Site icon Vistara News

Asian Games : ಪಾಕಿಸ್ತಾನದ ಸ್ಪರ್ಧಿ ನದೀಮ್ ಔಟ್​; ನೀರಜ್​ಗೆ ಪದಕ ಬಹುತೇಕ ಖಾತರಿ

Arshad Nadeem

ಹ್ಯಾಂಗ್ಜೌ: ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಏಷ್ಯನ್ ಗೇಮ್ಸ್ (Asian Games) 2023 ರಿಂದ ಹಿಂದೆ ಸರಿದಿದ್ದಾರೆ. 26 ವರ್ಷದ ಅಥ್ಲೀಟ್​ ಮೊಣಕಾಲು ಗಾಯದಿಂದ ಬಳಲುತ್ತಿದ್ದು, ಪ್ರಸ್ತುತ ನಡೆಯುತ್ತಿರುವ ಕಾಂಟಿನೆಂಟಲ್ ಈವೆಂಟ್​ನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಪಂದ್ಯಾವಳಿಯಲ್ಲಿ ಅವರು ಭಾರತದ ನೀರಜ್ ಚೋಪ್ರಾ ಅವರ ಅತಿದೊಡ್ಡ ಪ್ರತಿಸ್ಪರ್ಧಿಗಳಲ್ಲಿ ಒಬ್ಬರಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅವರ ನಿರ್ಗಮನದಿಂದಾಗಿ ಏಷ್ಯನ್ ಕ್ರೀಡಾಕೂಟದ ಪುರುಷರ ಜಾವೆಲಿನ್ ಥ್ರೋನಲ್ಲಿ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ಇರುವುದಿಲ್ಲ. ನೀರಜ್ ಚೋಪ್ರಾ ಮತ್ತು ಅರ್ಷದ್ ಕಳೆದ ಕೆಲವು ವರ್ಷಗಳಿಂದ ಜಾವೆಲಿನ್ ಥ್ರೋನಲ್ಲಿ ತೀವ್ರ ಪೈಪೋಟಿಯನ್ನು ಒಡ್ಡುತ್ತಿದ್ದಾರೆ. ಈ ಕಾರಣದಿಂದ ಭಾರತಕ್ಕೆ ಚಿನ್ನದ ಪದಕ ಬಹುತೇಕ ಖಚಿತಗೊಂಡಿದೆ.

ವರದಿಗಳ ಪ್ರಕಾರ, ಅರ್ಷದ್ ನದೀಮ್ ಏಷ್ಯಾಡ್​ಗಾಗಿ ತರಬೇತಿ ಪಡೆಯುತ್ತಿದ್ದರು ಹಾಗೂ ಈವೆಂಟ್​ನಲ್ಲಿ ಭಾಗವಹಿಸಲು ಸಜ್ಜಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಗಾಯಗೊಂಡ ಅವರನ್ನು ಎಂಆರ್​ಐ ಸ್ಕ್ಯಾನ್​ಗೆ ಒಳಪಡಿಸಿದಾಗ ಗಾಯವನ್ನು ಬಹಿರಂಗಪಡಿಸಿದೆ. ಹೀಗಾಗಿ ಅವರು ಪಂದ್ಯಾವಳಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಪಾಕಿಸ್ತಾನದ ಚೆಫ್ ಡಿ ಮಿಷನ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಹ್ಯಾಂಗ್ಝೌನಲ್ಲಿ ನಡೆದ ಮೊದಲ ತರಬೇತಿಯ ನಂತರ ಅರ್ಷದ್ ಅವರ ಬಲ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ನಂತರ ಕ್ರೀಡಾಪಟುವನ್ನು ಎಂಆರ್​ಐ ಸ್ಕ್ಯಾನ್​​ಗೆ ಕರೆದೊಯ್ಯಲಾಯಿತು, ನಂತರ ಏಷ್ಯಾಡ್​ನಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ತಿಳಿಸಲಾಗಿದೆ.

ಇತ್ತೀಚೆಗೆ ಅರ್ಷದ್ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅವರು ಅಲ್ಲಿ 87.82 ಮೀಟರ್ ಎಸೆದಿದ್ದರು. ಈ ಕೂಟದಲ್ಲಿ 88.17 ಮೀಟರ್ ಎಸೆತದೊಂದಿಗೆ ತಮ್ಮ ಮೊದಲ ವಿಶ್ವ ಚಾಂಪಿಯನ್​ಷಿಪ್ ಚಿನ್ನದ ಪದಕವನ್ನು ನೀರಜ್ ಚೋಪ್ರಾ ಗೆದಿದ್ದರು.

ವಿಶ್ವ ಚಾಂಪಿಯನ್​​ಷಿಪ್​ನಲ್ಇ ಇಬ್ಬರೂ ಕ್ರೀಡಾಪಟುಗಳ ಪ್ರದರ್ಶನವು ಏಷ್ಯಾಡ್​ನಲ್ಲಿ ದೊಡ್ಡ ಪೈಪೋಟಿ ಎದುರಾಗುವ ನಿರೀಕ್ಷೆಗಳನ್ನು ಹುಟ್ಟಿಸಿತ್ತು. ನೀರಜ್​​ಗೆ ಹೋಲಿಸಿದರೆ ಅರ್ಷದ್ ಉತ್ತಮ ವೈಯಕ್ತಿಕ ಸಾಮರ್ಥ್ಯವನ್ನು ಹೊಂದಿದ್ದಾರೆ. ಕಳೆದ ವರ್ಷ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 90.18 ಮೀಟರ್ ಎಸೆಯುವ ಮೂಲಕ ನೀರಜ್ ಚೋಪ್ರಾ ಅನುಪಸ್ಥಿತಿಯಲ್ಲಿ ತಮ್ಮ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದರು.

ಏಷ್ಯನ್ ಗೇಮ್ಸ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಈ ಋತುವಿನಲ್ಲಿ ನೀರಜ್ ಚೋಪ್ರಾ 88.77 ಮೀಟರ್ ಎಸೆದು ಋತುವಿನ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅರ್ಷದ್ 87.82 ಮೀ ದೂರ ಎಸೆದು ಅವರ ಹತ್ತಿರದ ಪ್ರತಿಸ್ಪರ್ಧಿಯಾಗಿದ್ದಾರೆ. ಅರ್ಷದ್ ಅನುಪಸ್ಥಿತಿಯು ಈಗ ನೀರಜ್ ಅವರನ್ನು ಚಿನ್ನದ ಪದಕಕ್ಕೆ ಅತ್ಯಂತ ನೆಚ್ಚಿನ ಸ್ಪರ್ಧಿಯನ್ನಾಗಿ ಮಾಡಿದೆ. ನೀರಜ್​ ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿದ್ದಾರೆ. ಅವರು ಜಕಾರ್ತಾದಲ್ಲಿ ಚಿನ್ನ ಗೆದಿದ್ದರು. ಅರ್ಷದ್ ಅಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

Exit mobile version