ಮುಂಬಯಿ: ಐಪಿಎಲ್ನ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್ನ ನೂತನ ಸಹಾಯಕ ಬ್ಯಾಟಿಂಗ್ ಕೋಚ್ ಆಗಿ ಕನ್ನಡಿಗ ಅರುಣ್ ಕುಮಾರ್ ಜಗದೀಶ್ ನೇಮಕಗೊಂಡಿದ್ದಾರೆ. ಈ ವಿಚಾರವನ್ನು ಮುಂಬೈ ಇಂಡಿಯನ್ಸ್ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.
1993 ರಿಂದ 2008ರವರೆಗೆ 16 ವರ್ಷಗಳ ಕಾಲ ಕರ್ನಾಟಕ ತಂಡವನ್ನು ಪ್ರತಿನಿಸಿದ್ದ ಜಗದೀಶ್ ನಿವೃತ್ತಿ ಬಳಿಕ ಕರ್ನಾಟಕ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿದ್ದರು. ಇವರ ಕೋಚಿಂಗ್ ಅವಧಿಯಲ್ಲಿ ಕರ್ನಾಟಕ ತಂಡ 2013-14 ಮತ್ತು 2014-15ರಲ್ಲಿ ರಣಜಿ ಟ್ರೊಫಿ, ಇರಾನಿ ಕಪ್ ಮತ್ತು ವಿಜಯ್ ಹಜಾರೆ ಸೇರಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.
ಇದೀಗ 16ನೇ ಆವೃತ್ತಿಯ ಐಪಿಎಲ್ಗೆ ಮುಂಬೈ ತಂಡಕ್ಕೆ ಜಗದೀಶ್ ಸಹಾಯಕ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. “ಜಗದೀಶ್ ಅವರು ಅಪಾರ ಮಟ್ಟದ ಕ್ರಿಕೆಟ್ ಕೌಶಲ್ಯವನ್ನು ಹೊಂದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ತಂಡ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ” ಎಂದು ಮುಂಬೈ ಪ್ರಾಂಚೈಸಿ ತಿಳಿಸಿದೆ.
ಕಳೆದ ಬಾರಿಯ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಕಳಪೆ ಪ್ರದರ್ಶನ ನೀಡಿ ಎಲ್ಲರ ಟೀಕೆಗೆ ಗುರಿಯಾಗಿತ್ತು. ಹಲವು ಬಾರಿ ಚಾಂಪಿಯನ್ ಆಗಿದ್ದ ಮುಂಬೈ ಇಂಡಿಯನ್ಸ್, ಕಳೆದ ಬಾರಿ ಸೂಪರ್-8 ಹಂತಕ್ಕೂ ಅರ್ಹತೆ ಪಡೆಯದೆ ತೀವ್ರ ಮುಖಭಂಗ ಅನುಭವಿಸಿತ್ತು. ಇದೀಗ ಈ ಬಾರಿ ಉತ್ತಮ ಪ್ರದರ್ಶನ ತೋರುವ ನಿಟ್ಟಿನಲ್ಲಿ ನೂತನ ಬ್ಯಾಟಿಂಗ್ ಕೋಚ್ ನೇಮಕ ಮಾಡಿಕೊಂಡಿದೆ.
ಇದನ್ನೂ ಓದಿ | IPL 2023 | ಐಪಿಎಲ್‍ನಲ್ಲಿ ಕಡೆಗಣಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪಂಜಾಬ್ ವೇಗಿ ಸಂದೀಪ್ ಶರ್ಮ!