Site icon Vistara News

IPL 2023 : ಡೆಲ್ಲಿ ತಂಡಕ್ಕೆ ಮತ್ತೊಂದು ಗಾಯದ ಆಘಾತ, ಬೆನ್ನು ನೋವಿನಿಂದ ಯುವ ಬೌಲರ್​ ಟೂರ್ನಿಯಿಂದ ಔಟ್​

Another injury shock for the Delhi team, the young bowler is out of the tournament due to back pain

#image_title

ನವ ದೆಹಲಿ: ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ (IPL 2023) ಗಾಯದ ಸಮಸ್ಯೆಗೆ ಕೊನೆಯೇ ಇಲ್ಲದಂತಾಗಿದೆ. ದಿನಕ್ಕೊಬ್ಬರು ಗಾಯದ ಸಮಸ್ಯೆ ಎದುರಾಗುತ್ತಿದೆ. ಅಂತೆಯೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಯುವ ಬೌಲರ್​ ಕಮ್ಲೇಶ್ ನಾಗರಕೋಟಿ ಬೆನ್ನು ನೋವಿನ ಸಮಸ್ಯೆಯಿಂದಾಗಿ ಐಪಿಎಲ್​ನಿಂದ ಸಂಪೂರ್ಣವಾಗಿ ಹೊರಕ್ಕೆ ನಡೆದಿದ್ದಾರೆ. ಹೀಗಾಗಿ ಹೊಸ ಬೌಲರ್​ಗಳನ್ನು ಹುಡುಕುವ ಜವಾಬ್ದಾರಿ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಮ್ಯಾನೇಜರ್​ಗೆ ಎದುರಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಾಲಿ ಆವೃತ್ತಿಯ ಟೂರ್ನಿಯಲ್ಲಿ ಕಳಪೆ ಆರಂಭ ಪಡೆದಿದೆ. ಆಡಿರುವ ಐದೂ ಪಂದ್ಯಗಳಲ್ಲಿ ಸೋಲು ಕಂಡಿದ್ದು, 10 ತಂಡಗಳ ಟೂರ್ನಿಯಲ್ಲಿ ಕೆಳಗಿನ ಸ್ಥಾನ ಪಡೆದುಕೊಂಡಿದೆ. ಇಂಥ ಪರಿಸ್ಥಿತಿಯಲ್ಲಿ ಗಾಯದ ಸಮಸ್ಯೆಯೂ ತಲೆದೋರಿದೆ.

ಐಪಿಎಲ್​ 16ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಅನ್​ಸೋಲ್ಡ್​ ಆಗಿರುವ ಅಭಿಮನ್ಯು ಈಶ್ವರನ್ ಹಾಗೂ ಪ್ರಿಯಂ ಗರ್ಗ್​ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬುಲಾವ್​ ಕೊಟ್ಟಿದೆ. ಅವರಿಬ್ಬರಿಗೆ ಟ್ರಯಲ್ಸ್​ ನಡೆಸಿ ಒಬ್ಬರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಫ್ರಾಂಚೈಸಿ ಯೋಜನೆಯಾಗಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಯಾರು ನಾಗರಕೋಟಿ ಸ್ಥಾನ ತುಂಬಲಿದ್ದಾರೆ ಎಂಬುದು ಬಹಿರಂಗಗೊಳ್ಳಲಿದೆ.

ರಾಜಸ್ಥಾನದ ಆಟಗಾರ 2022-23ನೇ ಆವೃತ್ತಿಯ ದೇಶಿಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿರಲಿಲ್ಲ.. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇವಲ ಏಳು ವಿಕೆಟ್​ ತಮ್ಮದಾಗಿಸಿಕೊಂಡಿದ್ದರು. ಏತನ್ಮಧ್ಯೆ ಅವರು ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. 2018ರಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡಕ್ಕೆ ಸೇರ್ಪಡೆಗೊಂಡಿರುವ 23 ವರ್ಷದ ಆಟಗಾರ 12 ಐಪಿಎಲ್​ ಪಂದ್ಯಗಳಲ್ಲಿ ಆಡಿದ್ದಾರೆ.

ಇದನ್ನೂ ಓದಿ : IPL 2023: ಪಂಜಾಬ್​ ವಿರುದ್ಧ ಆರ್​ಸಿಬಿ ದಾಖಲೆ ಹೇಗಿದೆ?

ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೆಲವೊಬ್ಬರು ಅತ್ಯುತ್ತಮ ಬೌಲರ್​ಗಳನ್ನೂ ಹೊಂದಿದೆ. ಖಲೀಲ್​ ಅಹಮದ್​, ಮುಕೇಶ್​ ಕುಮಾರ್​, ಚೇತನ್​ ಸಕಾರಿಯಾ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುತ್ತಿದ್ದಾರೆ. ಆನ್ರಿಚ್​ ನೋರ್ಜೆ, ಮುಸ್ತಾಫಿಜುರ್ ರಹ್ಮಾನ್​, ಇಶಾಂತ್​ ಶರ್ಮಾ, ಲುಂಗಿ ಎನ್​ಗಿಡಿ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಅಷ್ಟಾದರೂ ತಂಡದ ಬೌಲರ್​ಗಳು ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ನಾಗರಕೋಟಿ ಅಲಭ್ಯತೆಯಿಂದ ತಂಡಕ್ಕೆ ಇನ್ನಷ್ಟು ಹಿನ್ನಡೆ ಉಂಟು ಮಾಡಲಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರರ ಬ್ಯಾಟ್‌ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳ ಕಳವು

ಈಗಾಗಲೇ ಸತತ ಸೋಲಿನಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ದೊಡ್ಡ ಆಘಾತವೊಂದು ಸಂಭವಿಸಿದೆ. ತಂಡದ ಬಹುತೇಕ ಎಲ್ಲ ಆಟಗಾರರ ಬೆಲೆಬಾಳುವ ಬ್ಯಾಟ್​ ಮತ್ತು ಕ್ರಿಕೆಟ್ ಉಪಕರಣಗಳು ಕಳವಾಗಿರುವ ಘಟನೆ ನಡೆದಿದೆ. ಈ ವಿಚಾರವನ್ನು ಡೆಲ್ಲಿ ಕ್ಯಾಪಿಟಲ್ಸ್​ ತಂಡ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಬೆಂಗಳೂರಿನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಅವರ ಲಗೇಜ್‌ ಬ್ಯಾಗ್​ಗಳಿಂದ ಬ್ಯಾಟ್, ಪ್ಯಾಡ್ ಮತ್ತು ಇತರ ಕ್ರಿಕೆಟ್ ಉಪಕರಣಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಬಹುತೇಕ ಎಲ್ಲ ಆಟಗಾರರು ತಮ್ಮ ಬ್ಯಾಟ್‌ಗಳನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ ಯಶ್ ಧುಲ್ ಕನಿಷ್ಠ ಐದು ಬ್ಯಾಟ್‌ಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜತೆಗೆ ವಿದೇಶಿ ಆಟಗಾರರು ಕೂಡ ತಮ್ಮ ಬ್ಯಾಟ್​ ಸೇರಿ ಇತರ ಉಪಕರಣಗಳನ್ನು ಕಳೆದುಕೊಂಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಕಳವಾಗಿರುವ ಬ್ಯಾಟ್‌ಗಳ ಬೆಲೆ ತಲಾ 1 ಲಕ್ಷ ರೂ.ಆಗಿದೆ ಎಂದು ವರದಿಯಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್​ ತಂಡ ಗುರುವಾರ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ಪಂದ್ಯ ಆಡಲಿದೆ. ಆದರೆ ಇದೀಗ ತಮ್ಮ ಉಪಕರಣಗಳು ಇಲ್ಲವಾಗಿರುವುದು ಆಟಗಾರರಿಗೆ ಚಿಂತಿಗೀಡು ಮಾಡಿದೆ. ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ ಒಟ್ಟು 16 ಬ್ಯಾಟ್‌ಗಳು, ಪ್ಯಾಡ್‌ಗಳು, ಶೂ, ಮತ್ತು ಗ್ಲೌಸ್‌ಗಳು ಕಳವಾಗಿದೆ ಎಂದು ತಿಳಿಸಿದೆ.

Exit mobile version