ಮುಂಬೈ: ಆಗಸ್ಟ್ 30ರಿಂದ ಆರಂಭವಾಗುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ (Asia Cup 2023) ಭಾರತ ತಂಡವನ್ನು ಪ್ರಕಟಿಸಲಾಗಿದೆ. 17 ಆಟಗಾರರಿರುವ ಟೀಮ್ ಇಂಡಿಯಾವನ್ನು ಆಯ್ಕೆ ಸಮಿತಿಯು ಘೋಷಿಸಿದ್ದು, ಕನ್ನಡಿಗರಾದ ಕೆ.ಎಲ್.ರಾಹುಲ್ (K L Rahul) ಹಾಗೂ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ. ಐಪಿಎಲ್ ವೇಳೆ ಗಾಯಗೊಂಡಿದ್ದ ಕೆ.ಎಲ್.ರಾಹುಲ್ ಅವರು ಚೇತರಿಸಿಕೊಂಡಿದ್ದು, ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.
ಕಳೆದ ಬಾರಿಯ ಐಪಿಎಲ್ ಹೀರೋಗಳಾದ ಶುಭಮನ್ ಗಿಲ್ ಹಾಗೂ ತಿಲಕ್ ಯಾದವ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೆಸ್ಟ್ ವಿಂಡೀಸ್ ವಿರುದ್ಧದ ಸರಣಿಯಲ್ಲಿ ತಿಲಕ್ ವರ್ಮಾ ಉತ್ತಮ ಪ್ರದರ್ಶನ ತೋರಿದ್ದು ಕೂಡ ಅವರ ಆಯ್ಕೆಗೆ ಕಾರಣವಾಗಿದೆ. ಇನ್ನು ಜಸ್‌ಪ್ರಿತ್ ಬುಮ್ರಾ ಕೂಡ ಗಾಯದ ಸಮಸ್ಯೆಯಿಂದ ಹೊರಬಂದು ಏಷ್ಯಾ ಕಪ್ ತಂಡವನ್ನು ಸೇರಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಕೂಡ ಟೀಮ್ ಇಂಡಿಯಾದಲ್ಲಿದ್ದರೆ, ಸಂಜು ಸ್ಯಾಮ್ಸನ್ ಮೀಸಲು ಆಟಗಾರರಾಗಿದ್ದಾರೆ.
ಬಿಸಿಸಿಐ ಮಾಹಿತಿ
ಭಾರತ ತಂಡ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).
ಯುಜುವೇಂದ್ರ ಚಾಹಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ನಿರೀಕ್ಷೆಯಂತೆಯೇ ಆರ್.ಅಶ್ವಿನ್ ಅವರನ್ನು ತಂಡದಲ್ಲಿ ಸೇರಿಸಿಲ್ಲ. ಟಿ-20ಗೆ ಪದಾರ್ಪಣೆ ಮಾಡಿದ್ದ ತಿಲಕ್ ವರ್ಮಾ ಈಗ ಏಕದಿನ ತಂಡಕ್ಕೂ ಆಯ್ಕೆಯಾಗಿದ್ದಾರೆ. ಇಶಾನ್ ಕಿಶನ್ ಬದಲು ಕೆ.ಎಲ್.ರಾಹುಲ್ ಅವರೇ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Asia Cup: ಭಾರತ-ಪಾಕ್ ಏಷ್ಯಾಕಪ್ ಪಂದ್ಯದ ಟಿಕೆಟ್ ಬುಕಿಂಗ್‌ಗೆ ಕ್ಷಣಗಣನೆ; ಇಲ್ಲಿ ಬುಕ್ ಮಾಡಿ
ಭಾರತದ ಮೊದಲ ಪಂದ್ಯ ಯಾವಾಗ?
ಭಾರತವು ಪಾಕಿಸ್ತಾನದ ವಿರುದ್ಧ ಸೆಪ್ಟೆಂಬರ್ 2ರಂದು ಟೂರ್ನಿಯ ಮೊದಲ ಪಂಧ್ಯ ಆಡಲಿದೆ. ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಗುಂಪಿನಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು ಸೂಪರ್ 4ರ ಹಂತ ತಲುಪಲಿವೆ. ಸೂಪರ್ 4ರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಗಳು ಸೆಪ್ಟೆಂಬರ್ 17ರಂದು ಕೊಲೊಂಬೊದಲ್ಲಿ ಮುಖಾಮುಖಿಯಾಗಲಿವೆ.