Site icon Vistara News

Virat kohli : ಕೊಹ್ಲಿ ಪಡೆದ ವಿಕೆಟ್​ಗಿಂತ ಪತ್ನಿ ಅನುಷ್ಕಾ ಸಂಭ್ರಮವೇ ಟ್ರೆಂಡ್ ಆಯಿತು

Anushaka Sharma

ಬೆಂಗಳೂರು: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್​ ಕೊಹ್ಲಿ (Virat kohli ) ರನ್​ ಗಳಿಕೆ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಹೀಗಾಗಿ ಅವರನ್ನು ಕಿಂಗ್ ಕೊಹ್ಲಿ ಎಂದೇ ಕರೆಯುತ್ತಾರೆ. ಇಂಥ ಆಟಗಾರ ಬೌಲಿಂಗ್ ಮಾಡಿ ಒಂದು ವಿಕೆಟ್​ ಪಡೆದಾಗ ಅವರ ಅಭಿಮಾನಿಗಳಿಗೆ ಆಗುವ ಸಂಭ್ರಮ ಅಷ್ಟಿಷ್ಟಲ್ಲ. ಅಂತೆಯೇ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವ ಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆದಾಗ ದೊಡ್ಡ ಸಂಭ್ರಮವೇ ಕಂಡು ಬಂತು . ಅವರು ಪಡೆದ ಆ ಒಂದು ವಿಕೆಟ್​ ಭಾರತದ ಕ್ರಿಕೆಟ್​ ಅಭಿಮಾನಿಗಳ ಮನವನ್ನು ತಣಿಸಿದೆ. ಆದರೆ, ಈ ವಿಕೆಟ್​ ಬಳಿಕ ಅತ್ಯಂತ ಹೆಚ್ಚು ಸುದ್ದಿಗೆ ಗ್ರಾಸವಾಗಿದ್ದು ಅವರ ಪತ್ನಿ ಅನುಷ್ಕಾ ಶರ್ಮಾ. ಗ್ಯಾಲರಿಯಲ್ಲಿ ಕುಳಿತು ಮ್ಯಾಚ್ ನೋಡುತ್ತಿದ್ದ ಅವರು ಜೋರಾಗಿ ಚಪ್ಪಾಳೆ ತಟ್ಟಿ, ಮನದುಂಬಿ ನಗುತ್ತಾ ಸಂಭ್ರಮಿಸಿದರು. ಈ ದೃಶ್ಯ ಪಂದ್ಯದ ನೇರ ಪ್ರಸಾರದ ಕ್ಯಾಮೆರಾಗಳ ಕಣ್ಣಿಗೆ ಬಿತ್ತು. ವಿರಾಟ್​ ಪಡೆದ ವಿಕೆಟ್​ಗಿಂತ ಆ ವಿಡಿಯೊ ದೊಡ್ಡ ಸುದ್ದಿಯಾಯಿತು.

ವಿರಾಟ್ ಕೊಹ್ಲಿ ವಿಕೆಟ್​ ಪಡೆದ ತಕ್ಷಣ ಟೀಮ್ ಇಂಡಿಯಾದ ಎಲ್ಲರೂ ಸಂಭ್ರಮಿಸಿದರು. ಪ್ರೇಕ್ಷಕರ ಅಬ್ಬರವೂ ಜೋರಾಯಿತು. ಅನುಷ್ಕಾ ಶರ್ಮಾ ಕೂಡ ಜೋರಾಗಿ ನಕ್ಕು ಸಂಭ್ರಮಿಸಿದರು. ಹೀಗಾಗಿ ಟ್ವಿಟರ್​ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಅನುಷ್ಕಾ ಶರ್ಮಾ ಟ್ರೆಂಡ್​ ಸೃಷ್ಟಿಸಿದರು.

ವಿರಾಟ್ ಕೊಹ್ಲಿಯ (Virat kohli ) ಬ್ಯಾಟಿಂಗ್ ಸಾಧನೆಗಳನ್ನು ವಿವರಿಸುವ ಅಗತ್ಯವೇ ಇಲ್ಲ. ಅವರು ಕ್ರಿಕೆಟ್​​ ದಂತಕಥೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅವರು 49 ಏಕದಿನ ಶತಕಗಳನ್ನು ಹೊಂದಿದ್ದಾರೆ ಮತ್ತು ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಏಕದಿನ ಶತಕಗಳ ದಾಖಲೆಯನ್ನು ಮುರಿಯುವ ಹೊಸ್ತಿಲಲ್ಲಿದ್ದಾರೆ. ಆದಾಗ್ಯೂ, ಅವರು ಬೌಲಿಂಗ್ ಮಾಡುವುದನ್ನು ನೋಡುವುದಕ್ಕೂ ಅಭಿಮಾನಿಗಳ ತುದಿಗಾಲಲ್ಲಿ ನಿಲ್ಲುತ್ತಾರೆ. ಅಂತೆಯೇ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡಿ ವಿಕೆಟ್ ಪಡೆದಿದ್ದಾರೆ. ವೃತ್ತಿಜೀವನದ ಆರಂಭಿಕ ಹಂತದಲ್ಲಿ ಅವರು ಕೆಲವೊಮ್ಮೆ ತಮ್ಮ ಬೌಲಿಂಗ್ ಮಾಡುತ್ತಿದ್ದರು. ಬಳಿಕ ನಿಲ್ಲಿಸಿದ್ದರು. ಇದೀಗ ಅಭಿಮಾನಿಗಳ ಒತ್ತಾಸೆ ಮೇರೆಗೆ ನಾಯಕ ರೋಹಿತ್ ಅವರಿಗೆ ಬೌಲಿಂಗ್ ನೀಡಿದ್ದಾರೆ. ಅವರು ಬೌಲಿಂಗ್ ಮಾಡಿ ನೆದರ್ಲ್ಯಾಂಡ್ಸ್ ನಾಯಕನ ವಿಕೆಟ್​ ಉರುಳಿಸಿದ್ದಾರೆ.

ಏಕದಿನ ವಿಶ್ವಕಪ್ 2023ರಲ್ಲಿ ಎರಡನೇ ಬಾರಿಗೆ ಬೌಲಿಂಗ್ ಮಾಡುವ ಮೂಲಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಭಿಮಾನಿಗಳಿಗೆ ಖುಷಿ ಕೊಟ್ಟರು. ನೆದರ್ಲ್ಯಾಂಡ್ಸ್ ವಿರುದ್ಧ ಭಾರತೀಯ ನಾಯಕ ರೋಹಿತ್ ಶರ್ಮಾ ಪ್ರಯತ್ನಿಸಿದ ಬೌಲಿಂಗ್ ಆಯ್ಕೆಗಳಲ್ಲಿ ಕಿಂಗ್ ಕೊಹ್ಲಿ ಕೂಡ ಒಬ್ಬರಾದರು. ಭಾರತದ ಸ್ಟಾರ್ ಬ್ಯಾಟ್ಸ್ಮನ್ ಕೆಲವು ವಾರಗಳ ಹಿಂದೆ ನೆಟ್ಸ್​ನಲ್ಲಿ ಬೌಲಿಂಗ್ ಅಭ್ಯಾಸ ಮಾಡಿದ್ದರು.

ಇದನ್ನೂ ಓದಿ : ind vs ned : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಿಕ್ಸರ್ ಗಳ ದೀಪಾವಳಿ ರಾಕೆಟ್!

9 ವರ್ಷಗಳ ನಂತರ ವಿಕೆಟ್​

ನೆದರ್ಲ್ಯಾಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರನ್ನು ಔಟ್ ಮಾಡುವ ಮೂಲಕ ವಿರಾಟ್ ಕೊಹ್ಲಿ ತಮ್ಮ ಬೌಲಿಂಗ್ ಶ್ರಮಕ್ಕೆ ಪ್ರತಿಫಲ ಪಡೆಯುವಲ್ಲಿ ಯಶಸ್ವಿಯಾದರು. 30 ಎಸೆತಗಳಲ್ಲಿ ಕೇವಲ 17 ರನ್ ಗಳಿಸಿದ್ದ ಎಡ್ವರ್ಡ್​ ಕೊಹ್ಲಿ ಎಸೆದ ವೈಡ್​ ಎಸೆತಕ್ಕೆ ರನ್ ಬಾರಿಸಲು ಹೋಗಿ ವಿಕೆಟ್​ ಕೀಪರ್ ರಾಹುಲ್​ಗೆ ಕ್ಯಾಚ್ ನೀಡಿದರು. ವಿರಾಟ್ ಕೊಹ್ಲಿ ಅವರ ಈ ವಿಕೆಟ್ 9 ವರ್ಷಗಳ ನಂತರ ಲಭಿಸಿದ ವಿಕೆಟ್​. ಅವರ ಕೊನೆಯ ವಿಕೆಟ್ 2014 ರಲ್ಲಿ ಬಂದಿತ್ತು. ನಿಖರವಾಗಿ ಹೇಳುವುದಾದರೆ, ಕೊಹ್ಲಿಯ ಕೊನೆಯ ವಿಕೆಟ್ ಮತ್ತು ಇತ್ತೀಚಿನ ವಿಕೆಟ್ ನಡುವಿನ ಅಂತರವು ನಿಖರವಾಗಿ 3572 ದಿನಗಳು.

ಕೊಹ್ಲಿಗೆ ಬೌಲಿಂಗ್ ಕೊಡಿ

ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ 2023 ರ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡಾಗ ಕೊಹ್ಲಿ ಉಳಿದ ಎಸೆತಗಳನ್ನು ಮುಗಿಸಿದ್ದರು. ಅಂದಿನಿಂದ ಎಲ್ಲೆಡೆ ‘ಕೊಹ್ಲಿ ಕೋ ಬೌಲಿಂಗ್ ದೋ’ (ಕೊಹ್ಲಿಗೆ ಬೌಲಿಂಗ್ ಮಾಡಲು ಅವಕಾಶ ನೀಡಿ) ಎಂಬ ಘೋಷಣೆಗಳು ಕೇಳಿಬರುತ್ತಿದ್ದವು. ಎಂ.ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನೆದರ್ಲ್ಯಾಂಡ್ಸ್ ಇನ್ನಿಂಗ್ಸ್​ನ 23 ನೇ ಓವರ್​ನಲ್ಲಿ ಅವರಿಗೆ ಬೌಲಿಂಗ್ ಮಾಡಲು ಹೊರಬಂದಾಗ ಅಭಿಮಾನಿಗಳ ವಿನಂತಿಗಳು ಈಡೇರಿದವು.

ಭಾರತವು ದೊಡ್ಡ ಮೊತ್ತ ಪೇರಿಸಿ ಉತ್ತಮ ಸ್ಥಾನದಲ್ಲಿತ್ತು ಮತ್ತು ವಿರಾಟ್ ಕೊಹ್ಲಿ ಮೇಲೆ ಯಾವುದೇ ಒತ್ತಡವಿರಲಿಲ್ಲ. ಬಲಗೈ ವೇಗಿ ತನ್ನ ಸುಂದರವಾದ ಸ್ವಿಂಗ್​ಗಳನ್ನು ಮಾಡಲು ಯತ್ನಿಸಿದರು. ಅವರು ಎಸೆದ ಪ್ರತಿಯೊಂದು ಚೆಂಡಿನಲ್ಲೂ ದೊಡ್ಡ ತಿರುವುಗಳಿದ್ದವು. ಕೊಹ್ಲಿ ತಮ್ಮ ಎರಡನೇ ಓವರ್​ನಲ್ಲಿ ಸ್ಕಾಟ್ ಎಡ್ವರ್ಡ್ಸ್ ಅವರ ದೊಡ್ಡ ವಿಕೆಟ್ ಪಡೆದಾಗ ಪ್ರೇಕ್ಷಕರ ಖುಷಿಗೆ ಪಾರವೇ ಇರಲಿಲ್ಲ.

Exit mobile version