ಬೆಂಗಳೂರು: ಏಕದಿನ ವಿಶ್ವಕಪ್ನಲ್ಲಿ ಮೂರನೇ ಬಾರಿ ವಿಶ್ವ ಚಾಂಪಿಯನ್ ಪಟ್ಟಕೇರಲು ಭಾರತ ತಂಡಕ್ಕೆ ಇನ್ನೊಂದೇ ಹೆಜ್ಜೆ ಬಾಕಿ. ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ. ಆಡಿದ ಎಲ್ಲ 10 ಪಂದ್ಯಗಳನ್ನು ಗೆದ್ದು ಬೀಗಿರುವ ಭಾರತ 12 ವರ್ಷಗಳ ಬಳಿಕ ಮತ್ತೆ ತವರಿನಲ್ಲಿ ವಿಶ್ವಕಪ್ ಎತ್ತಿ ಇತಿಹಾಸ ನಿರ್ಮಿಸಲು ಕಾತರಗೊಂಡಿದೆ. ಟೀಮ್ ಇಂಡಿಯಾದ ಇದುವರೆಗಿನ 10 ಪಂದ್ಯಗಳ ವಿಜಯದುಂದುಭಿಯ ವರದಿ ಇಲ್ಲಿದೆ.
ಸೆಮಿ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದು ಫೈನಲ್ ಪ್ರವೇಶ
ನಾಲ್ಕು ವರ್ಷಗಳ ಬಳಿಕ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೆಮಿಫೈನಲ್ನಲ್ಲಿ ಮತ್ತೆ ಮುಖಾಮುಖಿಯಾಗಿತ್ತು. 2019ರಲ್ಲಿ ಭಾರತದ ವಿಶ್ವಕಪ್ ಫೈನಲ್ಗೆ ಅಡ್ಡಗಾಲಿಟ್ಟಿದ್ದ ನ್ಯೂಜಿಲ್ಯಾಂಡ್ ಈ ಬಾರಿಯೂ ಇಂತಹದ್ದೇ ಆಘಾತ ನೀಡದಿರಲಿ ಎಂದು ಶತಕ ಕೋಟಿ ಭಾರತೀಯರು ದೇವರಲ್ಲಿ ಪ್ರಾರ್ಥಿಸಿದ್ದರು. ಭಾರತ ಈ ಪಂದ್ಯದಲ್ಲಿ 70 ರನ್ಗಳ ಗಲುವು ಸಾಧಿಸಿ ಫೈನಲ್ ಫೈನಲ್ ಪ್ರವೇಶಿಸಿತು. ಅಲ್ಲಿಗೆ ಎಲ್ಲರ ಪ್ರಾರ್ಥನೆಗೆ ಫಲ ಸಿಕ್ಕಿತು. ವಿರಾಟ್ ಕೊಹ್ಲಿ ಅವರು ಶತಕ ಬಾರಿಸುವ ಮೂಲಕ ತಮ್ಮ ರೋಲ್ ಮಾಡಲ್ ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ನ 49 ಶತಕದ ದಾಖಲೆಯನ್ನು ಮುರಿದು ಏಕದಿನ ಕ್ರಿಕೆಟ್ಗೆ ಹೊಸ ಸಾಮ್ರಾಟನಾದರು. ಅಯ್ಯರ್ ಕೂಡ ಶತಕ ಬಾರಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಶಮಿ 7 ವಿಕೆಟ್ ಸಾಧನೆ
ಭಾರತದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್ಗೆ ಸೋಲಿನ ಏಟು ನೀಡಿದ್ದು ಮೊಹಮ್ಮದ್ ಶಮಿ ಅವರು. 9.5 ಓವರ್ಗಳನ್ನು ಎಸೆದ ಶಮಿ 57 ರನ್ ನೀಡಿ 7 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿಗೆ ಕಾರಣರಾದರು.
ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 397 ರನ್ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ತಂಡ 48.5 ಓವರ್ಗಳ ಮುಕ್ತಾಯಗೊಂಡಾಗ 327 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಅಂದ ಹಾಗೆ ಭಾರತ ತಂಡ ಹಾಲಿ ವಿಶ್ವ ಕಪ್ನಲ್ಲಿ ಯಾವುದೇ ತಂಡಕ್ಕೆ 50 ಓವರ್ಗಳನ್ನು ಪೂರ್ತಿಯಾಗಿ ಆಡಲು ಬಿಡಲಿಲ್ಲ. ಇದು ಕೂಡ ಭಾರತ ತಂಡದ ಪಾಲಿಗೆ ದಾಖಲೆಯಾಗಿದೆ.
ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಜಯ
ಭಾರತ ತಂಡ ವಿಶ್ವಕಪ್ ಅಭಿಯಾನ ಆರಂಭಿಸಿದ್ದು 5 ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ. ಅಕ್ಟೋಬರ್ 8ರಂದು ಚೆನ್ನೈಯ ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಅವರ ಬ್ಯಾಟಿಂಗ್ ನೆರವಿನಿಂದ 49.3 ಓವರ್ಗಳಲ್ಲಿ 199 ರನ್ಗೆ ಕುಸಿಯಿತು. ಗುರಿ ಬೆನ್ನಟ್ಟಿದ ಭಾರತ ಕೂಡ ಆರಂಭಿಕ ಆಘಾತ ಎದುರಿಸಿತು. 2 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಈ ವೇಳೆ ಜತೆಯಾದ ವಿರಾಟ್ ಕೊಹ್ಲಿ(85) ಮತ್ತು ಕೆ.ಎಲ್ ರಾಹುಲ್(ಅಜೇಯ 97) ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ತಂಡಕ್ಕ ಸ್ಮರಣೀಯ ಗೆಲುವು ತಂದು ಕೊಟ್ಟರು. ಭಾರತ 41.2 ಓವರ್ಗಳಲ್ಲಿ 4 ವಿಕೆಟ್ಗೆ 201 ರನ್ ಬಾರಿಸಿ ಗೆಲುವಿನ ನಗೆ ಬೀರಿತ್ತು.
ಕಪಿಲ್ ದೇವ್ ಅವರಂತೆ ಪಂದ್ಯ ಗೆಲ್ಲಿಸಿದ ರಾಹುಲ್
ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ನಡೆಸಿದ ಭಾರತ ಘಾತಕ ಬೌಲಿಂಗ್ ನಡೆಸಿ ಕಮಿನ್ಸ್ ಪಡೆಯನ್ನು 199 ರನ್ಗೆ ಕಟ್ಟಿ ಹಾಕಿತ್ತು. ಸಣ್ಣ ಮೊತ್ತವನ್ನು ನಮ್ಮ ಅಗ್ರ ಕ್ರಮಾಂಕದ ಬ್ಯಾಟರ್ಗಳು ಬೆನ್ನಟ್ಟಬಹುದು ಎಂದು ಯೋಚಿಸಿ ರಾಹುಲ್ ಸ್ನಾನ ಮಾಡಿ ವಿಶ್ರಾಂತಿ ಪಡೆಯವ ಯೋಜನೆಯಲ್ಲಿದ್ದರು. ಆದರೆ ಅವರು ಬಾತ್ ರೂಮ್ನಿಂದ ಹೊರ ಬರುತ್ತಿದ್ದಂತೆ 2 ರನ್ಗೆ ತಂಡದ ಮೂರು ವಿಕೆಟ್ ಉರುಳಿ ಹೋಗಿತ್ತು. ಸರಿಯಾಗಿ ದೇಹದ ಒದ್ದೆಯನ್ನು ಒರೆಸಿಕೊಳ್ಳದೆ ತರಾತುರಿಯಲ್ಲಿ ಪ್ಯಾಟ್ ಮತ್ತು ಗ್ಲೌಸ್ ಕಟ್ಟಿಕೊಂಡು ಮೈದಾನಕ್ಕೆ ಓಡಿ ಬಂದು ಅಜೇಯ 97 ರನ್ಗಳ ಕೊಡುಗೆ ನೀಡಿ ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟರು. ಅವರು ಬಾತ್ ರೂಮ್ನಿಂದ ಓಡಿ ಬಂದ ವಿಚಾರವನ್ನು ಪಂದ್ಯದ ಮುಕ್ತಾಯಕ ಬಳಿಕ ಹೇಳಿದ್ದರು. ಈ ಪಂದ್ಯದಲ್ಲಿ ಜಡೇಜಾ ಮೂರು ವಿಕೆಟ್ ಕಿತ್ತಿದ್ದರು. 97 ರನ್ ಗಳಿಸಿದ ರಾಹುಲ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು.
ಇದನ್ನೂ ಓದಿ World Cup Final: ಭಾರತ-ಆಸೀಸ್ ಫೈನಲ್ ಪಂದ್ಯಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹಾಜರ್!
ಆಫ್ಘನ್ ವಿರುದ್ಧ ಅಮೋಘ ಗೆಲುವು
ಟೀಮ್ ಇಂಡಿಯಾ ಎರಡನೇ ಗೆಲುವು ಸಾಧಿಸಿದ್ದು ಅಫಘಾನಿಸ್ತಾನ ವಿರುದ್ಧ. ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ದಿಟ್ಟ ಬ್ಯಾಟಿಂಗ್ ನಡೆಸಿ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 272 ರನ್ ಬಾರಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಭಾರತ ಕೇವಲ 2 ವಿಕೆಟ್ ನಷ್ಟಕ್ಕೆ 35 ಓವರ್ಗಳಲ್ಲಿ 273 ರನ್ ಬಾರಿಸಿ ಗೆಲುವು ಕಂಡಿತು. ನಾಯಕ ರೋಹಿತ್ ಶರ್ಮ ಅವರು ಸ್ಫೋಟಕ ಬ್ಯಾಟಿಂಗ್ ನಡೆಸಿ 131 ರನ್ ಚಚ್ಚಿ ಶತಕ ಸಂಭ್ರಮಿಸಿದ್ದರು. ಈ ಶತಕದೊಂದಿಗೆ ವಿಶ್ವಕಪ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. ಸಚಿನ್ ಅವರ 6 ಶತಕದ ದಾಖಲೆ ಪತನಗೊಂಡಿತು. ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರೋಹಿತ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಜಸ್ಪ್ರೀತ್ ಬುಮ್ರಾ 4 ವಿಕೆಟ್ ಕಬಳಿಸಿದ್ದರು.
ಪಾಕಿಸ್ತಾನಕ್ಕೆ ಮತ್ತೆ ಸೋಲು
ವಿಶ್ವಕಪ್ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಅಜೇಯ ಗೆಲುವಿನ ದಾಖಲೆಯನ್ನು ಮತ್ತೆ ಮುಂದುವರಿಸಿತು. ನರೇಂದ್ರ ಮೋದಿ ಕ್ರಿಕೆಟ್ ಸ್ಡೇಡಿಯಂನಲ್ಲಿ ಅಕ್ಟೋಬರ್ 14ರಂದು ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ನಾಟಕೀಯ ಕುಸಿತ ಕಂಡ ಪಾಕಿಸ್ತಾನ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ 7 ವಿಕೆಟ್ಗಳ ಅಂತರದ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತ್ತು. ನಾಯಕ ರೋಹಿತ್ ಶರ್ಮ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಗಮನಸೆಳೆದರು. 63 ಎಸೆತಗಳಲ್ಲಿ 86 ರನ್ ಗಳಿಸಿ ನೆರೆದಿದ್ದ ಅಭಿಮಾನಿಗಳಿಗೆ ಬರಪೂರ ರಂಜನೆ ನೀಡಿದರು. ಶ್ರೇಯಸ್ ಅಯ್ಯರ್(53*) ಅಜೇಯ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. 19 ರನ್ಗೆ 2 ವಿಕೆಟ್ ಕಿತ್ತ ಜಸ್ಪ್ರೀತ್ ಬುಮ್ರಾ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಭಾರತ ಈ ಗೆಲುವಿನಿಂದಿಗೆ ಪಾಕ್ ವಿರುದ್ಧ ಆಡಿದ ಎಲ್ಲ 8 ವಿಶ್ವಕಪ್ ಪಂದ್ಯವನ್ನು ಗೆದ್ದ ಸಾಧನೆ ಮಾಡಿತು.
ಇದನ್ನೂ ಓದಿ Virat kohli: ಕೊಹ್ಲಿಗೆ 100 ಶತಕಗಳ ಸಚಿನ್ ದಾಖಲೆ ಮುರಿಯಲು ಸಾಧ್ಯವೆ? ಲೆಕ್ಕಾಚಾರ ಹೀಗಿದೆ!
ಬಾಂಗ್ಲಾ ವಿರುದ್ಧ 7 ವಿಕೆಟ್ ಜಯ
ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದ ಭಾರತ ತಂಡ ನಾಲ್ಕನೇ ಗೆಲುವು ದಾಖಲಿಸಿದ್ದು ನೆರೆಯ ಬಾಂಗ್ಲಾದೇಶ ವಿರುದ್ಧ. ಪುಣೆಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 256 ರನ್ ಬಾರಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಭಾರತ ವಿರಾಟ್ ಕೊಹ್ಲಿಯ(103*) ಅಜೇಯ ಶತಕದ ನೆರವಿನಿಂದ 41.3 ಓವರ್ಗಳಲ್ಲಿ ಮೂರು ವಿಕೆಟ್ಗೆ 261 ರನ್ ಬಾರಿಸಿ ಗೆಲುವು ದಾಖಲಿಸಿತ್ತು. ಶುಭಮನ್ ಗಿಲ್ 53 ರನ್ ಬಾರಿಸಿದ್ದರು. ಬೌಲಿಂಗ್ನಲ್ಲಿ ಮಿಂಚಿದ ಬುಮ್ರಾ, ಸಿರಾಜ್ ಮತ್ತು ಜಡೇಜಾ ತಲಾ 2 ವಿಕೆಟ್ ಉರುಳಿಸಿದ್ದರು. ಶತಕದ ಸಾಧನೆಗಾಗಿ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದಿತ್ತು.
20 ವರ್ಷಗಳ ಬಳಿಕ ಕಿವೀಸ್ ವಿರುದ್ಧ ಗೆಲುವು
ಭಾರತ ಕಳೆದ 20 ವರ್ಷದಿಂದ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಮಾತ್ರ ಕಂಡಿತ್ತು. ಆದರೆ ಈ ಸೋಲಿನ ಕೊರಗನ್ನು ನೀಗಿಸಿದ್ದು ಈ ಬಾರಿಯ ವಿಶ್ವಕಪ್ನಲ್ಲಿ. ಧರ್ಮಶಾಲದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್ಗಳ ಗೆಲುವು ಸಾಧಿಸಿ 20 ವರ್ಷಗಳ ಗೆಲುವಿನ ಬರವನ್ನು ನೀಗಿಸಿತು. ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ನ್ಯೂಜಿಲ್ಯಾಂಡ್ ರಚಿನ್ ರವೀಂದ್ರ(75) ಅವರ ಅರ್ಧಶತಕ ಮತ್ತು ಡೇರಿಯಲ್ ಮಿಚೆಲ್(130) ಅವರ ಶತಕದ ಸಾಹಸದಿಂದ 273ರನ್ಗೆ ಆಲೌಟ್ ಆಯಿತು. ಜವಾಬಿತ್ತ ಭಾರತಕ್ಕೆ ವಿರಾಟ್ ಕೊಹ್ಲಿ 95 ರನ್ ಹಾಗೂ ರವೀಂದ್ರ ಜಡೇಜಾ ಸಿಡಿಸಿದ ಅಜೇಯ 39 ರನ್ ಬಾರಿಸಿ ಗೆಲುವು ತಂದು ಕೊಟ್ಟರು. ನಾಯಕ ರೋಹಿತ್ ಶರ್ಮ 46 ರನ್ ಬಾರಿಸಿದರು. ಘಾತಕ ದಾಳಿ ನಡೆಸಿ 54 ರನ್ಗೆ 5 ವಿಕೆಟ್ ಕಿತ್ತ ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಇದನ್ನೂ ಓದಿ World Cup Final: ಭಾರತ-ಆಸೀಸ್ ಫೈನಲ್ ಪಂದ್ಯಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹಾಜರ್!
ಹಾಲಿ ಚಾಂಪಿಯನ್ಗೆ ಸೋಲಿನ ಏಟು
ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ರೋಹಿತ್(87) ಮತ್ತು ಸೂರ್ಯಕುಮಾರ್(49) ಅವರ ಬ್ಯಾಟಿಂಗ್ ಸಾಹಸದಿಂದ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ನಷ್ಟಕ್ಕೆ 229 ರನ್ ಗಳಿಸಿತು. ಸಣ್ಣ ಮೊತ್ತಕ್ಕೆ ಭಾರತವನ್ನು ಕಟ್ಟಿಹಾಕಿದ ಜೋಶ್ನಲ್ಲಿ ಗುರಿ ಬೆನ್ನಟ್ಟಲಾರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು 34.5 ಓವರ್ಗಳಲ್ಲಿ 129 ರನ್ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ಘಾತಕ ಬೌಲಿಂಗ್ ದಾಳಿ ನಡೆಸಿ 22 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತ ಮೊಹಮ್ಮದ್ ಶಮಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದಿದ್ದರು. ಭಾರತ ಭರ್ತಿ 100ರನ್ ಅಂತರದ ಗೆಲುವು ಸಾಧಿಸಿತು.
ಲಂಕಾ ವಿರುದ್ಧ ಗೆದ್ದು ಸೆಮಿಗೆ ಲಗ್ಗೆಯಿಟ್ಟ ಭಾರತ
ನವೆಂಬರ್ 2ರಂದು ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ರೋಹಿತ್ ಶರ್ಮ ಪಡೆ ಶ್ರೀಲಂಕಾ ವಿರುದ್ಧ ದಾಖಲೆಯ 302 ರನ್ಗಳ ಗೆಲುವು ಸಾಧಿಸಿ ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತ್ತು. ಇತ್ತಂಡಗಳ ನಡುವಣ ಈ ಪಂದ್ಯ ಏಷ್ಯಾಕಪ್ ಫೈನಲ್ ಪಂದ್ಯದ ಮುಂದುವರಿದ ಪುನರಾವರ್ತನೆಯಾಗಿತ್ತು. ಆ ಪಂದ್ಯದಲ್ಲಿ ಲಂಕಾ ಕಳಪೆ ಪ್ರದರ್ಶನ ತೋರಿ 50 ರನ್ಗೆ ಆಲೌಟ್ ಆಗಿತ್ತು. ವಿಶ್ವಕಪ್ನಲ್ಲಿ 55 ರನ್ಗೆ ಸರ್ವಪತನ ಕಾಣುವ ಮೂಲಕ 302 ರನ್ ಅಂತರದ ಸೋಲು ಕಂಡಿತು.
ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ, ವಿರಾಟ್ ಕೊಹ್ಲಿ (88), ಶುಭಮನ್ ಗಿಲ್(92) ಮತ್ತು ಶ್ರೇಯಸ್ ಅಯ್ಯರ್(82) ಅವರು ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. ಬೃಹತ್ ಮೊತ್ತವನ್ನು ಕಂಡು ಆರಂಭದಲ್ಲೇ ಬೆದರಿದ ಲಂಕಾ ನಾಟಕೀಯ ಕುಸಿತ ಕಂಡು 19.4 ಓವರ್ಗಳಲ್ಲಿ 55 ರನ್ಗೆ ಆಲೌಟ್ ಆಗಿ ಹೀನಾಯ ಸೋಲಿಗೆ ತುತ್ತಾಗಿತ್ತು. 18 ರನ್ಗೆ 5 ವಿಕೆಟ್ ಕಿತ್ತ ಮೊಹಮ್ಮದ್ ಶಮಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆಯ ಮೊತ್ತದ ಗೆಲುವು
ಅಜೇಯ ಗೆಲುವಿನ ನಾಗಲೋಟ ಮುಂದುವರಿಸಿದ್ದ ಭಾರತದ ಈ ಪರಾಕ್ರಮಕ್ಕೆ ದಕ್ಷಿಣ ಆಫ್ರಿಕಾ ಬ್ರೇಕ್ ಹಾಕಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿತು. ಘಾತಕ ಬೌಲಿಂಗ್ ದಾಳಿ ನಡೆಸಿದ ಭಾರತ 243 ರನ್ಗಳ ಅಂತರದ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ವಿರಾಟ್ ಕೊಹ್ಲಿಯ(101*) ಶತಕ ಮತ್ತು ಶ್ರೇಯಸ್ ಅಯ್ಯರ್(77) ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಜೋಶ್ ಮರೆತು 27.1 ಓವರ್ಗಳಲ್ಲಿ 83 ರನ್ ಬಾರಿಸಿ ಸರ್ವಪತನ ಕಂಡಿತು. ಭಾರತ 243 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಭಾರತ ಪರ ಜಡೇಜಾ 5 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಮೊಹಮ್ಮದ್ ಶಮಿ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರು.
ಸಚಿನ್ ದಾಖಲೆ ಸರಿಗಟ್ಟಿದ ಕೊಹ್ಲಿ
ಇದೇ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ನ ಸಾರ್ವಕಾಲಿಕ 49 ಶತಕದ ದಾಖಲೆಯನ್ನು ಸರಿಗಟ್ಟಿದ್ದರು. ನಿಧಾನಗತಿ ಬ್ಯಾಟಿಂಗ್ ನಡೆಸಿದ್ದ ಕೊಹ್ಲಿ 121 ಎಸೆತಗಳಿಂದ ಅಜೇಯ 101 ರನ್ ಬಾರಿಸಿದ್ದರು. ಅವರ ಈ ಸಾಧನೆಗಾಗಿ ಪಂದ್ಯ ಶ್ರೇಷ್ಠ ಪ್ರಸಶ್ತಿ ನೀಡಿ ಗೌರವಿಸಲಾಗಿತ್ತು.
ಅಂತಿಮ ಲೀಗ್ ಪಂದ್ಯದಲ್ಲೂ ಗೆದ್ದ ಭಾರತ
ಭಾನುವಾರ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತನ್ನ ನಿರ್ಧಾರಕ್ಕೆ ಪೂರಕವಾಗಿ ಆಡಿತು. ಆರಂಭದಿಂದಲೂ ಕೊನೇ ತನಕ ರನ್ಗಳನ್ನು ಗಳಿಸುತ್ತಾ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಸ್ಕಾಟ್ ಎಡ್ವರ್ಡ್ ನೇತೃತ್ವದ ಡಚ್ಚರ ಪಡೆ 47. 5 ಓವರ್ಗಳಲ್ಲಿ 250 ರನ್ಗಳಿಗೆ ಆಲ್ಔಟ್ ಆಗಿ ಸೋಲೊಪ್ಪಿಕೊಂಡಿತು. ಭಾರತ ಈ ಗೆಲುವಿನೊಂದಿಗೆ ಆಡಿದ ಎಲ್ಲ 9 ಲೀಗ್ ಪಂದ್ಯಗಳನ್ನು ಗೆದ್ದು ವಿಶ್ವಕಪ್ನಲ್ಲಿ ದಾಖಲೆ ಬರೆಯಿತು. ಅತ್ಯಧಿಕ ಪಂದ್ಯಗಳನ್ನು ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ರಾಹುಲ್ ದಾಖಲೆಯ ಶತಕ
ನೆದರ್ಲೆಂಡ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಕೆ.ಎಲ್ ರಾಹುಲ್ 62 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವೇಳೆ ಅವರು 2023 ರ (ಹಾಲಿ ಆವೃತ್ತಿಯ) ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ ಶತಕ ಬಾರಿಸಿದ ರೋಹಿತ್ ಶರ್ಮಾ ಅವರ ದಾಖಲೆ ಅವರು ಮುರಿದರು. ಶ್ರೇಯಸ್ ಅಯ್ಯರ್ ಅವರು ಅಜೇಯ 128 ರನ್ ಬಾರಿಸಿ ಚೊಚ್ಚಲ ವಿಶ್ವಕಪ್ ಶತಕವನ್ನು ದಾಖಲಿಸಿದರು. ಜತೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ರೋಹಿತ್(61), ಶುಭಮನ್ ಗಿಲ್(51) ಮತ್ತು ವಿರಾಟ್ ಕೊಹ್ಲಿ 51 ರನ್ ಬಾರಿಸಿದರು. ಬೌಲಿಂಗ್ನಲ್ಲಿಯೂ ಮಿಂಚಿದ ರೋಹಿತ್ ಮತ್ತು ವಿರಾಟ್ ತಲಾ 1 ವಿಕೆಟ್ ಪಡೆದರು. ಉಳಿದಂತೆ ಕುಲ್ದೀಪ್, ಬುಮ್ರಾ, ಸಿರಾಜ್ ಮತ್ತು ಜಡೇಜಾ ತಲಾ 2 ವಿಕೆಟ್ ಕಿತ್ತರು. ಶಮಿ ವಿಕೆಟ್ ಲೆಸ್ ಎನಿಸಿಕೊಂಡರು.