ಬೆಂಗಳೂರು: ಐಪಿಎಲ್ ಆರಂಭಕ್ಕೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಎಲ್ಲ ಫ್ರಾಂಚೈಸಿಗಳು ಅಭ್ಯಾಸ ಆರಂಭಿಸಿದ್ದಾರೆ. ಆದರೆ ಈ ಬಾರಿ ಗಾಯದ ಸಮಸ್ಯೆಯೇ ಎಲ್ಲ ತಂಡಗಳನ್ನು ಕಾಡುತ್ತಿದೆ. ಅಂತೆಯೇ ಆರ್ಸಿಬಿ ತಂಡವೂ ಮತ್ತೊಂದು ಆಘಾತಕ್ಕೆ ಒಳಗಾಗಿದ್ದು ತಂಡದ ಸ್ಟಾರ್ ಬ್ಯಾಟರ್ ರಜತ್ ಪಾಟೀದಾರ್ ಟೂರ್ನಿಯ ಆರಂಭದಲ್ಲಿ ಆಡುವುದಿಲ್ಲ ಎಂದು ಹೇಳಲಾಗಿದೆ. ಹಿಮ್ಮಡಿ ನೋವಿನ ಸಮಸ್ಯೆಗೆ ಒಳಗಾಗಿರುವ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿರುವ ಕಾರಣ ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ಹೇಳಿದೆ.
ರಜತ್ ಪಾಟೀದಾರ್ ಆರ್ಸಿಬಿ ತಂಡದ ಬ್ಯಾಟಿಂಗ್ ವಿಭಾಗದ ಬಲ ಎನಿಸಿಕೊಂಡಿದ್ದರು. ಬಲಗೈ ಬ್ಯಾಟರ್ ಆರ್ಸಿಬಿ ತಂಡದ ಪರ ಶತಕ ಕೂಡ ಬಾರಿಸಿ ಮಿಂಚಿದ್ದಾರೆ. ಕಾಲು ನೋವಿನ ಸಮಸ್ಯೆಯಿಂದಾಗಿ ಅವರು ಆರಂಭಿಕ ಹಂತದ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರುವುದರಿಂ ಮತ್ತೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಬೇಕಾಗಿದೆ. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ. ಫಿನ್ ಅಲೆನ್ ಅಥವಾ ಅನುಜ್ ರಾವತ್ ಫಾಫ್ ಡು ಪ್ಲೆಸಿಸ್ ಜತೆ ಆರಂಭಿಕರಾಗಿ ಬ್ಯಾಟ್ ಮಾಡಬೇಕಾಗುತ್ತದೆ.
ರಜತ್ ಪಾಟೀದಾರ್ 2022ನೇ ಆವೃತ್ತಿಯಲ್ಲಿ ಗಮನ ಸೆಳೆದಿದ್ದರು. ಲವ್ನಿತ್ ಸಿಸೋಡಿಯಾ ಅವರ ಅನುಪಸ್ಥಿತಿಯಲ್ಲಿ ಅವಕಾಶ ಪಡೆದ ಪಾಟೀದಾರ್ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದರು. ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ 54 ಎಸೆತಗಳಲ್ಲಿ ಅಜೇಯ 112 ರನ್ ಬಾರಿಸಿದ ಅವರು ಭಾರತ ಆಟಗಾರರ ಪರ ಐಪಿಎಲ್ನಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆ ಸೃಷ್ಟಿಸಿದ್ದರು. ಅವರು ಕೇವಲ 49 ಎಸೆತಗಳಲ್ಲಿ ಮೂರಂಕಿ ಮೊತ್ತ ಸಾಧಿಸಿದ್ದರು. ಏಳು ಪಂದ್ಯಗಳಲ್ಲಿ 55.50 ಸರಾಸರಿಯಂತೆ 333 ರನ್ ಬಾರಿಸಿದ್ದರು. ಅದರಲ್ಲಿ ಒಂದು ಶತಕ ಹಾಗೂ ಮೂರು ಅರ್ಧ ಶತಕಗಳು ಸೇರಿಕೊಂಡಿವೆ.
ರಜತ್ ಪಾಟೀದಾರ್ 2021-22ರ ರಣಜಿ ಟ್ರೋಫಿಯಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಆರು ಪಂದ್ಯಗಳಲ್ಲಿ 658 ರನ್ಗಳನ್ನು ಬಾರಿಸಿದ್ದರು. ಆರ್ಸಿಬಿ ತಂಡ ಏಪ್ರಿಲ್ 2ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡ ಮುಂಬಯಿ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : WPL 2023: ಫೈನಲ್ಗೆ ಲಗ್ಗೆಯಿಟ್ಟ ಖಷಿಯಲ್ಲಿ ತಂಡದ ಆಟಗಾರ್ತಿಯರೊಂದಿಗೆ ಕುಣಿದು ಕುಪ್ಪಳಿಸಿದ ನೀತಾ ಅಂಬಾನಿ; ವಿಡಿಯೊ ವೈರಲ್
ಇಂಗ್ಲೆಂಡ್ ತಂಡದ ಆಲ್ರೌಂಡರ್ ವಿಲ್ ಜಾಕ್ಸ್ ಗಾಯಗೊಂಡಾಲೇ ಆರ್ಸಿಬಿ ತಂಡ ಆಘಾತ ಎದುರಿಸಿತ್ತು. ಆ ಬಳಿಕ ನ್ಯೂಜಿಲ್ಯಾಂಡ್ ಆಲ್ರೌಂಡರ್ ಮೈಕೆಲ್ ಬ್ರೇಸ್ವೆಲ್ ಅವರನ್ನು ಒಂದು ಕೋಟಿ ರೂಪಾಯಿಗೆ ತನ್ನದಾಗಿಸಿಕೊಂಡಿತ್ತು. ಅದೇ ರೀತಿ ಟೂರ್ನಿಯ ಮೊದಲ ಕೆಲವು ಪಂದ್ಯಗಳಿಗೆ ಶ್ರೀಲಂಕಾದ ಸ್ಪಿನ್ನರ್ ವಾನಿಂದು ಹಸರಂಗ ಅವರೂ ಇರುವುದಿಲ್ಲ. ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಅವರು ಅಲ್ಲಿ ಏಕ ದಿನ ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.