ಮುಂಬಯಿ: ವೆಸ್ಟ್ ಇಂಡೀಸ್ ತಂಡ ಸ್ಫೋಟಕ ಬ್ಯಾಟರ್, ಕೆಕೆಆರ್(KKR) ತಂಡದ ಆಂಡ್ರೆ ರಸೆಲ್(Andre Russell) ಬಾಲಿವುಡ್ ನಟಿ ಅವಿಕಾ ಗೋರ್(Avika Gor) ಜತೆ ಲುಂಗಿಯಲ್ಲಿ ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ. ’ಲಡ್ಕಿ ತು ಕಮಲ್ ಕಿ’ ಎನ್ನುವ ಹಾಡಿಗೆ ರೆಸೆಲ್ ಅವಿಕಾ ಸೇರಿ ಹೆಜ್ಜೆ ಹಾಕಿರುವ ಈ ಹಾಡು ಯೂಟ್ಯೂಬ್ನಲ್ಲಿ ಇಂದು(ಮೇ 9 ಗುರುವಾರ) ಬಿಡುಗಡೆಯಾಗಿದ್ದು, ಎಲ್ಲಡೆ ಸಂಚಲನ ಮೂಡಿಸಿದೆ.
ರಸೆಲ್ ಕೇಸರಿ ಬಣ್ಣದ ಲುಂಗಿ ತೊಟ್ಟು, ಕಪ್ಪು ಬಣ್ಣದ ಬನಿಯನ್ ಹಾಗೂ ಸ್ಟೈಲಿಶ್ ಶರ್ಟ್ ಧರಿಸಿ ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ. ಅವಿಕಾ ಗೋರ್ ನೀಲಿ ಸೀರೆಯಲ್ಲಿ ಮಿಂಚಿದ್ದಾರೆ ಮತ್ತು ಬೋಲ್ಡ್ ಆಗಿ ಸೊಂಟ ಬಳುಕಿಸಿದ್ದಾರೆ. ಈ ಜೋಡಿಯ ಡ್ಯಾನ್ಸ್ ಕಂಡು ಅಭಿಮಾನಿಗಳು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಅವಿಕಾ ಗೋರ್ ಭಾರತೀಯ ನಟಿಯಾಗಿದ್ದು, ಅವರು ಮುಖ್ಯವಾಗಿ ಹಿಂದಿ ಮತ್ತು ತೆಲುಗು ಚಲನಚಿತ್ರಗಳು ಮತ್ತು ಕಿರುತೆರೆಯಲ್ಲಿ ನಟಿಸುತ್ತಾರೆ.
ವಿಂಡೀಸ್ ಆಟಗಾರರು ಕ್ರಿಕೆಟ್ ಜತೆ ನಟನೆ, ಸಂಗೀತ, ಡ್ಯಾನ್ಸ್ನಲ್ಲಿ ಅಪಾರ ಕ್ರೇಜ್ ಹೊಂದಿರುತ್ತಾರೆ. ಈಗಾಗಲೇ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಮತ್ತು ಡ್ವೇನ್ ಬ್ರಾವೋ ಹಲವು ಆಲ್ಬಮ್ ಸಾಂಗ್ ಮಾಡಿ ಖ್ಯಾತಿಗಳಿಸಿದ್ದಾರೆ. ಇದೀಗ ಈ ಸಾಲಿಗೆ ರಸೆಲ್ ಕೂಡ ಸೇರಿದ್ದಾರೆ.
ಇತ್ತೀಚಿಗೆ ರಸೆಲ್ ತನ್ನ ಕಾರಿನಲ್ಲಿ ಪ್ರಯಾಣಿಸುವಾಗ ಮತ್ತು ವಿಮಾನ ಪ್ರಯಾಣದ ಸಮಯದಲ್ಲಿ ಶಾರುಖ್ ಖಾನ್ ನಟನೆಯ ಡಂಕಿ ಚಲನಚಿತ್ರದ ಅಪ್ರತಿಮ ಹಾಡು “ಲುಟ್ ಪುಟ್ ಗಯಾ” ಹಾಡನ್ನು ಹಾಡಿದ್ದರು. ಈ ವೇಳೆ ರಿಂಕು ಸಿಂಗ್ ಕೂಡ ರಸೆಲ್ಗೆ ಸಾಥ್ ನೀಡಿದ್ದರು. ಈ ವಿಡಿಯೊ ಕೂಡ ವೈರಲ್ ಆಗಿತ್ತು.
ಈ ಬಾರಿಯ ಐಪಿಎಲ್‌ನಲ್ಲಿ ರಸೆಲ್ ಕೆಕೆಆರ್ ಪರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ಗಮನಸೆಳೆಯುತ್ತಿದ್ದಾರೆ. 11 ಪಂದ್ಯಗಳಲ್ಲಿ 198 ರನ್ ಗಳಿಸಿರುವ ರಸೆಲ್, ಬೌಲಿಂಗ್‌ನಲ್ಲೂ ಮಿಂಚಿ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸದ್ಯ ಕೆಕೆಆರ್ 16 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇನ್ನೊಂದು ಪಂದ್ಯ ಗೆದ್ದರೆ ಪ್ಲೇ ಆಫ್ ಟಿಕೆಟ್ ಅಧಿಕೃತಗೊಳ್ಳಲಿದೆ.
ಇದನ್ನೂ ಓದಿ PBKS vs RCB: ಮಳೆಯ ಕೈಯಲ್ಲಿದೆ ಆರ್ಸಿಬಿ-ಪಂಜಾಬ್ ಪ್ಲೇ ಆಫ್ ಭವಿಷ್ಯ
ಅಂಕಪಟ್ಟಿಯಲ್ಲಿ ಕುಸಿದ ಚೆನ್ನೈ
ಬುಧವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ವಿರುದ್ಧ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ತಂಡ ಪ್ಲೇ ಆಫ್ ಸನಿಹಕ್ಕೆ ಬಂದು ನಿಂತಿದೆ. ಜತೆಗೆ ಅಂಕಪಟ್ಟಿಯಲ್ಲಿಯೂ(IPL 2024 Points Table) ಪ್ರಗತಿ ಸಾಧಿಸಿ ಮೂರನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ. ಈ ಹಿಂದೆ ಮೂರನೇ ಸ್ಥಾನಿಯಾಗಿದ್ದ ಹಾಲಿ ಚಾಂಪಿಯನ್ ಚೆನ್ನೈ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ಸದ್ಯ ಚೆನ್ನೈ, ಲಕ್ನೋ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು 12 ಅಂಕಗಳಿಸಿವೆ. ಹೀಗಾಗಿ ಈ ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಬಹುತೇಕ ಪ್ಲೇ ಆಫ್ ಪ್ರವೇಶಿಸುವುದು ಖಚಿತ. ಹೈದರಾಬಾದ್ಗೆ ಇನ್ನೊಂದು ಪಂದ್ಯ ಗೆದ್ದರೂ ಸಾಕು. ಇಂದು ನಡೆಯುವ ಪಂದ್ಯದಲ್ಲಿ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಪ್ಲೇ ಆಫ್ ಕ್ಷೀಣ ಅವಕಾಶ ಹೊಂದಿರುವ ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಈ ಪಂದ್ಯ ರೋಚಕವಾಗಿ ಸಾಗುವ ನಿರೀಕ್ಷೆಯಿದೆ.