್​ ಆಫ್​ರೋಡ್​ ಆಟೋಕ್ರಾಸ್​ನಲ್ಲಿ ​ ಓವರ್​ಆಲ್​ ವಿನ್ನರ್ ಎನಿಸಿಕೊಂಡಿದ್ದ ಅವರು​, ಆಟೋಕ್ರಾಸ್​ ಸೀರಿಸ್​ ಲೇಡಿಸ್​ ಕ್ಲಾಸ್​ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. 2022ರಲ್ಲಿ ಜೂನಿಯರ್ ಇಂಡಿಯನ್​ ನ್ಯಾಷನಲ್​ ರ‍್ಯಾಲಿಯಲ್ಲಿ ಚಾಂಪಿಯನ್​, ಎಫ್​ಐಎ ಮೋಟೋಸ್ಪೋರ್ಟ್ಸ್​​ ಗೇಮ್ಸ್​ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗಿ, ಫಾರ್ಮುಲಾ ವಿಮೆನ್​ನಲ್ಲಿ ಫೈನಲಿಸ್ಟ್​, ರೌಂಡ್​3 ಸೌತ್​ ಇಂಡಿಯಾ ರ‍್ಯಾಲಿಯಲ್ಲಿ ಚಾಂಪಿಯನ್​, ರ‍್ಯಾಲಿ ಕೊಯಮತ್ತೂರಿನಲ್ಲಿ ಎರಡನೇ ರನ್ನರ್​ ಅಪ್​ ಆಗಿದ್ದಾರೆ. 2023ರಲ್ಲಿ ರೌಂಡ್​1 ಸೌತ್​ ಇಂಡಿಯಾ ರ‍್ಯಾಲಿಯಲ್ಲಿ ಚಾಂಪಿಯನ್​ ಆಗಿದ್ದಾರೆ.

ಪ್ರಗತಿ ಗೌಡ ಅವರಿಗೆ ಇದೀಗ ಎಮ್​ಆರ್​ಎಫ್​ ಟೈರ್​ ಕಂಪನಿ ಹಾಗೂ ಸಿಡ್ವಿನ್​ ಸಂಸ್ಥೆ ಪ್ರಾಯೋಜಕತ್ವ ನೀಡುತ್ತಿದೆ. ಅದರ ಮೂಲಕ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Exit mobile version