ಬರ್ಮಿಂಗ್ಹಮ್ : ಭಾರತದ ಮಹಿಳಾ ಕುಸ್ತಿಪಟು ಅನ್ಶು ಮಲಿಕ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತಕ್ಕೆ ಕುಸ್ತಿ ವಿಭಾಗದಲ್ಲಿ ಮೊದಲ ಪದಕ ಲಭಿಸಿದೆ. ಶುಕ್ರವಾರ ರಾತ್ರಿ ನಡೆದ ೫೭ ಕೆ.ಜಿ ವಿಭಾಗದ ಫೈನಲ್ ಹಣಾಹಣಿಯಲ್ಲಿ ಅವರು ನೈಜೀರಿಯಾದ ಸ್ಪರ್ಧಿ ವಿರುದ್ಧ ಸೋತು ಬೆಳ್ಳಿಯ ಪದಕಕ್ಕೆ ಪಾತ್ರರಾದರು.
೨೧ ವರ್ಷದ ಭಾರತದ ಕುಸ್ತಿಪಟು ಅನ್ಶು ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ, ಕಳೆದ ಬಾರಿಯ ಚಾಂಪಿಯನ್ ನೈಜೀರಿಯಾದ ಒಡುನ್ಯೊ ಅಡಕುರೆಯೊ ವಿರುದ್ಧ ೭-೩ ಅಂತರದಿಂದ ಸೋತು ರಜತ ಪದಕ ತಮ್ಮದಾಗಿಸಿಕೊಂಡರು. ಅನ್ಶು ಅವರು ಕಾಮನ್ವೆಲ್ತ್ ಗೇಮ್ಸ್‌ನ ಮೊದಲ ಪ್ರವೇಶದಲ್ಲಿಯೇ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದರು. ಕೀನ್ಯಾದ ಒಡುನ್ಯೂ ಅವರು ಬಲಿಷ್ಠ ಸ್ಪರ್ಧಿಯಾಗಿದ್ದು, ಸತತವಾಗಿ ಮೂರು ಬಾರಿ ಕಾಮನ್ವೆಲ್ತ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಆರಂಭದಿಂದ ರಕ್ಷಣಾತ್ಮಕವಾಗಿ ಆಡಲು ಅರಂಭಿಸಿದ್ದ ಅನ್ಶು ಕೊನೆ ಗಳಿಗೆಯಲ್ಲಿ ತಂತ್ರಗಾರಿಕೆ ಬದಲಿಸಿ ಎದುರಾಳಿ ಮೇಲೆ ಆಕ್ರಮಣ ಮಾಡಲು ಮುಂದಾದರು. ಈ ಸಂದರ್ಭಕ್ಕೆ ಕಾಯುತ್ತಿದ್ದ ಅವರು ಅನ್ಶು ನಿಯಂತ್ರಣ ಕಳೆದುಕೊಳ್ಳುವಂತೆ ಮಾಡಿ ಅಂಕಗಳನ್ನು ಸಂಪಾದಿಸಿದರು.
ಅಂಶು ಈ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಐರೆನ್ ವಿರುದ್ಧ ೧೦-೦ ಅಂಕಗಳಿಂದ ಜಯ ಸಾಧಿಸಿದ್ದರೆ, ಸೆಮಿಫೈನಲ್‌ನಲ್ಲಿ ಶ್ರೀಲಂಕಾದ ಸ್ಪರ್ಧಿಯ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ | CWG- 2022 | ಭಾರತ ಲಾನ್ ಬೌಲ್ಸ್ ತಂಡ ಸೆಮಿಫೈನಲ್ಸ್‌ಗೆ ಪ್ರವೇಶ