Site icon Vistara News

Archana Kamath: 24ನೇ ವಯಸ್ಸಿಗೆ ಟೇಬಲ್ ಟೆನಿಸ್​ಗೆ ವಿದಾಯ ಹೇಳಿದ ಕನ್ನಡತಿ, ಒಲಿಂಪಿಯನ್​ ಅರ್ಚನಾ ಕಾಮತ್

Archana Kamath

Archana Kamath: India's Paris Olympics Star Archana Kamath, 24, Quits Table Tennis

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಅಮೋಘ ಪ್ರದರ್ಶನ ತೋರಿದ್ದ ಭಾರತೀಯ ಮಹಿಳಾ ಟೇಬಲ್‌ ಟೆನಿಸ್‌(Table Tennis) ಆಟಗಾರ್ತಿ, ಕರ್ನಾಟಕದ ಅರ್ಚನಾ ಕಾಮತ್‌(Archana Kamath) ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಟೇಬಲ್​ ಟೆನಿಸ್​​ಗೆ ವಿದಾಯ ಹೇಳಿದ್ದಾರೆ(Archana Kamath retirement). 24ರ ಹರೆಯದ ಅರ್ಚನಾ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳುತ್ತಿದ್ದು ಇದೇ ಕಾರಣಿದಿಂದ ಅವರು ಟೇಬಲ್​ ಟೆನಿಸ್​​ಗೆ ನಿವೃತ್ತಿ ಘೋಷಿಸಿದ್ದಾರೆ.

ಮಂಗಳೂರು ಮೂಲದ ವೈದ್ಯ ದಂಪತಿ ಪುತ್ರಿ ಅರ್ಚನಾ ಕಾಮತ್‌ ಅವರು ಭಾರತೀಯ ಮಹಿಳಾ ಟೇಬಲ್‌ ಟೆನಿಸ್​ನ ಉದಯೋನ್ಮುಖ ಪ್ರತಿಭೆಯಾಗಿ ಕಾಣಿಸಿಕೊಂಡಿದ್ದರು. ಆದರೆ, ವಿದ್ಯಾಭ್ಯಾಸದಲ್ಲಿ ಮುಂದುವರಿಯುವ ನಿಟ್ಟಿನಲ್ಲಿ ಟೇಬಲ್​ ಟೆನಿಸ್​​ಗೆ ವಿದಾಯ ಹೇಳಿದ್ದಾರೆ. ಅವರು ಈಗ ಇಂಟರ್‌ನ್ಯಾಶನಲ್‌ ರಿಲೇಶನ್ಸ್‌, ಸೆಕ್ಯೂರಿಟಿ ಆ್ಯಂಡ್‌ ಸ್ಟ್ರಾಟೆಜಿ ವಿಷಯದಲ್ಲಿ ಎಂ.ಎ. ಅಂತಿಮ ಸೆಮಿಸ್ಟರ್‌ ಓದುತ್ತಿದ್ದಾರೆ.

ಅರ್ಚನಾ ಅವರು ಕ್ರೀಡೆಯ ಜತೆಗೆ ಶೈಕ್ಷಣಿಕ ಜೀವನದಲ್ಲೂ ವಿಶೇಷ ಸಾಧನೆ ಮಾಡಿದ್ದಾರೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.98.72 ಅಂಕದೊಂದಿಗೆ ರಾಜ್ಯಕ್ಕೆ 9ನೇ ರ್‍ಯಾಂಕ್‌ ಪಡೆದಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಅಂಕ ಪಡೆದಿದ್ದ ಅವರು ಅರ್ಥಶಾಸ್ತ್ರದಲ್ಲಿ ಬಿ.ಎ. ಹಾನರ್ಸ್‌ ಪೂರೈಸಿದ್ದಾರೆ. ಈ ಬಾರಿಯ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತ ಮಹಿಳಾ ತಂಡ ಕ್ವಾರ್ಟರ್​ ಫೈನಲ್​ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕ್ವಾರ್ಟರ್​ ಫೈನಲ್​ ಅರ್ಚನಾ ಮಾತ್ರ ಭಾರತದ ಪರ ಗೆಲುವು ಸಾಧಿಸಿದ್ದರು. ಅವರು ಕ್ಸಿಯೋನಾ ಶಾನ್‌ಗೆ 11-6, 11-7, 11-7ರಿಂದ ಆಘಾತವಿಕ್ಕಿದ್ದರು. ಆದರೆ ತಂಡದ ಉಳಿದ ಆಟಗಾರ್ತಿಯರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಾರದ ಕಾರಣ ಅರ್ಚನಾ ಗೆಲುವು ವ್ಯರ್ಥವಾಗಿತ್ತು.

ಇದನ್ನೂ ಓದಿ Virat Kohli: ಐಪಿಎಲ್​ನ ನೆಚ್ಚಿನ ಎದುರಾಳಿ ತಂಡವನ್ನು ಹೆಸರಿಸಿದ ವಿರಾಟ್​ ಕೊಹ್ಲಿ

ಬಾರ್ಬಡೋಸ್‌ನಲ್ಲಿ 2014ರಲ್ಲಿ ನಡೆದಿದ್ದ ಐಟಿಟಿಎಫ್ ವರ್ಲ್ಡ್ ಕೆಡೆಟ್‌ ಚಾಲೇಂಜ್‌ನಲ್ಲಿ ಏಷ್ಯಾವನ್ನು ಪ್ರತಿನಿಧಿಸಿದ್ದ ಅರ್ಚನಾ ಅವರ ತಂಡ ಬೆಳ್ಳಿ ಪದಕ ಗೆದ್ದಿತ್ತು. 2016ರಲ್ಲಿ ಮೊರೊಕ್ಕೋದಲ್ಲಿ ನಡೆದ ಐಟಿಟಿಎಫ್ ಜೂನಿಯರ್‌ ಸರ್ಕ್ನೂಟ್‌ನಲ್ಲಿ ಅರ್ಚನಾ ಅವರು ಸಿಂಗಲ್ಸ್‌, ಡಬಲ್ಸ್‌ ಮತ್ತು ತಂಡವಾಗಿ ಆಡಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಒಟ್ಟಾರೆ 129 ಪದಕ ಗೆದ್ದ ಸಾಧನೆ ಮಾಡಿದ ಅರ್ಚನಾ 22 ಅಂತಾರಾಷ್ಟ್ರೀಯ, 14 ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಿ ಮಿಂಚಿದ್ದರು. 2015ರಲ್ಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಂದ ಪದಕವನ್ನು ಪಡೆದಿದ್ದಾರೆ.

ಅರ್ಚನಾ ಕಾಮತ್​ ಅವರ ಕೋಚ್ ಅನ್ಶುಲ್ ಗಾರ್ಗ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾಲ್ಕು ವರ್ಷಗಳ ನಂತರ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವುದು ತುಂಬಾ ಕಷ್ಟದ ಕೆಲಸ. ಏಕೆಂದರೆ ಆಕೆ ಟಾಪ್-100 ರ‍್ಯಾಂಕ್ ಪಟ್ಟಿಯಲ್ಲಿಲ್ಲ. ಕಳೆದೆರಡು ತಿಂಗಳಿಂದ ಕಷ್ಟಪಟ್ಟು ದುಡಿಯುತ್ತಿದ್ದರೂ ವೃತ್ತಿಪರವಾಗಿ ಬೆಳೆಯಲು ಶ್ರಮಿಸಬೇಕಾಗಿದೆ. ವಿದೇಶಕ್ಕೆ ಹೋಗಿ ಉನ್ನತ ಶಿಕ್ಷಣ ಪಡೆಯಲು ನಿರ್ಧರಿಸಿದ್ದಾಳೆ ಎಂದು ಹೇಳಿದರು.

Exit mobile version