ನವದೆಹಲಿ: ಏಕದಿನ ವಿಶ್ವಕಪ್ ಕ್ರಿಕೆಟ್ (ICC World Cup 2023) ಪಂದ್ಯಾವಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಟೀಮ್ (Indian Cricket Team) ಘೋಷಣೆ ಮಾಡಿದ್ದು, ಕೊನೆಯ ಗಳಿಗೆಯಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರು ಜಾಗ ಪಡೆದಿದ್ದಾರೆ. ಈ ಮೊದಲೇ 15 ಆಟಗಾರರ ತಂಡವನ್ನು ಬಿಸಿಸಿಐ ಘೋಷಣೆ ಮಾಡಿತ್ತು. ಆಗ ಆರ್ ಅಶ್ವಿನ್ ಅವರನ್ನು ಪರಿಗಣಿಸಿರಲಿಲ್ಲ. ಆದರೆ, ತಂಡದ ಆಟಗಾರರನ್ನು ಘೋಷಿಸಲು ಸೆಪ್ಟೆಂಬರ್ 28 ಕೊನೆಯ ದಿನವಾಗಿತ್ತು. ಈ ಹಂತದಲ್ಲಿ ಬಿಸಿಸಿಐ ತಂಡದಲ್ಲಿ ಮಾರ್ಪಾಡು ಮಾಡಿ, ಗಾಯಾಳು ಅಕ್ಷರ್ ಪಟೇಲ್‌ಗೆ (Axar Patel) ಬದಲಿಯಾಗಿ ಆರ್ ಅಶ್ವಿನ್ ಅವರಿಗೆ ಮಣೆ ಹಾಕಿದೆ. ಜತೆಗೆ, ಕನ್ನಡಿಗ ಕೆ ಎಲ್ ರಾಹುಲ್ (KL Rahul) ಕೂಡ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ನಿನ್ನೆಯಷ್ಟೇ ಮುಕ್ತಾಯವಾದ ಆಸ್ಟ್ರೇಲಿಯಾದ ವಿರುದ್ಧ ಮೂರು ದಿನಗಳ ಏಕದಿನ ಪಂದ್ಯದಲ್ಲಿ ಅಶ್ವಿನ್ ಅವರು ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ 41ರನ್ ನೀಡಿ 3 ವಿಕೆಟ್ ಪಡೆದುಕೊಂಡು ಗಮನ ಸೆಳೆದಿದ್ದರು. ಅಲ್ಲದೇ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಸರಣಿಯಲ್ಲಿ ಒಟ್ಟು ನಾಲ್ಕು ವಿಕೆಟ್ ಪಡೆದ ಅಶ್ವಿನ್ ಅವರ ಆಟವು ತಂಡ ಆಯ್ಕೆಗಾರರ ಗಮನ ಸೆಳೆದ ಹಿನ್ನಲೆಯಲ್ಲಿ ಅವರಿಗೆ ಭಾರತೀಯ 15 ಸದಸ್ಯರ ಟೀಮ್‌ನಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಅಕ್ಟೋಬರ್ 8ರಿಂದ ಭಾರತ ಅಭಿಯಾನ ಶುರು
ಅಕ್ಟೋಬರ್ 8ರಂದು ಚೆನ್ನೈನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ಮೂಲಕ ಭಾರತದ ವಿಶ್ವಕಪ ಅಭಿಯಾನ ಶುರುವಾಗಲಿದೆ. ಚೆನ್ನೈನಲ್ಲಿ ಪಿಚ್‌ಗಳು ನಿಧಾನ ಮತ್ತು ಸ್ಪಿನ್ ಸಹಾಯಕವಾಗಿವೆ. ಭಾರತ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಸ್ಟೇಡಿಯಂನಲ್ಲಿ ಕೆಲವು ಪಂದ್ಯಗಳನ್ನು ಆಡಿರುವ ಅಶ್ವಿನ್ ಹೆಚ್ಚು ಪರಿಣಾಮಕಾರಿಯಾಗಬಲ್ಲರು. ಇದು ನಾಯಕ ರೋಹಿತ್ ಶರ್ಮಾಗೆ ಅನುಕೂಲಕರವಾಗಿ ಪರಿಣಮಿಸಲಿದೆ. ತಂಡದ ಏಕೈಕ ಸ್ಪೆಷಲಿಸ್ಟ್ ಆಫ್ ಸ್ಪಿನ್ನರ್ ಆಗಿರುವ ಅಶ್ವಿನ್ 115 ಒಡಿಐಗಳಿಂದ 155 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಅನುಭವು ತಂಡಕ್ಕೆ ಹೆಚ್ಚಿನ ನೆರವು ನೀಡಬಹುದು ಎಂದು ಆಯ್ಕೆಯಾಗರು ಭಾವಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ICC World Cup: ಭಾರತಕ್ಕೆ ಬಂದ ಪಾಕ್ ಕ್ರಿಕೆಟ್ ತಂಡಕ್ಕೆ ಕೇಸರಿ ಶಾಲು ಹಾಕಿ ಸ್ವಾಗತ!
ಭಾರತದ ತಂಡ ಹೀಗಿದೆ…
ರೋಹಿತ್ ಶರ್ಮಾ(ಕ್ಯಾಪ್ಟನ್), ಹಾರ್ದಿಕ್ ಪಾಂಡ್ಯಾ(ವೈಸ್ ಕ್ಯಾಪ್ಟನ್), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವೀಚಂದ್ರನ್ ಅಶ್ವಿನ್, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್.