Site icon Vistara News

Ashes 2023: ವಿಚಿತ್ರ ರೀತಿಯಲ್ಲಿ ಶತಕ ಸಂಭ್ರಮಿಸಿದ ಖವಾಜ; ವಿಡಿಯೊ ವೈರಲ್

The Ashes

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್​ ವಿರುದ್ಧ ಸಾಗುತ್ತಿರುವ ಮೊದಲ ಆ್ಯಶಸ್​ ಟೆಸ್ಟ್(Ashes 2023)​ ಪಂದ್ಯದಲ್ಲಿ ಆರಂಭಕಾರ ಉಸ್ಮಾನ್‌ ಖವಾಜ ಅಜೇಯ ಶತಕ ಬಾರಿಸಿ ಸಂಭ್ರಮಿಸಿದ್ದಾರೆ, ಅವರ ಈ ಶತಕದ ನೆರವಿನಿಂದ ಆಸ್ಟ್ರೇಲಿಯ 5 ವಿಕೆಟ್​ಗೆ 311 ರನ್​ಗಳಿದೆ. ಆದರೆ ಶತಕ ಬಾರಿಸಿದ ವೇಳೆ ಖವಾಜ ಅವರು ವಿಚಿತ್ರ ರೀತಿಯಲ್ಲಿ ಸಂಭ್ರಮಿಸಿದ ವಿಡಿಯೊ ಇದೀಗ ಎಲ್ಲಡೆ ವೈರಲ್(viral video)​ ಆಗಿದೆ.

ವಿಕೆಟ್‌ ನಷ್ಟವಿಲ್ಲದೆ 14 ರನ್‌ ಮಾಡಿದಲ್ಲಿಂದ ಶನಿವಾರದ ಆಟ ಮುಂದುವರಿಸಿದ್ದ ಆಸ್ಟ್ರೇಲಿಯ ತಂಡ 29 ರನ್​ ತಲುಪಿದ ಅವಳಿ ಆಘಾತಕ್ಕೆ ಸಿಲುಕಿತು. ಸ್ಟುವರ್ಟ್‌ ಬ್ರಾಡ್‌ ಒಂದೇ ಓವರ್‌ನಲ್ಲಿ ಡೇವಿಡ್‌ ವಾರ್ನರ್‌ (9) ಮತ್ತು ಮಾರ್ನಸ್‌ ಲಬುಶೇನ್‌ (0) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಲಬುಶೇನ್‌ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದರು. ಸ್ಟೀವನ್‌ ಸ್ಮಿತ್‌ (16) ಕೂಡ ತಂಡದ ನೆರವಿಗೆ ನಿಲ್ಲಲಿಲ್ಲ. ಈ ವೇಳೆ ಕ್ರೀಸ್​ ಕಚ್ಚಿ ನಿಂತ ಖವಾಜ 4ನೇ ವಿಕೆಟಿಗೆ ಟ್ರಾವಿಸ್​ ಹೆಡ್‌ ಜತೆ ಸೇರಿ 81 ರನ್‌ಗಳ ಜತೆಯಾಟ ನಡೆಸಿದರು. ಹೆಡ್​ ವಿಕೆಟ್​ ಪತನದ ಬಳಿಕ ಅಲೆಕ್ಸ್​ ಕೇರಿ ಜತೆಗೂಡಿ ಮತ್ತೆ ಉತ್ತಮ ಜತೆಯಾಟ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು.

ಭಾರತ ವಿರುದ್ಧದ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ಎಡವಿದ್ದ ಅವರು ಇಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಟೆಸ್ಟ್​ನಲ್ಲಿ 15ನೇ ಶತಕ ಪೂರ್ತಿಗೊಳ್ಳುತ್ತಿದ್ದಂತೆ ಅತ್ಯಂತ ಆಕ್ರೋಶಭರಿತವಾದ ರೀತಿಯಲ್ಲಿ ಬ್ಯಾಟ್​ ಬೀಸಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು. ಇದನ್ನು ಕಂಡ ಇಂಗ್ಲೆಂಡ್​ ಆಟಗಾರರು ಒಂದು ಕ್ಷಣ ದಂಗಾದರು. ಖವಾಜ ಈ ವರ್ತನೆಗೆ ಕೆಲ ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ. ಅವರ ಮೇಲೆ ದೆವ್ವ ಬಂದಿದೆ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ Ashes 2023: ಉಸ್ಮಾನ್​ ಖವಾಜ ಶತಕ; ಆಂಗ್ಲರಿಗೆ ತಿರುಗೇಟು ನೀಡುತ್ತಿರುವ ಆಸೀಸ್​

126 ರನ್​ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿರುವ ಅವರು ಭಾನುವಾರ ತಮ್ಮ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದರೂ ಅಚ್ಚರಿಯಿಲ್ಲ. ಮತ್ತೊಂದು ತುದಿಯಲ್ಲಿ ಅಲೆಕ್ಸ್​ ಕೇರಿ 52 ರನ್​ ಬಾರಿಸಿದ್ದಾರೆ. ಅವರೂ ಕೂಡ ಶತಕ ಬಾರಿಸುವ ವಿಶ್ವಾಸದಲ್ಲಿದ್ದಾರೆ.

Exit mobile version