Site icon Vistara News

Ashish Nehra : ಭಾರತ ತಂಡದ ಬಿಗ್ ಆಫರ್ ತಿರಸ್ಕರಿಸಿದ ಆಶೀಶ್​ ನೆಹ್ರಾ!

Ashish Nehra

ನವದೆಹಲಿ: ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಅವರನ್ನು ಭಾರತದ ಟಿ 20 ತಂಡದ ಕೋಚ್ ಆಗುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಸ್ತಾಪ ಇಟ್ಟಿದೆ ಎಂಬುದಾಗಿ ವರದಿಯಾಗಿದೆ. 2023ರ ಐಸಿಸಿ ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಅವರ ಅವಧಿ ಮುಗಿದಿದೆ. ಅವರು ಮುಂದುವರಿಸಲು ಒಪ್ಪದ ಕಾರಣ ಹೊಸ ಕೋಚ್​ನ ಹುಡುಕಾಟದಲ್ಲಿದೆ ಬಿಸಿಸಿಐ. ಈ ವೇಳೆ ಚೊಚ್ಚಲ ಅವೃತ್ತಿಯಲ್ಲೇ ಗುಜರಾತ್​ ತಂಡಕ್ಕೆ ಟ್ರೋಫಿ ತಂದುಕೊಟ್ಟ ಮಾಜಿ ವೇಗದ ಬೌಲರ್ ಆಶೀಶ್​ ನೆಹ್ರಾ ಅವರನ್ನು ಸಹಾಯಕ ಸಿಬ್ಬಂದಿಯಾಗಿ ಸೇರಿಸಿಕೊಳ್ಳುವುದಕ್ಕೆ ಯೋಜನೆ ರೂಪಿಸಿಕೊಂಡಿದೆ.

ಇಂಡಿಯನ್ ಎಕ್ಸ್​ಪ್ರೆಸ್​ ವರದಿಯ ಪ್ರಕಾರ, ಆಶಿಶ್ ನೆಹ್ರಾ ಬಿಸಿಸಿಐ ನೀಡಿರುವ ದೊಡ್ಡ ಆಫರ್​ ಅನ್ನು ತಿರಸ್ಕರಿಸಿದ್ದಾರೆ

ಭಾರತ ತಂಡದ ದಶಕದ ಐಸಿಸಿ ಪ್ರಶಸ್ತಿ ಬರವನ್ನು ಮುರಿಯಲು ಮತ್ತು ಮುಂಬರುವ ಟಿ 20 ವಿಶ್ವಕಪ್ 2024 ಅನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ನೆಹ್ರಾ ಅವರನ್ನು ಸಂಪರ್ಕಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಕೋಚಿಂಗ್ ಅವಧಿಯಲ್ಲಿ ನೆಹ್ರಾ ಅವರ ಸಾಧನೆಗಳು ಈ ಆಸಕ್ತಿಗೆ ಕಾರಣವಾಗಬಹುದು. 2022 ರ ಋತುವಿನಲ್ಲಿ, ಅವರ ಮಾರ್ಗದರ್ಶನದಲ್ಲ ಐಪಿಎಲ್​ ತಂಡವು ಪ್ರಶಸ್ತಿಯನ್ನು ಗೆದ್ದಿತ್ತು. 2023 ರ ಆವೃತ್ತಿಯಲ್ಲಿ, ಗುಜರಾತ್​ ತಂಡ ಎರಡನೇ ಸ್ಥಾನವನ್ನು ಪದುಕೊಂಡಿತ್ತು.

ದ್ರಾವಿಡ್​ ಉಳಿಸಿಕೊಳ್ಳುವುದಕ್ಕೆ ತಂತ್ರ

ಟಿ20 ಐ ಮುಖ್ಯ ಕೋಚ್ ಸ್ಥಾನವನ್ನು ಆಶಿಶ್​ ನೆಹ್ರಾ ತಿರಸ್ಕರಿಸಿದ ನಂತರ ಬಿಸಿಸಿಐ ಈಗ ರಾಹುಲ್ ದ್ರಾವಿಡ್ ಅವರನ್ನು ಎಲ್ಲಾ ಮೂರು ಸ್ವರೂಪಗಳಲ್ಲಿ ಮುಖ್ಯ ಕೋಚ್ ಆಗಿ ಉಳಿಸಿಕೊಳ್ಳಲು ಉತ್ಸುಕವಾಗಿದೆ. ಅವರೊಂದಿಗೆ ಸತತವಾಗಿ ಮಾತುಕತೆ ನಡೆಸುತ್ತಿದೆ. ಮುಂದುವರಿಲು ನಿರಾಕರಿಸಿರುವ ಅವರ ಜತೆಗೆ ನಾನಾ ರೀತಿಯಲ್ಲಿ ಮಾತುಕತೆ ನಡೆಸಲಾಗುತ್ತಿದೆ.

ಇದನ್ನೂ ಓದಿ : Prasidh Krishana : ಆಸೀಸ್ ವಿರುದ್ಧ ಪಂದ್ಯದಲ್ಲಿ ಕಳಪೆ ದಾಖಲೆ ಬರೆದ ಕನ್ನಡಿಗ ಬೌಲರ್ ಪ್ರಸಿದ್ಧ್​

ಮುಂದಿನ ವರ್ಷ ನಡೆಯಲಿರುವ ಟಿ 20 ವಿಶ್ವಕಪ್ ವರೆಗೆ ರಾಹುಲ್ ದ್ರಾವಿಡ್ ತಮ್ಮ ಕೋಚಿಂಗ್ ಅವಧಿಯನ್ನು ವಿಸ್ತರಿಸಬೇಕು ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಇಬ್ಬರೂ ಒಪ್ಪಿಕೊಂಡಿದ್ದಾರೆ. ದ್ರಾವಿಡ್ ಈ ಪ್ರಸ್ತಾಪಕ್ಕೆ ಒಪ್ಪಿದರೆ, ಕೋಚಿಂಗ್ ಸಿಬ್ಬಂದಿಯಲ್ಲಿ ನಿರಂತರತೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರಂತಹ ಪ್ರಮುಖ ಸದಸ್ಯರು ಗುತ್ತಿಗೆ ನವೀಕರಣವನ್ನು ಪಡೆಯುವ ಸಾಧ್ಯತೆಯಿದೆ.

ಬಿಡುವಿಲ್ಲದ ವೇಳಾಪಟ್ಟಿ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸದ ಹೊರೆಯಿಂದಾಗಿ ದ್ರಾವಿಡ್ ದೀರ್ಘಕಾಲೀನ ಕೋಚ್​ ಪಾತ್ರಕ್ಕೆ ಬದ್ಧರಾಗುವ ಸಾಧ್ಯತೆಗಳು ಇಲ್ಲ ಎಂಬುದಾಗಿ ವರದಿಯಾಗಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗುವುದು ಅಥವಾ ಮಿತಿಮೀರಿದ ಪ್ರಯಾಣವನ್ನು ಬೇಡದ ಐಪಿಎಲ್ ಕೋಚಿಂಗ್​ ಕಡೆಗೆ ಅವರ ಒಲವಿದೆ ಎಂದು ಹೇಳಲಾಗಿದೆ.

ಐಪಿಎಲ್​ನಲ್ಲಿ ಮುಂದುವರಿಕೆ

ಆಶೀಶ್​ ನೆಹ್ರಾ ಅವರು ಐಪಿಎಲ್​ ಕೋಚಿಂಗ್​ನಲ್ಲಿ ಉತ್ತಮ ಸಾಧನೆ ಮಾಡಿರುವ ಕಾರಣ ಅವರು ಅದರಲ್ಲೇ ಮುಂದುವರಿಯಲಿದ್ದಾರೆ. ಅವರು ಗುಜರಾತ್​ ಟೈಟಾನ್ಸ್ ತಂಡದ ಕೋಚ್ ಆಗಿ ಇನ್ನೊಂದು ಪ್ರಶಸ್ತಿಯ ಕನಸು ಕಾಣುತ್ತಿದ್ದಾರೆ. ಇದೀಗ ತಂಡದಲ್ಲೂ ಬದಲಾವಣೆ ಆಗಿದೆ. ಯುವ ಬ್ಯಾಟರ್​ ಶುಭ್​ಮನ್​ ಗಿಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅವರನ್ನು ಪ್ರಶಸ್ತಿಗಾಗಿ ಸಜ್ಜುಗೊಳಿಸಲಿದ್ದಾರೆ ನೆಹ್ರಾ.

Exit mobile version