ಹ್ಯಾಂಗ್ಝೌ: ಚೀನಾದಲ್ಲಿ ನಡೆಯತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಅಥ್ಲೀಟ್ಗಳು ಪದಕಗಳ ಬೇಟೆಯನ್ನು ಮುಂದುವರಿಸಿದ್ದಾರೆ. ಮಂಗಳವಾರ (ಅಕ್ಟೋಬರ್ 3ರಂದು) ಭಾರತಕ್ಕೆ ಎರಡು ಚಿನ್ನದ ಪದಕ, ಎರಡು ಬೆಳ್ಳಿಯ ಪದಕ ಹಾಗೂ ಐದು ಕಂಚಿನ ಪದಕಗಳು ಲಭಿಸಿವೆ. ಇದರೊಂದಿಗೆ ಭಾರತ 15 ಚಿನ್ನ, 26 ಬೆಳ್ಳಿ ಹಾಗೂ 28 ಕಂಚಿನ ಪದಕದೊಂದಿಗೆ ಒಟ್ಟಾರೆ 69 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಭಾರತ ಖಂಡಾಂತರ ಕ್ರೀಡಾಕೂಟದಲ್ಲಿ ಅತಿದೊಡ್ಡ ಪದಕ ಗಳಿಕೆಯ ಹಾದಿಯಲ್ಲಿದೆ.
2018ರ ಏಶ್ಯನ್ ಗೇಮ್ಸ್ ನಲ್ಲಿ ಭಾರತ 70 ಪದಕಗಳನ್ನು ಗೆದ್ದಿತ್ತು. ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ ಈಗಾಗಲೇ 69 ಪದಕಗಳನ್ನು ಗಳಿಸಿದೆ. ಮಂಗಳವಾರ, ಅಥ್ಲೆಟಿಕ್ಸ್ ದಿನದ ದ್ವಿತೀಯಾರ್ಧದಲ್ಲಿ ಭಾರತದ ಮುನ್ನಡೆಯನ್ನು ಮುಂದುವರಿಸಿದೆ. ಬೆಳಿಗ್ಗೆ ಬಿಲ್ಲುಗಾರಿಕೆಯಲ್ಲೂ ಪದಕಗಳು ಲಭಿಸಿವೆ. ಅಥ್ಲೆಟಿಕ್ಸ್ನಲ್ಲಿ ಪಾರುಲ್ ಚೌಧರಿ (ಚಿನ್ನ, ಮಹಿಳೆಯರ 5000 ಮೀಟರ್), ಅನು ರಾಣಿ (ಚಿನ್ನ, ಮಹಿಳಾ ಜಾವೆಲಿನ್ ಥ್ರೋ), ತೇಜಸ್ವಿನ್ ಶಂಕರ್ (ಬೆಳ್ಳಿ ಡೆಕಾಥ್ಲಾನ್), ಮೊಹಮ್ಮದ್ ಅಫ್ಸಲ್ (ಬೆಳ್ಳಿ, ಪುರುಷರ 800 ಮೀಟರ್), ಪ್ರವೀಣ್ ಚಿತ್ತರವೇಲ್ (ಕಂಚು, ಪುರುಷರ ಟ್ರಿಪಲ್ ಜಂಪ್), ವಿಥಿಯಾ ರಾಮರಾಜ್ (ಕಂಚು, ಮಹಿಳೆಯರ 400 ಮೀಟರ್ ಹರ್ಡಲ್ಸ್) ಪದಕ ಗೆದ್ದರು. ಪುರುಷರ ಕ್ಯಾನೋ ಡಬಲ್ 1000 ಮೀಟರ್ ಸ್ಪರ್ಧೆಯಲ್ಲಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಸಲಾಮ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಅಕ್ಟೋಬರ್ 2 ರಂದು ಭಾರತ 13 ಚಿನ್ನ, 24 ಬೆಳ್ಳಿ ಮತ್ತು 23 ಕಂಚು ಸೇರಿದಂತೆ 60 ಪದಕಗಳನ್ನು ಗೆದ್ದುಕೊಂಡಿತ್ತು.
ಇದನ್ನೂ ಓದಿ : Asian Games : ಪಾಕಿಸ್ತಾನದ ಸ್ಪರ್ಧಿ ನದೀಮ್ ಔಟ್; ನೀರಜ್ಗೆ ಪದಕ ಬಹುತೇಕ ಖಾತರಿ
ಪದಕಗಳ ಭರವಸೆ
ಸ್ಕ್ವಾಷ್ ನಲ್ಲಿ ಸೌರವ್ ಘೋಷಾಲ್ (ಪುರುಷರ ಸಿಂಗಲ್ಸ್), ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ (ಮಿಶ್ರ ಡಬಲ್ಸ್), ಅಭಯ್ ಸಿಂಗ್ ಮತ್ತು ಅನಾಹತ್ ಸಿಂಗ್ (ಮಿಶ್ರ ಡಬಲ್ಸ್) ಭಾರತಕ್ಕೆ ಮೂರು ಪದಕಗಳು ಖಚಿತವಾಗಿದೆ. ಬಾಕ್ಸಿಂಗ್ನಲ್ಲಿ ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಮಹಿಳೆಯರ 75 ಕೆಜಿ ವಿಭಾಗದ ಫೈನಲ್ಗೆ ಪ್ರವೇಶಿಸುವ ಮೂಲಕ ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದರೆ, ಪ್ರೀತಿ ಮತ್ತು ನರೇಂದರ್ ಕಂಚಿನ ಪದಕದೊಂದಿಗೆ ನಿರ್ಗಮಿಸಿದರು. ಕಾಂಪೌಂಡ್ ಸ್ಪರ್ಧೆಗಳಲ್ಲಿ ಭಾರತೀಯ ಬಿಲ್ಲುಗಾರರು ಕನಿಷ್ಠ ಮೂರು ಪದಕಗಳನ್ನು ಖಚಿತಪಡಿಸಿಕೊಂಡಿದ್ದಾರೆ. . ಪುರುಷರ ಕಾಂಪೌಂಡ್ ವೈಯಕ್ತಿಕ ಸ್ಪರ್ಧೆಯಲ್ಲಿ ಓಜಾಸ್ ಪ್ರವೀಣ್ ಮತ್ತು ಅಭಿಷೇಕ್ ವರ್ಮಾ ಅಖಿಲ ಭಾರತ ಫೈನಲ್ ತಲುಪಿದ್ದಾರೆ. ಮಹಿಳೆಯರ ಕಾಂಪೌಂಡ್ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ವೆನ್ನಮ್ ಫೈನಲ್ ತಲುಪಿದ್ದಾರೆ.
ಭಾರತದ ಪದಕಗಳ ಪಟ್ಟಿ
- ಚಿನ್ನ: 15
- ಬೆಳ್ಳಿ: 26
- ಕಂಚು: 28
10ನೇ ದಿನದ ಫಲಿತಾಂಶ ಇಂತಿದೆ
- ಮಹಿಳೆಯರ 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಚಿನ್ನದ ಪದಕ ಗೆದ್ದಿದ್ದಾರೆ.
- ಮಹಿಳಾ ಜಾವೆಲಿನ್ ಥ್ರೋ ಫೈನಲ್ನಲ್ಲಿ ಅನ್ನು ರಾಣಿ ಚಿನ್ನದ ಪದಕ ಗೆದ್ದಿದ್ದಾರೆ.
- ಪುರುಷರ ಡೆಕಾಥ್ಲಾನ್ನಲ್ಲಿ ತೇಜಸ್ವಿನ್ ಶಂಕರ್ ಬೆಳ್ಳಿ ಪದಕ ಗೆದ್ದಿದ್ದಾರೆ.
- ಪುರುಷರ ಟ್ರಿಪಲ್ ಜಂಪ್ನಲ್ಲಿ ಕಂಚಿನ ಪದಕ ಗೆದ್ದ ಪ್ರವೀಣ್ ಚಿತ್ರವೇಲ್
- ಪುರುಷರ 800 ಮೀಟರ್ ಓಟದಲ್ಲಿ ಮೊಹಮ್ಮದ್ ಅಫ್ಸಲ್ ಬೆಳ್ಳಿ ಪದಕ ಗೆದ್ದರು.
- ಮಹಿಳೆಯರ 400 ಮೀಟರ್ ಹರ್ಡಲ್ಸ್ನಲ್ಲಿ ವಿಥ್ಯಾ ರಾಮ್ರಾಜ್ ಕಂಚಿನ ಪದಕ ಗೆದ್ದಿದ್ದಾರೆ.
- ಮಹಿಳೆಯರ 54 ಕೆಜಿ ಬಾಕ್ಸಿಂಗ್ಸ್ನಲ್ಲಿ ಪ್ರೀತಿ ಪವಾರ್ ಕಂಚಿನ ಪದಕ ಗೆದ್ದಿದ್ದಾರೆ.
- ಪುರುಷರ ಕ್ಯಾನೋ ಡಬಲ್ 1000 ಮೀಟರ್ ಓಟದಲ್ಲಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ.
- ಪುರುಷರ 92+ ಕೆಜಿ ಬಾಕ್ಸಿಂಗ್ನಲ್ಲಿ ನರೇಂದರ್ ಕಂಚಿನ ಪದಕ ಗೆದ್ದಿದ್ದಾರೆ.
- ಪುರುಷರ ಕ್ರಿಕೆಟ್: ನೇಪಾಳವನ್ನು 23 ರನ್ ಗಳಿಂದ ಮಣಿಸಿದ ಭಾರತ ಸೆಮಿಫೈನಲ್ ಗೆ ಪ್ರವೇಶಿಸಿದೆ.
- ಕಬಡ್ಡಿಯಲ್ಲಿ ಭಾರತ ಪುರುಷರ ತಂಡ ಬಾಂಗ್ಲಾದೇಶ ವಿರುದ್ಧ 55-18, ಮಹಿಳಾ ತಂಡ ದಕ್ಷಿಣ ಕೊರಿಯಾ ವಿರುದ್ಧ 56-23 ಅಂತರದಲ್ಲಿ ಜಯ ಸಾಧಿಸಿದೆ.
- ಮಹಿಳಾ ಹಾಕಿ ತಂಡ ಹಾಂಕಾಂಗ್ ವಿರುದ್ಧ 13-0 ಅಂತರದ ಗೆಲುವು
- ಆರ್ಚರಿ (ಕಾಂಪೌಂಡ್): ಓಜಾಸ್ ಪ್ರವೀಣ್ ಡಿಯೋಟಾಲೆ ಮತ್ತು ಅಭಿಷೇಕ್ ಅಖಿಲ ಭಾರತ ಅಂತಿಮ ವೈಯಕ್ತಿಕ ಪುರುಷರ ಸ್ಪರ್ಧೆಯನ್ನು (ಅಕ್ಟೋಬರ್ 7 ರಂದು ಫೈನಲ್) ಸ್ಥಾಪಿಸಿದರು; ಮಹಿಳಾ ಫೈನಲ್ನಲ್ಲಿ ಜ್ಯೋತಿ ಸುರೇಖಾ ವೆನ್ನಮ್, ಕಂಚಿನ ಪದಕಕ್ಕಾಗಿ ಅದಿತಿ ಸೆಣಸಲಿದ್ದಾರೆ (ಇಬ್ಬರೂ ಅಕ್ಟೋಬರ್ 7 ರಂದು)
- ಆರ್ಚರಿ (ರಿಕರ್ವ್): ಅತನು ದಾಸ್ ಮತ್ತು ಧೀರಜ್ ಬೊಮ್ಮದೇವರ ಕ್ವಾರ್ಟರ್ ಫೈನಲ್ನಲ್ಲಿ ನಿರ್ಗಮಿಸಿದರು
- ಬ್ಯಾಡ್ಮಿಂಟನ್: ಪಿ.ವಿ.ಸಿಂಧು, ಎಚ್.ಎಸ್.ಪ್ರಣಯ್, ಕಿಡಂಬಿ ಶ್ರೀಕಾಂತ್ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ನಲ್ಲಿ 16ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
- ಮಹಿಳೆಯರ 800 ಮೀಟರ್ ಓಟ: ಫೈನಲ್ಸ್ಗೆ ಅರ್ಹತೆ ಪಡೆದ ಕುಮಾರಿ ಚಂದಾ ಮತ್ತು ಹರ್ಮಿಲನ್ ಬೈನ್ಸ್
- ಪುರುಷರ 4*400 ಮೀಟರ್ ರಿಲೇಯಲ್ಲಿ ಫೈನಲ್ಸ್ಗೆ ಅರ್ಹತೆ ಪಡೆದ ಭಾರತ
- ಸ್ಕ್ವಾಷ್: ಪುರುಷರ ಸಿಂಗಲ್ಸ್ನಲ್ಲಿ ಸೌರವ್ ಘೋಷಾಲ್, ಮಿಶ್ರ ಡಬಲ್ಸ್ನಲ್ಲಿ ಅಭಯ್-ಅನಾಹತ್ ಮತ್ತು ದೀಪಿಕಾ-ಹರಿಂದರ್ಪಾಲ್ ಸೆಮಿಫೈನಲ್ಸ್ಗೆ ಪ್ರವೇಶಿಸಿದ್ದಾರೆ.