Site icon Vistara News

FIFA World Cup | ತಮ್ಮ ದೇಶ ಸೋತಿದ್ದಕ್ಕೆ ಸಂಭ್ರಮಿಸಿದ್ದ ಇರಾನ್‌ ಪ್ರಜೆಯನ್ನು ಗುಂಡಿಟ್ಟು ಕೊಂದರು!

FIFA WORLD CUP

ಟೆಹರಾನ್‌ : ಇರಾನ್‌ ದೇಶದಲ್ಲಿ ನಡೆಯುತ್ತಿರುವ ಬುರ್ಖಾ ವಿರೋಧಿ ಹೋರಾಟ ದೇಶಿ ವಿರೋಧಿ ಕೃತ್ಯಗಳಿಗೆ ಕಾರಣವಾಗುತ್ತಿದ್ದು, ಅಂಥವರನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಗುಂಡಿಟ್ಟು ಹತ್ಯೆ ಮಾಡುತ್ತಿದ್ದಾರೆ. ಫಿಫಾ ವಿಶ್ವ ಕಪ್‌ನಲ್ಲಿ (FIFA World Cup) ಬುರ್ಖಾ ವಿರೋಧಿ ಹೋರಾಟಕ್ಕೆ ಇನ್ನಷ್ಟು ಇಂಬು ದೊರಕಿತ್ತು. ಹೋರಾಟಗಾರರಿಗೆ ಬೆಂಬಲಿಸಿ ಫುಟ್ಬಾಲ್‌ ಆಟಗಾರರು ಅಲ್ಲಿನ ರಾಷ್ಟ್ರಗೀತೆಯನ್ನು ಹಾಡಲು ಕೂಡ ನಿರಾಕರಿಸಿದ್ದರು. ಅಂತೆಯೇ ಇರಾನ್‌ ತಂಡ ಹಾಲಿ ವಿಶ್ವ ಕಪ್‌ನಿಂದ ನಿರ್ಗಮನಗೊಂಡಿರುವುದಕ್ಕೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ ಆ ದೇಶದ ಪ್ರಜೆಯೊಬ್ಬನನ್ನು ಇರಾನ್‌ ಪೊಲೀಸರು ಗುಂಡಿಟ್ಟು ಕೊಂದ ಘಟನೆಯೂ ನಡೆದಿದೆ.

ಪೊಲೀಸರ ಗುಂಡಿಗೆ ಬಲಿಯಾದ ವ್ಯಕ್ತಿಯನ್ನು ಮೆಹ್ರಾನ್‌ ಸಮಕ್ ಎಂಬುದಾಗಿ ಅಲ್ಲಿನ ಮಾನವಹಕ್ಕು ಹೋರಾಟಗಾರರ ಸಂಘಟನೆಗಳು ಹೇಳಿವೆ. ಅಮೆರಿಕದ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಇರಾನ್‌ ತಂಡ ನಾಕೌಟ್‌ ಹಂತಕ್ಕೇರುವ ಅವಕಾಶ ಕಳೆದುಕೊಂಡ ತಕ್ಷಣ ಸಮಕ್‌, ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಅದನ್ನವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದರು. ತಕ್ಷಣ ಭದ್ರತಾ ಸಿಬ್ಬಂದಿ ಅವರನ್ನು ಹುಡುಕಿಕೊಂಡು ಹೋಗಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕ ಪ್ರದೇಶದಲ್ಲಿ ಬುರ್ಖಾ ಕಡ್ಡಾಯ ಎಂಬ ನಿಯಮವನ್ನು ವಿರೋಧಿಸಿ ಇರಾನ್‌ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಹಾಗೂ ಅಭಿಯಾನಗಳು ನಡೆಯುತ್ತಿವೆ. ಅಂತೆಯೆ ಸೆಪ್ಟೆಂಬರ್‌ನಲ್ಲಿ ಮಹ್ಸಾ ಅಮಿನಿ ಎಂಬ ಹೋರಾಟಗಾರ್ತಿಯನ್ನು ಅಲ್ಲಿನ ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದರು. ಆ ಬಳಿಕ ಪ್ರತಿಭಟನೆ ಜೋರಾಗಿ ನಡೆದವು. ಆ ಹೋರಾಟದ ಕಿಡಿ ಇನ್ನೂ ಆರಿಲ್ಲ.

ಇದನ್ನೂ ಓದಿ | FIFA World Cup | ಸರಕಾರದ ಒತ್ತಡದ ಬಳಿಕ ರಾಷ್ಟ್ರಗೀತೆ ಹಾಡಿದ ಇರಾನ್‌ ಆಟಗಾರರು

Exit mobile version