ನವದೆಹಲಿ: ಏಷ್ಯಾ ಕಪ್ ಟೂರ್ನಿಯ (Asia Cup 2023) ಸೂಪರ್ 4ರಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳನ್ನು ಸೋಲಿಸುವ ಮೂಲಕ ಭಾರತ ಫೈನಲ್‌ಗೇರಿದೆ. ಈಗಾಗಲೇ ಬಾಂಗ್ಲಾದೇಶ ತಂಡವು ಒಂದು ಪಂದ್ಯ ಬಾಕಿ ಇರುವಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಇದರ ಮಧ್ಯೆಯೇ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳಲ್ಲಿ ಯಾವ ತಂಡ ಫೈನಲ್‌ಗೆ ಬರಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಇಂತಹ ಲೆಕ್ಕಾಚಾರಗಳಿಂದಲೇ ಗುರುವಾರ (ಸೆಪ್ಟೆಂಬರ್ 4) ನಡೆಯುವ ಪಾಕಿಸ್ತಾನ-ಶ್ರೀಲಂಕಾ ನಡುವಿನ ಕದನವು ತೀವ್ರ ಕುತೂಹಲ ಕೆರಳಿಸಿದೆ.
ಗೆದ್ದ ತಂಡಕ್ಕೆ ಫೈನಲ್ ಟಿಕೆಟ್
ಪಾಕಿಸ್ತಾನ ಹಾಗೂ ಶ್ರೀಲಂಕಾ ಪಂದ್ಯದ ವೇಳೆ ಗೆಲುವು ಸಾಧಿಸುವ ತಂಡವು ಯಾವುದೇ ಅಡೆತಡೆ ಇಲ್ಲದೆ ಸುಲಭವಾಗಿ ಫೈನಲ್ ತಲುಪಲಿದೆ. ರನ್‌ರೇಟ್ ಲೆಕ್ಕಾಚಾರದ ಭಿಡೆಯೇ ಇಲ್ಲದೆ ಗೆಲ್ಲುವ ತಂಡವು ಫೈನಲ್‌ಗೆ ಲಗ್ಗೆ ಇಡಲಿದೆ. ಪಾಕ್ ಹಾಗೂ ಶ್ರೀಲಂಕಾ ತಲಾ ಎರಡು ಪಂದ್ಯ ಆಡಿದ್ದು, ತಲಾ ಒಂದರಲ್ಲಿ ಸೋತು 2 ಅಂಕ ಗಳಿಸಿವೆ. ಹಾಗಾಗಿ, ಗೆದ್ದ ತಂಡವು 4 ಅಂಕ ಪಡೆದು ಫೈನಲ್ ಕದನಕ್ಕೆ ಅರ್ಹತೆ ಪಡೆಯಲಿದೆ.
ಹೀಗಿದೆ ಅಂಕಪಟ್ಟಿ
ಪಂದ್ಯ ರದ್ದಾದರೆ?
ಹಾಗೊಂದು ವೇಳೆ, ಮಳೆಯಿಂದಾಗಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಪಂದ್ಯ ರದ್ದಾದರೆ, ರನ್ ರೇಟ್ ಲೆಕ್ಕಾಚಾರ ನಿರ್ಣಾಯಕ ಎನಿಸಲಿದೆ. ಹಾಗೆ ನೋಡಿದರೆ, ಈಗ ಪಾಕಿಸ್ತಾನಕ್ಕಿಂತ ಶ್ರೀಲಂಕಾ ಉತ್ತಮ ರನ್‌ರೇಟ್ ಕಾಯ್ದುಕೊಂಡಿದ್ದು, ಸಮಾನ ಅಂಕಗಳಿದ್ದರೂ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮಳೆಯಿಂದ ಪಂದ್ಯ ರದ್ದಾಗಿ, ತಲಾ ಒಂದೊಂದು ಅಂಕ ಹಂಚಿಕೊಂಡರೂ ರನ್‌ರೇಟ್ ಆಧಾರದ ಮೇಲೆ ಲಂಕಾ ಫೈನಲ್ ತಲುಪುವ ಸಾಧ್ಯತೆ ಹೆಚ್ಚಿದೆ.
ಏಷ್ಯಾಕಪ್‌ನಲ್ಲಿ ಭಾರತದ ಪ್ರಾಬಲ್ಯ
ಸೂಪರ್ 4ರ ಹಂತದ ಕೊನೆಯ ಹಾಗೂ ಮೂರನೇ ಪಂದ್ಯವು ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಶುಕ್ರವಾರ (ಸೆಪ್ಟೆಂಬರ್ 15) ಆಡಲಿದೆ. ಈಗಾಗಲೇ ಎರಡು ಪಂದ್ಯ ಸೋತಿರುವ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿದ್ದು, ಶುಕ್ರವಾರದ ಪಂದ್ಯ ಔಪಚಾರಿಕ ಎನಿಸಲಿದೆ. ಇನ್ನು ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ್ದೇ ಪ್ರಾಬಲ್ಯ ಇದೆ. ಇದುವರೆಗೆ ಭಾರತ ಏಳು ಬಾರಿ ಚಾಂಪಿಯನ್ ಎನಿಸಿದರೆ, ಶ್ರೀಲಂಕಾ ಆರು ಬಾರಿ ಹಾಗೂ ಪಾಕಿಸ್ತಾನ ಕೇವಲ ಎರಡು ಬಾರಿ ಏಷ್ಯಾ ಕಪ್ ಗೆದ್ದಿದೆ.
ಇದನ್ನೂ ಓದಿ: IND vs SL : ಶ್ರೀಲಂಕಾ ವಿರುದ್ಧ ಭಾರತಕ್ಕೆ 41 ರನ್ಗಳ ಭರ್ಜರಿ ಜಯ, ಏಷ್ಯಾ ಕಪ್ ಫೈನಲ್‌ಗೆ ಪ್ರವೇಶ
ಭಾರತ-ಪಾಕ್ ಮೊದಲ ಬಾರಿಗೆ ಫೈನಲ್‌ನಲ್ಲಿ ಕದನ?
ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿ ಫೈನಲ್‌ಗೇರಿದರೆ, ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾ ಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಏಷ್ಯಾಕಪ್ ಆರಂಭವಾದ 1984ರಿಂದ ಇದುವರೆಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಮ್ಮೆಯೂ ಏಷ್ಯಾಕಪ್ ಫೈನಲ್‌ನಲ್ಲಿ ಎದುರಾಗಿಲ್ಲ. ಹಾಗಾಗಿ, ಈ ಬಾರಿ ಪಾಕಿಸ್ತಾನವೇ ಫೈನಲ್‌ಗೆ ಬಂದರೆ ಉಭಯ ದೇಶಗಳ ತಂಡಗಳ ನಡುವಿನ ಕದನವು ಜಿದ್ದಾಜಿದ್ದಿನಿಂದ ಕೂಡಿರಲಿದೆ.