ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ (Asia Cup 2023) ಸೂಪರ್ 4 ಹಂತದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ (Ind vs Pak) ಮೀಸಲು ದಿನವಾದ ಸೋಮವಾರವೂ (ಸೆಪ್ಟೆಂಬರ್ 11) ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಸೋಮವಾರ ಬೆಳಗ್ಗೆಯೇ ಕೊಲೊಂಬೊದಲ್ಲಿ ಮಳೆ ಆರಂಭವಾಗಿದ್ದು, ಪ್ರೇಮದಾಸ ಸ್ಟೇಡಿಯಂನಲ್ಲಿ ನಿಗದಿತ ಸಮಯಕ್ಕೇ ಪಂದ್ಯ ಆರಂಭವಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ, ಸೋಮವಾರ ಸಂಜೆ 4 ಗಂಟೆಗೆ ಮಳೆಯಾಗುವ ಸಾಧ್ಯತೆ ಶೇ.80ರಷ್ಟಿದೆ. ಹಾಗಾಗಿ, ನಿಗದಿತ ಸಮಯವಾದ 3 ಗಂಟೆಗೆ ಪಂದ್ಯ ಆರಂಭವಾದರೂ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ, ತೀವ್ರ ಕುತೂಹಲದಿಂದ ಭಾರತ-ಪಾಕಿಸ್ತಾನ ಪಂದ್ಯದ ಫಲಿತಾಂಶಕ್ಕೆ ಕಾಯುತ್ತಿರುವ ಕ್ರಿಕೆಟ್ ಅಭಿಮಾನಿಗಳಿಗೆ ಸೋಮವಾರವೂ ನಿರಾಸೆ ತಪ್ಪಿದ್ದಲ್ಲ ಎನ್ನಲಾಗುತ್ತಿದೆ.
ಕೊಲೊಂಬೊದಲ್ಲಿ ಮಳೆ
ಪಂದ್ಯ ರದ್ದಾದರೆ ಏನಾಗುತ್ತದೆ?
ಮೀಸಲು ದಿನದ ಪಂದ್ಯವೂ ರದ್ದಾದರೆ ಎರಡೂ ತಂಡಗಳ ನಡುವೆ ಅಂಕಗಳನ್ನು ವಿಂಗಡಿಸಲಾಗುತ್ತದೆ. ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಗೆದ್ದ ನಂತರ ಪಾಕಿಸ್ತಾನ ಈಗಾಗಲೇ ಎರಡು ಅಂಕಗಳನ್ನು ಹೊಂದಿದೆ. ಈ ಪಂದ್ಯವು ಸಮಬಲದಲ್ಲಿ ಕೊನೆಗೊಂಡರೆ ಅವರು ಇನ್ನೂ ಒಂದು ಅಂಕ ಪಡೆಯುತ್ತಾರೆ . ಸೂಪರ್ ಫೋರ್ ನ ಮೊದಲ ಪಂದ್ಯವನ್ನು ಆಡುತ್ತಿರುವ ಭಾರತ ಕೂಡ ಒಂದು ಅಂಕವನ್ನು ಗಳಿಸಲಿದೆ. ಒಂದು ವೇಳೆ ಮಳೆ ಬಂದು ನಿಂತರೆ ಓವರ್ಗಳನ್ನು ಕಡಿತ ಮಾಡುವ ಮೂಲಕ ಫಲಿತಾಂಶಕ್ಕಾಗಿ ಪ್ರಯತ್ನ ಮಾಡಬಹುದು. ಹಾಗಾದರೆ ಮೀಸಲು ದಿನದ ನೆರವು ಎರಡೂ ತಂಡಗಳಿಗೆ ಸಿಗಬಹುದು.
ಭಾನುವಾರ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 24.1 ಓವರ್ಗಳಲ್ಲಿ 147 ರನ್ ಬಾರಿಸಿದ್ದ ಹೊತ್ತಲ್ಲಿ ಜೋರಾಗಿ ಮಳೆ ಸುರಿಯಿತು. ಗ್ರೌಂಡ್ ಸಿಬ್ಬಂದಿ ಇಡೀ ಮೈದಾನದಕ್ಕೆ ಹೊದಿಕೆ ಹಾಸುವ ಮೂಲಕ ಪಿಚ್ ಹಾಗೂ ಗ್ರೌಂಡ್ ಒದ್ದೆಯಾಗದಂತೆ ನೋಡಿಕೊಂಡರು. ಆದರೂ, ಸುರಿದ ಮಳೆಯ ವೇಗಕ್ಕೆ ಮೈದಾನದಲ್ಲಿ ನೀರು ತುಂಬಿಕೊಂಡಿತು. ಇದರ ಮಧ್ಯೆ ವರುಣ ಬಿಡುವು ನೀಡಿದರೂ ಮತ್ತೆ ಆಗಮಿಸಿದ ಕಾರಣ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಯಿತು. ಹಾಗೊಂದು ವೇಳೆ ಸೋಮವಾರ ವರುಣ ಬಿಡುವು ನೀಡಿದರೆ, 8 ರನ್ ಗಳಿಸಿರುವ ವಿರಾಟ್ ಕೊಹ್ಲಿ ಹಾಗೂ 17 ರನ್ ಗಳಿಸಿರುವ ಕೆ.ಎಲ್.ರಾಹುಲ್ ಆಟ ಮುಂದುವರಿಸಲಿದ್ದಾರೆ.