ನವ ದೆಹಲಿ: ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ೨೦೨೨ ಕ್ರಿಕೆಟ್ ಪಂದ್ಯಾವಳಿಯನ್ನು ಅಧಿಕೃತವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸ್ಥಳಾಂತರಿಸಲಾಗಿದೆ. ಹೀಗಿದ್ದರೂ, ಪಂದ್ಯ ಆಯೋಜನೆಯ ಹಕ್ಕು ಶ್ರೀಲಂಕಾದ ಬಳಿ ಇರಲಿದೆ.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಮತ್ತು ಪ್ರಕ್ಷುಬ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಏಷ್ಯಾಕಪ್ ೨೦೨೦ ಅನ್ನು ಯುಎಇಗೆ ಸ್ಥಳಾಂತರಿಸಲಾಗಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಬುಧವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ. ಏಷ್ಯಾಕಪ್ ೨೦೨೨ ಪಂದ್ಯಾವಳಿ ಆಗಸ್ಟ್ ೨೭ ಮತ್ತು ಸೆಪ್ಟೆಂಬರ್ ೧೧ರ ನಡುವೆ ನಡೆಯಲಿದೆ.
ಶ್ರೀಲಂಕಾದಲ್ಲಿಯೇ ಟೂರ್ನಮೆಂಟ್ ಅನ್ನು ನಡೆಸುವ ಬಗ್ಗೆ ವ್ಯಾಪಕ ಸಮಾಲೋಚನೆ ನಡೆಸಿದರೂ, ಅಂತಿಮವಾಗಿ ಈಗಿನ ಪರಿಸ್ಥಿತಿಯನ್ನು ಪರಿಗಣಿಸಿ, ಯುಎಇಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಯುಎಇಯಲ್ಲಿ ಟೂರ್ನಮೆಂಟ್ ನಡೆಯಲಿದ್ದರೂ, ಆಯೋಜನೆಯ ಹಕ್ಕು ಶ್ರೀಲಂಕಾದ ಬಳಿ ಇರಲಿದೆ ಎಂದು ಎಸಿಸಿ ಅಧ್ಯಕ್ಷ ಜಯ್ ಶಾ ತಿಳಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಹಿಂದೆ ಟೂರ್ನಮೆಂಟ್ ಶ್ರೀಲಂಕಾಗೆ ಸ್ಥಳಾಂತರವಾಗಲಿದೆ ಎಂದು ತಿಳಿಸಿದ್ದರು. ೬ ತಂಡಗಳನ್ನು ಒಳಗೊಂಡಿರುವ ಏಷ್ಯಾಕಪ್ ಅನ್ನು ಟಿ೨೦ ಟೂರ್ನಮೆಂಟ್ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ. ೨೦೧೮ರಲ್ಲಿ ಭಾರತ ಏಕದಿನ ಪಂದ್ಯದ ಮಾದರಿಯ ಏಷ್ಯಾಕಪ್‌ನಲ್ಲಿ ಚಾಂಪಿಯನ್ ಆಗಿತ್ತು.