Site icon Vistara News

IPL 2023 : ಸೋಲಿನ ಸುಳಿಗೆ ಸಿಲುಕಿರುವ ಎಸ್​ಆರ್​ಎಚ್​ ತಂಡಕ್ಕೆ ಮತ್ತೊಂದು ಆಘಾತ, ಸ್ಟಾರ್ ಆಟಗಾರ ಔಟ್​!

Another blow for SRH, who are reeling under defeat, the star player is out!

SRH

ಹೈದರಾಬಾದ್​: ಸನ್ ರೈಸರ್ಸ್​ ಹೈದರಾಬಾದ್ ತಂಡ ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ (IPL 2023) ಅತ್ಯಂತ ನಿರಾಶಾದಾಯಕ ಪ್ರದರ್ಶನ ನೀಡುತ್ತಿದೆ. ಘಟಾನುಘಟಿ ಬ್ಯಾಟರ್​​ಗಳನ್ನು ಹೊಂದಿರುವ ಹೊರತಾಗಿಯೂ ಅವರೆಲ್ಲರೂ ವೈಫಲ್ಯ ಕಾಣುತ್ತಿರುವ ಕಾರಣ ತಂಡದ ಅಭಿಯಾನ ಹೀನಾಯವಾಗಿ ನಡೆಯುತ್ತಿದೆ. ಏತನ್ಮಧ್ಯೆ, ಈ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಪ್ರಮುಖ ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್​ ಇನ್ನುಳಿದ ಏಳು ಪಂದ್ಯಗಳಿಂದ ಹೊರಕ್ಕೆ ಉಳಿಯುಂತಾಗಿದೆ. ಅವರಿಗೆ ಗಾಯದ ಸಮಸ್ಯೆ ಎದುರಾಗಿದ್ದು ಫ್ರಾಂಚೈಸಿ ಬಿಟ್ಟು ಹೊರ ನಡೆಯುತ್ತಿದ್ದಾರೆ ಎಂಬುದಾಗಿ ಎಸ್​ಆರ್​​ಎಚ್​ ತಂಡ ಟ್ವೀಟ್​ ಮಾಡಿದೆ.

ಆಫ್​ ಸ್ಪಿನ್ನರ್​ ವಾಷಿಂಗ್ಟನ್​ ಸುಂದರ್​ ಮಂಡಿರಜ್ಜು ಗಾಯಕ್ಕೆ ತುತ್ತಾಗಿರುವ ಕಾರಣ ಸನ್‌ರೈಸರ್ಸ್ ಹೈದರಾಬಾದ್‌ 2023ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಿಂದ ಹೊರ ಬಿದ್ದಿದ್ದಾರೆ ಎಂಬುದಾಗಿ ಎಸ್​ಆರ್​ಎಚ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆ ಮೂಲಕ ಸತತ ಸೋಲುಗಳಿಂದ ಹಿನ್ನಡೆ ಅನುಭವಿಸಿರುವ ಏಡೆನ್‌ ಮಾರ್ಕ್ರಮ್‌ ಬಳಗಕ್ಕೆ ಮತ್ತೊಂದು ಆಘಾತವಾಗಿದೆ.

ವಾಷಿಂಗ್ಟನ್​ ಸುಂದರ್​ ಟೂರ್ನಿಯ ಮೊದಲ ಅವಧಿಯಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರು. ಆದರೆ, ಹೇಳಿಕೊಳ್ಳುವಂಥ ಪ್ರದರ್ಶನ ಅವರು ನೀಡಿರಲಿಲ್ಲ. ಆದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ 4 ಓವರ್‌ಗಳ ತಮ್ಮ ಸ್ಪೆಲ್​ನಲ್ಲಿ 28 ರನ್‌ ನೀಡಿ 2 ವಿಕೆಟ್​ ಪಡೆದಿದ್ದರು. ಜತೆಗೆ 15 ಎಸೆತಗಳಲ್ಲಿ 24 ರನ್‌ಗಳನ್ನು ಸಿಡಿಸಿದ್ದರು. ಆದರೆ, ಅವರಿಗೆ ತಂಡವನ್ನು ಗೆಲ್ಲಿಸಲು ಆಗಿರಲಿಲ್ಲ.

ಐಪಿಎಲ್ 16ನೇ ಆವೃತ್ತಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ ವಾಷಿಂಗ್ಟನ್‌ ಸುಂದರ್‌ 60 ರನ್‌ ಗಳಿಸಿದ್ದಾರೆ. ಕೇವಲ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಅವರ ಪ್ರದರ್ಶನದ ಮೇಲೆ ತಂಡಕ್ಕೆ ಸಮಾಧಾನ ಇಲ್ಲ ಎಂಬುದು ಬಹಿರಂಗಗೊಂಡಿತ್ತು. ತಂಡದ ಕೋಚ್​​ ಬ್ರಿಯಾನ್​ ಲಾರಾ ಮಾತನಾಡಿ, ವಾಷಿಂಗ್ಟನ್‌ ಸುಂದರ್‌ ಅದ್ಭುತ ಆಲ್‌ರೌಂಡರ್‌ ಆಗಬೇಕೆಂದು ಫ್ರಾಂಚೈಸಿ ಬಯಸುತ್ತಿದೆ. ಅವರಿಂದ ಉತ್ತಮ ಪ್ರದರ್ಶನ ಮೂಡಿ ಬರುವಷ್ಟು ದಿನ ತಾಳ್ಮೆ ವಹಿಸುತ್ತೇವೆ ಎಂದಿದ್ದರು. ಇದೀಗ ಅವರು ಗಾಯದ ಕಾರಣಕ್ಕೆ ತಂಡದಿಂದ ಹೊರಕ್ಕೆ ಬಿದ್ದಿದ್ದಾರೆ.

ಆಲ್​ರೌಂಡ್ ಪ್ರದರ್ಶನದ ಮೂಲಕ ವಾಷಿಂಗ್ಟನ್‌ ಸುಂದರ್‌ ತಂಡಕ್ಕೆ ಮೌಲ್ಯವನ್ನು ತಂದುಕೊಡುತ್ತಾರೆ. ಆದರೆ ಅಗ್ರಕ್ರಮಾಂಕದಲ್ಲಿ ಆಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಬೇರೆ ಬ್ಯಾಟರ್​​ಗಳು ಇರುವ ಕಾರಣ ಕೆಳ ಕ್ರಮಾಂಕದಲ್ಲಿ ಸುಂದರ್​ ಆಡಬೇಕಾಗಿದೆ. ಅವರು ಅದ್ಭುತ ಆಲ್‌ರೌಂಡರ್‌ ಆಗಬೇಕೆಂದು ನಾವು ಬಯಸುತ್ತೇವೆ ಎಂದು ಲಾರಾ ನುಡಿದಿದ್ದರು.

ನಿರಾಸೆ ಮೂಡಿಸಿದ ಎಸ್​ಆರ್​​ಎಚ್​

ಸನ್​ ರೈಸರ್ಸ್ ಹೈದರಾಬಾದ್ ಹಾಲಿ ಆವೃತ್ತಿಯಲ್ಲಿ ನಿರಾಸೆಗೆ ಒಳಗಾಗಿದೆ. ಹರಾಜು ಪ್ರಕ್ರಿಯೆ ಮುಗಿದ ವೇಳೆ ತಂಡದಲ್ಲಿ ಉತ್ತಮ ಆಟಗಾರರು ಇರುವ ಕಾರಣ ಕಪ್​ ಗೆಲ್ಲುವ ಚಾನ್ಸ್​ ಇದೆ ಎಂದು ಹೇಳಲಾಗಿತ್ತು. ಆದರೆ, ವಾಸ್ತವದಲ್ಲಿ ಅದು ಸುಳ್ಳಾಗುತ್ತಿದೆ. ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಎರಡು ಪಂದ್ಯಗಳಲ್ಲಿ ಗೆಲುವು ಕಂಡಿರುವ ಎಸ್‌ಆರ್‌ಎಚ್‌, ಇನ್ನುಳಿದ 5 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ 4 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ 9ನೇ ಸ್ಥಾನದಲ್ಲಿದೆ.

ಇದನ್ನೂ ಓದಿ : IPL 2023: ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧ ಆರ್​ಸಿಬಿ ತಂಡ ಸೋತ ಬಳಿಕ ಐಪಿಎಲ್​ ಅಂಕಪಟ್ಟಿ ಹೇಗಿದೆ?

ಎಸ್​ಆರ್​ಎಚ್ ತಂಡಕ್ಕೆ ಮುಂದಿನ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ. ಏಪ್ರಿಲ್‌ 29 ರಂದು ದಿಲ್ಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಈ ಹಣಾಹಣಿ ನಡೆಯಲಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಕೇವಲ 7 ರನ್‌ಗಳಿಂದ ಸೋತಿತ್ತು.

Exit mobile version