ಮೆಲ್ಬೋರ್ನ್ : ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಮೊದಲಿನಂತಿಲ್ಲ. ಅವರ ಆಕ್ರಮಣಕಾರಿ ಭಾವ ಕಡಿಮೆಯಾಗಿದೆ. ಎದುರಾಳಿಗಳನ್ನು ಕಿಚಾಯಿಸುವುದೆಲ್ಲ ಬಿಟ್ಟಿದ್ದಾರೆ. ಈಗ ಪ್ರಬುದ್ಧತೆಯ ಆಟ ಪ್ರದರ್ಶಿಸುತ್ತಿದ್ದಾರೆ. ಅವರಿಗೆ ಈಗ ತಂಡವನ್ನು ಗೆಲ್ಲಿಸುವುದು ಬಿಟ್ಟರೆ ಬೇರೆ ಯಾವುದೇ ಗುರಿಯಿಲ್ಲ. ಅಂತೆಯೇ ಭಾನುವಾರ ನಡೆದ ಪಾಕಿಸ್ತಾನ (IND vs PAK) ವಿರುದ್ಧದ ಪಂದ್ಯದಲ್ಲೂ ಅವರು ಪ್ರಬುದ್ಧ ಆಟ ಪ್ರದರ್ಶಿಸಿದ್ದಾರೆ. ಈ ಹಣಾಹಣಿಯ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಭಾವುಕರಾಗಿ ಕಣ್ಣೀರು ಕೂಡ ಹಾಕಿದರು.
ವಿರಾಟ್ ಕೊಹ್ಲಿ ಎರಡು ವರ್ಷಗಳ ಕಾಲ ಫಾರ್ಮ್ ಕಳೆದುಕೊಂಡಿದ್ದರು. ಈ ವೇಳೆ ಅವರನ್ನು ಹಿರಿಯ ಆಟಗಾರರನೇಕರು ಟೀಕೆಗಳಿಗೆ ಗುರಿ ಮಾಡಿದ್ದರು. ಇದರಿಂದ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಕೂಡ. ಆದರೆ, ಕಳೆದ ಏಷ್ಯಾ ಕಪ್ ಬಳಿಕ ಅವರು ಏಕಾಏಕಿ ಚೈತನ್ಯ ಕಂಡುಕೊಂಡರು. ೭೧ನೇ ಅಂತಾರಾಷ್ಟ್ರೀಯ ಶತಕ ಬಾರಿಸುವ ಜತೆಗೆ ಫಾರ್ಮ್‌ಗೆ ಮರಳಿದರು.
ಭಾನುವಾರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಅವರು ಸ್ಮರಣೀಯ ಪ್ರದರ್ಶನ ನೀಡಿದ್ದಾರೆ. ೫೩ ಎಸೆತಗಳಿಗೆ ಅಜೇಯ ೮೫ ರನ್ ಬಾರಿಸುವ ಮೂಲಕ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಅಂತೆಯೇ ಅವರು ಗೆಲುವಿನ ರನ್‌ಗಾಗಿ ಓಡಿದ ಬಳಿಕ ಜೋರಾಗಿ ಸಂಭ್ರಮಿಸಿದರು. ಈ ವೇಳೆ ಏಕಾಏಕಿ ಭಾವುಕರಾದ ಅವರು ಕಣ್ಣಿರು ಹಾಕಿದರು. ಅವರೊಂದಿಗೆ ಶತಕದ ಜತೆಯಾಟದಲ್ಲಿ ಭಾಗಿಯಾಗಿದ್ದ ಹಾರ್ದಿಕ್ ಪಾಂಡ್ಯ ಕೂಡ ಮೈದಾನಕ್ಕೆ ಓಡಿ ಬಂದು ಅವರು ಭಾವುಕತೆಯಲ್ಲಿ ಭಾಗಿಯಾದರು.’
ಇದನ್ನೂ ಓದಿ | IND vs PAK | ಒಂದು ದಿನ ಮೊದಲೇ ಭಾರತೀಯರಿಗೆ ದೀಪಾವಳಿ ಉಡುಗೊರೆ ಕೊಟ್ಟ ವಿರಾಟ್ ಕೊಹ್ಲಿ