Site icon Vistara News

INDvsSL | ಭಾರತ ತಂಡಕ್ಕೆ ಶ್ರೀಲಂಕಾ ವಿರುದ್ಧ 2 ರನ್​ ರೋಚಕ ಜಯ, ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ

IndvsSl

ಮುಂಬಯಿ: ಬ್ಯಾಟರ್​ಗಳು ಹಾಗೂ ಬೌಲರ್​ಗಳ ಸಂಘಟಿತ ಹೋರಾಟದಿಂದ ಮಿಂಚಿದ ಭಾರತ ತಂಡ ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 2 ರನ್​ಗಳ ವೀರೋಚಿತ ವಿಜಯ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡಕ್ಕೆ 1-0 ಮುನ್ನಡೆ ಲಭಿಸಿತು. ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಯವ ಬೌಲರ್​ ಶಿವಂ ಮಾವಿ 22 ರನ್​ ನೀಡಿ 4 ವಿಕೆಟ್​ ಕಬಳಿಸಿ ಮಿಂಚಿದರು.

ವಾಖೆಂಡೆ ಸ್ಟೇಡಿಯಮ್​ನಲ್ಲಿ ಟಾಸ್​ ಗೆದ್ದ ಶ್ರೀಲಂಕಾ ತಂಡ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತು ಮೊದಲು ಬ್ಯಾಟ್​ ಮಾಡಿದ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 162 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪ್ರವಾಸಿ ಬಳಗ ತಮ್ಮಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 160 ರನ್​ಗಳಿಗೆ ಆಲ್ಔಟ್​ ಆಯಿತು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಹೊರಟ ಲಂಕಾ ತಂಡದ ಬ್ಯಾಟರ್​ಗಳನ್ನು ಭಾರತದ ಬೌಲರ್​ಗಳು ಕಾಡಿದರು. ಶಿವಂ ಮಾವಿ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದರೆ, ಉಮ್ರಾನ್​ ಮಲಿಕ್​ 27 ರನ್​ಗಳಿಗೆ 2 ವಿಕೆಟ್ ಕಬಳಿಸಿದರು. ಹರ್ಷಲ್​ ಪಟೇಲ್​ ಆರಂಭದಲ್ಲಿ ಲಂಕಾ ಬಳಗವನ್ನು ಬೆದರಿಸಿದರೂ ಅಂತಿಮವಾಗಿ 41 ರನ್​ ಬಿಟ್ಟುಕೊಟ್ಟು 2 ವಿಕೆಟ್​ ತಮ್ಮದಾಗಿಸಿಕೊಂಡರು.

ದೀಪಕ್​, ಅಕ್ಷರ್​ ಮೋಡಿ

ಮೊದಲು ಬ್ಯಾಟ್​ ಮಾಡಿದ ಭಾರತ ತಂಡವೂ ಉತ್ತಮ ಆರಂಭ ಪಡೆಯಲಿಲ್ಲ. ಆದರೆ, ಕೊನೇ ಹಂತದಲ್ಲಿ ಅಕ್ಷರ್​ ಪಟೇಲ್​ (31*) ಹಾಗೂ ದೀಪಕ್​ ಹೂಡಾ ((41*) ಸಿಡಿದೆದ್ದ ಕಾರಣ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು.

ಆರಂಭಿಕರಾಗಿ ಬ್ಯಾಟ್​ ಮಾಡಲು ಇಳಿದ ಇಶಾನ್​ ಕಿಶನ್​ 37 ರನ್​ ಬಾರಿಸಿ ಉತ್ತಮ ಆರಂಭ ಒದಗಿಸಲು ಯತ್ನಿಸಿದರು. ಅದರೆ, ಪದಾರ್ಪಣೆ ಪಂದ್ಯದಲ್ಲಿ ಶುಬ್ಮನ್​ ಗಿಲ್​ (7) ವೈಫಲ್ಯ ಕಂಡರು. ಸೂರ್ಯಕುಮಾರ್​ ಯಾದವ್​ (7) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಆಡುವ 11ರ ಬಳಗದಲ್ಲಿ ಅವಕಾಶ ಪಡೆದ ಸಂಜು ಸ್ಯಾಮ್ಸನ್​ ಒಂದು ಜೀವದಾನ ಪಡೆದ ಹೊರತಾಗಿಯೂ 5 ರನ್​ಗಳಿಗೆ ಸೀಮಿತಗೊಂಡರು.

ನಾಯಕ ಹಾರ್ದಿಕ್​ ಪಾಂಡ್ಯ 29 ರನ್ ಬಾರಿಸಿ ಭರವಸೆ ಮೂಡಿಸಿದರೂ ದೊಡ್ಡ ಸ್ಕೋರ್ ಬಾರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಕೊನೆಯಲ್ಲಿ ದೀಪಕ್​ ಹೂಡ ಹಾಗೂ ಅಕ್ಷರ್​ ಪಟೇಲ್ ಅರ್ಧ ಶತಕದ ಜತೆಯಾಟ ನೀಡಿ ಮಿಂಚಿದರು.

ಇದನ್ನೂ ಓದಿ | INDvsSL | ಶಿವಂ ಮಾವಿ, ಶುಬ್ಮನ್​ ಗಿಲ್​ ಟಿ20 ಮಾದರಿಗೆ ಎಂಟ್ರಿ, ಅರ್ಶ್​ದೀಪ್​ ಸಿಂಗ್​ ಅಲಭ್ಯ

Exit mobile version