ಕತಾರ್ನಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವ ಕಪ್ ಪಂದ್ಯಾವಳಿ (FIFA World Cup) ವೀಕ್ಷಣೆಗೆ ವಿಶ್ವದೆಲ್ಲೆಡೆಯಿಂದ ಸಾವಿರಾರು ಅಭಿಮಾನಿಗಳು ಆಗಮಿಸಿದ್ದಾರೆ. ತಮ್ಮ ದೇಶ ಆಟದಲ್ಲಿ ಇರಲಿ-ಬಿಡಲಿ, ಫುಟ್ಬಾಲ್ ಆಟದ ಮೇಲಿನ ಪ್ರೀತಿಯಿಂದ ಬಂದವರೂ ಅದೆಷ್ಟೋ ಜನರಿದ್ದಾರೆ. ಇನ್ನು ತಮ್ಮ ದೇಶವನ್ನು ಬೆಂಬಲಿಸಲು ಬಂದ ಅಭಿಮಾನಿಗಳಂತೂ ತಮ್ಮ ರಾಷ್ಟ್ರಧ್ವಜವನ್ನು ಹಿಡಿದು ಸಂಭ್ರಮಿಸುತ್ತಿದ್ದಾರೆ. ಆಟಗಾರರನ್ನು ಹುರಿದುಂಬಿಸುತ್ತಿದ್ದಾರೆ.
ಹೀಗಿರುವಾಗ ಫಿಫಾ ವರ್ಲ್ಡ್ ಕಪ್ ನೋಡಲು ಆಗಮಿಸಿದ್ದ ಅರ್ಜಿಂಟೀನಾ ದೇಶದ ಯುವತಿಯೊಬ್ಬಳು ತನ್ನ ದೇಶದ ರಾಷ್ಟ್ರಧ್ವಜವನ್ನು ಹಿಡಿಯುವ ಬದಲು, ಭಾರತದ ತ್ರಿವರ್ಣ ಧ್ವಜವನ್ನು ಮೈಮೇಲೆ ಹೊದ್ದು ಓಡಾಡುತ್ತಿದ್ದಳು. ಅರ್ಜಿಂಟೀನಾ ಮತ್ತು ಮೆಕ್ಸಿಕೊ ನಡುವೆ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿದ್ದಾಗ ಈ ಯುವತಿ ಭಾರತದ ಧ್ವಜವನ್ನು ಹಿಡಿದು, ತನ್ನ ದೇಶವನ್ನು ಬೆಂಬಲಿಸುತ್ತಿದ್ದಳು. ಆಕೆಯ ವಿಡಿಯೊವನ್ನು ಕೇರಳದ ಯಾದಿಲ್ ಎಂ ಇಕ್ಬಾಲ್ ಶೇರ್ ಮಾಡಿಕೊಂಡಿದ್ದಾರೆ. ಯಾದಿಲ್ ಅವರು ಫುಟ್ಬಾಲ್ ಪ್ರೇಮಿಯಾಗಿದ್ದು, ಇವರು ಫಿಫಾ ವರ್ಲ್ಡ್ ಕಪ್ ನೋಡಲು ಕತಾರ್ಗೆ ತೆರಳಿದ್ದಾರೆ. ಅಲ್ಲಿ ನಡೆಯುವ ವಿಶೇಷ ಸನ್ನಿವೇಶಗಳನ್ನು ಅವರು ವಿಡಿಯೊದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹಾಗೇ, ಈ ಯುವತಿಯನ್ನು ನೋಡಿ ಅಚ್ಚರಿಗೊಂಡ ಯಾದಿಲ್, ಆಕೆಯನ್ನೂ ಮಾತನಾಡಿಸಿದ್ದರು.
ಅರ್ಜಿಂಟೀನಾದ ಈ ಯುವತಿ ಹೆಸರು ಲೆಟಿ ಎಸ್ಟೆವೆಜ್ ಎಂದಾಗಿದ್ದು, ಆಕೆ ಮೈಮೇಲೆ ಭಾರತದ ಧ್ವಜ ಇದೆ. ‘ನೀವು ಅರ್ಜಿಂಟಿನಾದವರಾಗಿ ಭಾರತದ ತ್ರಿವರ್ಣ ಧ್ವಜವನ್ನೇಕೆ ಹೊದ್ದಿದ್ದೀರಿ’ ಎಂದು ಯಾದಿಲ್ ಆಕೆಯನ್ನು ಕೇಳಿದ್ದಕ್ಕೆ, ‘ಭಾರತದ ಜನರು ನಮ್ಮ ಅರ್ಜಿಂಟೀನಾವನ್ನು ತುಂಬ ಪ್ರೀತಿಸುತ್ತಾರೆ. ಇಲ್ಲಿಯೂ ಅರ್ಜೆಂಟೀನಾ ಅವರು ಬಹಳ ಪ್ರೋತ್ಸಾಹ ನೀಡುತ್ತಿದ್ದಾರೆ. ಅವರ ಪ್ರೀತಿಯನ್ನು ನೋಡಿ ನಾನು ಭಾರತದ ಧ್ವಜವನ್ನು ಮೈಮೇಲೆ ಹೊದ್ದಿದ್ದೇನೆ’ ಎಂದು ಉತ್ತರಿಸಿದ್ದಾಳೆ. ಈ ಬಗ್ಗೆ ಯಾದಿಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿವರಿಸಿದ್ದಾರೆ. ಅಷ್ಟೇ ಅಲ್ಲ, ಲೆಟಿ ಎಸ್ಟೆವೆಜ್ ಭಾರತದ ಧ್ವಜ ಹೊದ್ದಿದ್ದಕ್ಕೆ ಖುಷಿಯಾಗಿ ಯಾದಿಲ್, ಅರ್ಜಿಂಟೀನಾದ ರಾಷ್ಟ್ರಧ್ವಜ ಹೊದ್ದು, ಲೆಟಿ ಅವರೊಂದಿಗೇ ವಿಡಿಯೊ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಸಿಕ್ಕಾಪಟೆ ವೈರಲ್ ಆಗುತ್ತಿದ್ದು ನೆಟ್ಟಿಗರು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: fifa world cup history | ಫಿಫಾ ವಿಶ್ವಕಪ್ ಇತಿಹಾಸದ ಮೊದಲ 5 ಚಾಂಪಿಯನ್ ತಂಡಗಳ ಪರಿಚಯ