ನವ ದೆಹಲಿ : ಚುನಾಯಿತ ಕಾರ್ಯಕಾರಿ ಸಮಿತಿ ನೇಮಕ ಮಾಡದಿದ್ದರೆ ಭಾರತೀಯ ಒಲಿಂಪಿಕ್ ಸಂಸ್ಥೆಯ (IAO ELECTION) ಮೇಲೆ ನಿಷೇಧ ಹೇರಲಾಗುವುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ( IOC) ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತಗೊಂಡಿರುವ ಕ್ರೀಡಾ ಇಲಾಖೆ, ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳುವುದಕ್ಕೆ ತಟಸ್ಥ ವ್ಯಕ್ತಿಯೊಬ್ಬರನ್ನು ನೇಮಕ ಮಾಡುವ ನಿರ್ಧಾರಕ್ಕೆ ಬಂದಿದೆ. ಅದಕ್ಕಾಗಿ ಸೋಮವಾರ ಸುಪ್ರೀಮ್ ಕೋರ್ಟ್‌ನ ಸಲಹೆಯನ್ನು ಸ್ವೀಕರಿಸಿದೆ.
ಡಿಸೆಂಬರ್ ಒಳಗಾಗಿ ಚುನಾವಣೆ ನಡೆಸಿ ಹೊಸ ಕಾರ್ಯಕಾರಿ ಸಮಿತಿಗೆ ಅಧಿಕಾರ ಒಪ್ಪಿಸದೇ ಹೋದರೆ ಅಮಾನತಿಗೆ ಒಳಪಡಬೇಕಾಗುತ್ತದೆ ಎಂದು ಸೆ.೮ರಂದು ಐಒಸಿ ಎಚ್ಚರಿಕೆ ಕೊಟ್ಟಿತ್ತು. ಇದೇ ವೇಳೆ ಹಂಗಾಮಿ ಅಥವಾ ಮಧ್ಯಾಂತರ ಅಧ್ಯಕ್ಷರ ನೇಮಕವನ್ನೂ ಅಂಗೀಕೃತಗೊಳಿಸುವುದಿಲ್ಲ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಕ್ರೀಡಾ ಇಲಾಖೆ ಕೋರ್ಟ್ ಮುಂದೆ ಪರಿಹಾರಕ್ಕೆ ಮೊರೆಯಿಟ್ಟಿದೆ.
ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ. ವೈ ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ, ತಟಸ್ಥ ವ್ಯಕ್ತಿಯ ನೇಮಕ ಕುರಿತು ಮಾತುಕತೆ ನಡೆಸುವಂತೆ ಕ್ರೀಡಾ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಿದೆ.
“”ಐಒಎ ನಿಯಾಮಗಳಿಗಳ ತಿದ್ದುಪಡಿ, ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣೆ ಪ್ರಕ್ರಿಯೆ ನಡೆಸಲು ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಕ ಮಾಡಬೇಕು,” ಎಂಬುದಾಗಿ ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ಸಲಹೆ ಕೊಟ್ಟರು.
ಐಒಎ ಚುನಾವಣೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆಯಬೇಕಾಗಿತ್ತು. ನಿಯಮಾವಳಿಗಳ ತಿದ್ದುಪಡಿಗೋಸ್ಕರ ಚುನಾವಣೆಯನ್ನು ಮುಂದೂಡಲಾಗಿತ್ತು. ಅಂತೆಯೇ ಕಳೆದ ಮೇನಲ್ಲಿ ನರಿಂದರ್ ಬಾತ್ರಾ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿತ್ತು.
ಇದನ್ನೂ ಓದಿ | ವಿಸ್ತಾರ Explainer | FIFA ban: ಪ್ರಫುಲ್ ಪಟೇಲ್ ಕಳ್ಳಾಟಕ್ಕೆ ಫಿಫಾದ ಕಾಲ್ಚೆಂಡಾದ ಭಾರತೀಯ ಫುಟ್ಬಾಲ್