ಬೆಂಗಳೂರು: ಭಾರತದ ಲೆಗ್ ಸ್ಪಿನ್ ಲೆಜೆಂಡ್, ಕನ್ನಡಿಗ ಅನಿಲ್ ಕುಂಬ್ಳೆಯವರ(Anil Kumble) ಅಪರೂಪದ ಕ್ರಿಕೆಟ್ ಸಾಧನೆಗೆ ಇಂದಿಗೆ 25 ವರ್ಷ ತುಂಬಿದೆ. ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಒಂದು ಇನ್ನಿಂಗ್ಸ್ನ ಎಲ್ಲ ಹತ್ತು ವಿಕೆಟ್ಗಳನ್ನು(Anil Kumble’s historic 10-wicket) ಕಬಳಿಸಿದ್ದ ಜಂಬೋ ಸಾಧನೆಗೆ ಈಗ 25 ವರ್ಷ. ಈ ಸವಿನೆನಪನ್ನು ಬಿಸಿಸಿಐ ಮತ್ತೆ ಮೆಲುಕು ಹಾಕಿದೆ. ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಕುಂಬ್ಳೆಯ ವಿಕೆಟ್ ಬೇಟೆಯ ವಿಡಿಯೊ ಹಂಚಿಕೊಂಡಿದೆ.
ಅದು, 1999ರಲ್ಲಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದಿದ್ದ ಪಾಕಿಸ್ತಾನನ ವಿರುದ್ಧದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಎಲ್ಲ ಹತ್ತು ವಿಕೆಟ್ ಕಬಳಿಸಿದ್ದರು. ಅಂದಿನ ಇನ್ನಿಂಗ್ಸ್ನಲ್ಲಿ 26.3 ಓವರ್ ಎಸೆದಿದ್ದ ಕುಂಬ್ಳೆ ನೀಡಿದ್ದು ಕೇವಲ 74 ರನ್. ಕುಂಬ್ಳೆಯ ಸ್ಪಿನ್ ಜಾದೂಗೆ ಪಾಕಿಸ್ತಾನ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದ್ದರು.
ಎರಡು ಟೆಸ್ಟ್ ಪಂದ್ಯಗಳ ಸರಣಿ ಆಡಲು ಭಾರತಕ್ಕೆ ಬಂದಿದ್ದ ಪಾಕಿಸ್ತಾನ ತಂಡ ಚೆನ್ನೈನಲ್ಲಿ ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ಮೊದಲ ಪಂದ್ಯ ಗೆದ್ದ ಜೋಶ್ನಲ್ಲಿ ಎರಡನೇ ಪಂದ್ಯವನ್ನು ಕೂಡ ಗೆದ್ದು ಬೀಗುತ್ತೇವೆ ಎಂದು ಪಾಕ್ ಜಂಬ ಕೊಚ್ಚಿಕೊಂಡಿತ್ತು. ಅತ್ತ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದ್ದ ಭಾರತ ತಂಡದ ನೆರವಿಗೆ ನಿಂತಿದ್ದು ಕನ್ನಡದ ಹೆಮ್ಮೆ ಅನಿಲ್ ಕುಂಬ್ಳೆ.
🗓️ #OnThisDay in 1999#TeamIndia spin legend @anilkumble1074 became the first Indian bowler & second overall to scalp all the 🔟 wickets in a Test innings 👏👏
— BCCI (@BCCI) February 7, 2024
Recap all the ten dismissals here 🎥🔽pic.twitter.com/McqiXFjt8S
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಅಜರುದ್ದೀನ್ ನಾಯಕತ್ವದ ಭಾರತ 252 ರನ್ ಗಳಿಸಿತ್ತು.ಕುಂಬ್ಳೆ ಮತ್ತು ಹರ್ಭಜನ್ ದಾಳಿಗೆ ನಲುಗಿದ್ದ ಪಾಕ್ ಮೊದಲ ಇನ್ನಿಂಗ್ಸ್ ನಲ್ಲಿ 172 ರನ್ ಗೆ ಆಲ್ ಔಟ್ ಆಗಿತ್ತು. ಕುಂಬ್ಳೆ 4 ಮತ್ತು ಹರ್ಭಜನ್ ಸಿಂಗ್ ಮೂರು ವಿಕೆಟ್ ಪಡೆದಿದ್ದರು.
ಇದನ್ನೂ ಓದಿ U19 World Cup: ಅಂಡರ್-19 ವಿಶ್ವಕಪ್ನಲ್ಲಿ ಭಾರತದ ಸಾಧನೆ ಹೇಗಿದೆ? ಚೊಚ್ಚಲ ಕಪ್ ಗೆದ್ದಿದ್ದು ಯಾವಾಗ?
ಎರಡನೇ ಇನ್ನಿಂಗ್ಸ್ ನಲ್ಲಿ ಸದಗೋಪನ್ ರಮೇಶ್ ಅವರು ಬಾರಿಸಿದ 96 ರನ್ ನೆರವಿನಿಂದ ಭಾರತ 339 ರನ್ ಗಳಿಸಿತು. ಪಂದ್ಯ ಗೆಲ್ಲಲು ಪಾಕ್ 420 ರನ್ ಗುರಿ ಲಭಿಸಿತು. ಎರಡು ದಿನ ಬಾಕಿ ಇತ್ತು. ಬ್ಯಾಟಿಂಗ್ ಅರಂಭಿಸಿದ ಸಯೀದ್ ಅನ್ವರ್ ಮತ್ತು ಶಾಹಿದ್ ಅಫ್ರಿದಿ ಮೊದಲ ವಿಕೆಟ್ ಗೆ 101 ರನ್ ಗಳಿಸಿದರು. ಇವರ ಜತೆಯಾಟ ನೋಡುವಾಗ ಭಾರತ ಈ ಪಂದ್ಯವನ್ನೂ ಕೂಡ ಸೋಲಲಿದೆ ಎಂದು ಊಹಿಸಲಾಗಿತ್ತು. ಆದರೆ, ಪಾಕ್ನ ಗರ್ವಭಂಗ ಮಾಡಿಯೇ ತೀರುತ್ತೇನೆ ಎಂದು ಪಣ್ಣತೊಟ್ಟಂತೆ ಬೌಲಿಂಗ್ ದಾಳಿ ನಡೆಸಿದ ಕುಂಬ್ಳೆ ಅಫ್ರಿದಿಯ ವಿಕೆಟ್ ಕೆಡವಿದರು. ನಯನ್ ಮೊಂಗಿಯಾ ಉತ್ತಮ ಕ್ಯಾಚ್ ಹಿಡಿದು ಈ ವಿಕೆಟ್ ಪತನಕ್ಕೆ ಕಾರಣರಾದರು.
ಅಫ್ರಿದಿಯ ವಿಕೆಟ್ ಕೀತ್ತದ್ದೇ ತಡ ಇಲ್ಲಿಂದ ಆರಂಭವಾದ ಕುಂಬ್ಳೆ ಸ್ಪಿನ್ ಜಾದೂಗೆ ಎಲ್ಲಾ ಹತ್ತು ವಿಕೆಟ್ ಉದುರಿ ಹೋಯಿತು. ಕುಂಬ್ಳೆ ಬೊಗಸೆಯಲ್ಲಿ 10 ವಿಕೆಟ್ಗಳು ತುಂಬಿತು. ಭಾರತ 212 ರನ್ ಗಳ ಭರ್ಜರಿ ಜಯ ಸಾಧಿಸಿತು. ಕುಂಬ್ಳೆ ಗೆಲುವಿನ ಹೀರೊ ಜತೆಗೆ ಒಂದು ಇನ್ನಿಂಗ್ಸ್ ನ ಎಲ್ಲಾ ಹತ್ತು ವಿಕೆಟ್ ಪಡೆದ ಸಾಧನೆ ಮಾಡಿದ ಎರಡನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು. ಜಿಮ್ ಲೇಕರ್ ಈ ಸಾಧನೆ ಮಾಡಿದ ಮೊದಲಿಗ.