ದುಬೈ : ವಿರಾಟ್ ಕೊಹ್ಲಿ (೬೦) ಅರ್ಧ ಶತಕ ಬಾರಿಸಿದಾಗ, ಭಾರತ ೭ ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದಾಗ, ಪಾಕಿಸ್ತಾನ ತಂಡದ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಔಟಾದಾಗ ಈ ಬಾರಿಯೂ ಗೆಲುವು ನಮ್ಮದೇ ಎಂದುಕೊಂಡಿದ್ದರು ಟೀಮ್ ಇಂಡಿಯಾದ ಅಭಿಮಾನಿಗಳು. ಆದರೆ, ಫಲಿತಾಂಶ ಭಾರತಕ್ಕೆ ಪೂರಕವಾಗಲಿಲ್ಲ. ಟೀಮ್ ಇಂಡಿಯಾದ ಕಲಿಗಳು ಎಷ್ಟೇ ಪ್ರಯತ್ನಪಟ್ಟರೂ ಪಾಕಿಸ್ತಾನ ತಂಡದ ಆಟಗಾರರು ಗೆಲುವು ಕಸಿದುಕೊಂಡರು. ಹೀಗಾಗಿ ಹಾಲಿ ಆವೃತ್ತಿಯ ಏಷ್ಯಾ ಕಪ್‌ನಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಯ ವಿರುದ್ಧ ಮತ್ತೊಂದು ಗೆಲುವು ಸಾಧಿಸುವ ಭಾರತ ತಂಡದ ಆಸೆ ಕೈಗೂಡಲಿಲ್ಲ. ಹಾಗಾದರೆ ಪಾಕಿಸ್ತಾನ ತಂಡದ ಗೆಲುವಿಗೆ ಕಾರಣಗಳು ಹಾಗೂ ಭಾರತ ತಂಡ ಎಸಗಿದ ಲೋಪಗಳು ಯಾವುದೆಲ್ಲ ಎಂಬುದೇ ಚರ್ಚೆಯ ವಿಷಯ.
ಆರಂಭಿಕ ಬ್ಯಾಟರ್‌ಗಳಾದ ರೋಹಿತ್ ಶರ್ಮ (೨೮) ಹಾಗೂ ಕೆ.ಎಲ್. ರಾಹುಲ್ (೨೮) ವೇಗದ ಆರಂಭ ದೊರಕಿಸಿಕೊಟ್ಟು, ಸವಾಲಿನ ಮೊತ್ತ ಪೇರಿಸಲು ಭದ್ರ ಬುನಾದಿ ಹಾಕಿದ್ದು ಸರಿಯಾಗಿದೆ. ಅದರೆ, ಅವರಿಬ್ಬರೂ ತಮ್ಮ ಮೊತ್ತವನ್ನು ಹಿಗ್ಗಿಸಲು ವಿಫಲಗೊಂಡ ಕಾರಣ ಭಾರತ ತಂಡದ ೨೦೦ ರನ್ ಸಮೀಪ ತಲುಪುವ ಯೋಜನೆಗೆ ಧಕ್ಕೆ ಉಂಟಾಯಿತು.
ವಿರಾಟ್ ಕೊಹ್ಲಿ ಉತ್ತಮವಾಗಿ ಬ್ಯಾಟ್ ಮಾಡಿದ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಹಾಗೂ ರಿಷಭ್ ಪಂತ್ ಪರಿಸ್ಥಿತಿಯ ಅನುಕೂಲಗಳನ್ನು ಬಳಸಿಕೊಳ್ಳಲು ವೈಫಲ್ಯ ಕಂಡಿದ್ದು ಕೂಡ ಭಾರತದ ಹಿನ್ನಡೆಗೆ ಕಾರಣವಾಯಿತು. ಅದರಲ್ಲೂ ರಿಷಭ್ ಪಂತ್ ಅವರ ಅನಗತ್ಯ ರಿವರ್ಸ್ ಸ್ವೀಪ್ ಮಾಡಿ ಕ್ಯಾಚ್ ನೀಡಿದ್ದ ಸ್ವತಃ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಗೂ ಹಿಡಿಸಿರಲಿಲ್ಲ. ಡಗ್ಔಟ್‌ನಲ್ಲಿ ಅವರ ಗೊಣಗಾಟ ನೇರ ಪ್ರಸಾರದ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.
ಆರಂಭಿಕ ಬ್ಯಾಟರ್‌ಗಳೂ ಉತ್ತಮ ಗಟ್ಟಿ ಅಡಿಪಾಯ ಹಾಕಿ ಕೊಟ್ಟ ಹೊರತಾಗಿಯೂ ಸೂರ್ಯಕುಮಾರ್ (೧೩), ರಿಷಭ್ ಪಂತ್ (೧೪), ಹಾರ್ದಿಕ್ ಪಾಂಡ್ಯ (೦), ದೀಪಕ್ ಹೂಡ (೧೬) ಒಟ್ಟು ಮೊತ್ತವನ್ನು ಇನ್ನಷ್ಟು ಹಿಗ್ಗಿಸಲು ನೆರವಾಗಲಿಲ್ಲ. ವಿಕೆಟ್ ಪತನಗೊಳ್ಳುತ್ತಿದ್ದಂತೆ ಆರಂಭದಲ್ಲಿ ೧೦ರ ಸರಾಸರಿಯಲ್ಲಿ ರನ್ ಗಳಿಸುತ್ತಿದ್ದ ಭಾರತದ ಗಳಿಕೆ ನಿಧಾನಗೊಂಡಿತು.
ಪಿಚ್ ನೆರವು
ದುಬೈ ಪಿಚ್‌ನಲ್ಲಿ ಟಾಸ್ ಪಂದ್ಯದ ಗೆಲುವಿನ ನಿರ್ಣಾಯಕ ಅಂಶ. ಈ ಸ್ಟೇಡಿಯಮ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳಿಗೆ ಗೆಲುವು ಕಡಿಮೆ. ರಾತ್ರಿಯಾಗುತ್ತಿದ್ದಂತೆ ಚೇಸಿಂಗ್ ಸುಲಭವಾಗುವ ಕಾರಣ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ. ಅಂತೆಯೇ ಈ ಪಂದ್ಯದಲ್ಲಿ ರೋಹಿತ್ ಶರ್ಮ ಟಾಸ್ ಸೋತರು. ಗೆದ್ದ ಪಾಕ್ ತಂಡದ ನಾಯಕ ಬಾಬರ್ ಅಜಮ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಭಾರತ ತಂಡದ ಬೌಲರ್‌ಗಳು ಈ ಪಂದ್ಯದಲ್ಲಿ ಬಹುತೇಕ ವೈಫಲ್ಯ ಅನುಭವಿಸಿದರು. ಸ್ಪಿನ್‌ಗೆ ನೆರವಾಗುತ್ತದೆ ಎಂಬ ಕಾರಣಕ್ಕೆ ಇಬ್ಬರು ಸ್ಪಿನ್ನರ್‌ಗಳನ್ನು ಆಡುವ ೧೧ರ ಬಳಗಕ್ಕೆ ಆಯ್ಕೆ ಮಾಡಿಕೊಂಡಿದ್ದರೂ, ಅವರು ಎದುರಾಳಿ ತಂಡಕ್ಕೆ ಮಿತಿ ಮೀರಿ ರನ್ ಬಿಟ್ಟುಕೊಟ್ಟರು. ಭುವನೇಶ್ವರ್ ಕುಮಾರ್ ಹಾಗೂ ಹಿಂದಿನ ಪಾಕಿಸ್ತಾನ ವಿರುದ್ಧದ ಪಂದ್ಯದ ಹೀರೊ ಹಾರ್ದಿಕ್ ಪಾಂಡ್ಯ ಕೂಡ ಸಂಪೂರ್ಣ ವೈಫಲ್ಯ ಎದುರಿಸಿದರು.
ಕಳೆದ ಅಕ್ಟೋಬರ್‌ನಲ್ಲಿ ನಡೆದ ವಿಶ್ವ ಕಪ್ ಪಂದ್ಯ ಸೇರಿದಂತೆ ಭಾನುವಾರದವರೆಗೆ ಭಾರತ ಹಾಗೂ ಪಾಕಿಸ್ತಾನ ತಂಡ ಮೂರು ಟಿ೨೦ ಪಂದ್ಯಗಳನ್ನು ಆಡಿದೆ. ಎಲ್ಲದರಲ್ಲೂ ಪಾಕಿಸ್ತಾನದ ವಿಕೆಟ್‌ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಮಿಂಚಿದ್ದಾರೆ. ಅವರನ್ನು ಕಟ್ಟಿಹಾಕುವುದಕ್ಕೆ ನಾಯಕ ರೋಹಿತ್ ಶರ್ಮ ಯಾವುದೇ ತಂತ್ರಗಾರಿಕೆ ಕಂಡುಕೊಳ್ಳದಿರುವುದು ಕೂಡ ಸೋಲಿಗೆ ಕಾರಣವಾಯಿತು. ಒತ್ತಡದ ಸ್ಥಿತಿಯಲ್ಲೂ ಅವರು ೭೧ ರನ್ ಬಾರಿಸಿದರು.
ಭಾನುವಾರದ ಪಂದ್ಯದಲ್ಲಿ ಫೀಲ್ಡಿಂಗ್ ಸೆಟ್ ಮಾಡುವಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮ ಎಡವಿದರು. ಕೆಲವೊಂದು ಕಡೆಗಳಲ್ಲಿ ಅನಗತ್ಯ ರನ್‌ಗಳು ಸೋರಿಕೆಯಾದವು. ಇದು ಪಾಕಿಸ್ತಾನ ತಂಡದ ಗೆಲುವಿಗೆ ನೆರವಾಯಿತು.
ಕೊನೆಯಲ್ಲಿ ಪಾಕಿಸ್ತಾನ ತಂಡದ ಬ್ಯಾಟರ್ ಆಸಿಫ್ ಅಲಿಯ ಕ್ಯಾಚ್ ಅನ್ನು ಅರ್ಶ್‌ದೀಪ್ ಕೈ ಬಿಟ್ಟಿರುವುದು ಕೂಡ ಸೋಲಿಗೆ ಕಾರಣವಾಯಿತು. ಅ ಕ್ಯಾಚ್ ಕೈ ಸೇರಿದ್ದರೆ ಒಂದು ಎಸೆತ ಕಡಿಮೆಯಾಗುತ್ತಿತ್ತು ಹಾಗೂ ಪಾಕಿಸ್ತಾನ ತಂಡ ಒತ್ತಡಕ್ಕೆ ಒಳಗಾಗುತ್ತಿತ್ತು.
೧೯ನೇ ಓವರ್ ಎಸೆದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ೧೯ ರನ್ ಬಿಟ್ಟು ಕೊಟ್ಟಿರುವುದು ಭಾರತ ತಂಡಕ್ಕೆ ಮುಳುವಾಯಿತು. ಅನುಭವಿ ಬೌಲರ್ ಆಗಿರುವ ಅವರು ಆ ಒಂದು ಓವರ್‌ನಲ್ಲಿ ರನ್ ನಿಯಂತ್ರಣ ಮಾಡಿದ್ದರೆ ಗೆಲುವು ಭಾರತಕ್ಕೆ ಲಭಿಸುತ್ತಿತ್ತು.
ರಿಜ್ಞಾನ್ ಎಕ್ಸ್‌ಪ್ರೆಸ್
ಪಾಕಿಸ್ತಾನ ತಂಡದ ಪರವಾಗಿ ಹೇಳುವುದಾದರೆ ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ಞಾನ್ ಅವರ ಅಮೋಘ ಅರ್ಧಶತಕವೇ ಗೆಲುವಿನ ಮೂಲ. ಭಾರತದ ಬೌಲಿಂಗ್ ವಿಭಾಗ ಮೇಲುಗೈ ಸಾಧಿಸದಂತೆ ನೋಡಿಕೊಂಡ ಅವರು ಗೆಲುವು ತಮ್ಮದಾಗಿಸಿಕೊಂಡರು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಮೊಹಮ್ಮದ್ ನವಾಜ್ ಕೇವಲ ೨೦ ಎಸೆತಗಳಲ್ಲಿ ೪೨ ರನ್ ಬಾರಿಸುವ ಮೂಲಕ ಭಾರತ ಜಯವನ್ನು ಆರಂಭದಲ್ಲೇ ಕಸಿದುಕೊಂಡಿದ್ದರು. ಉಳಿದ ಆಟಗಾರರು ಅದನ್ನು ಮುಂದುವರಿಸಿದರು. ಅವರು ಬೌಲಿಂಗ್‌ನಲ್ಲೂ ಕೇವಲ ೨೫ ರನ್ ವೆಚ್ಚದಲ್ಲಿ ಒಂದು ವಿಕೆಟ್ ಕಬಳಿಸಿದ್ದರು.
ಇದನ್ನೂ ಓದಿ | IND vs PAK | ಹೋರಾಡಿ ಸೋತ ಟೀಮ್ ಇಂಡಿಯಾ, ಪಾಕಿಸ್ತಾನ ವಿರುದ್ಧ 5 ವಿಕೆಟ್ ಪರಾಜಯ