ಬೆಂಗಳೂರು: ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಏಷ್ಯಾಕಪ್(Asia Cup 2023) ಹೈ-ವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ(Kandy) ನಡೆಯಲಿದೆ. ಅಚ್ಚರಿ ಎಂದರೆ ವೇಳಾಪಟ್ಟಿಯ ಪ್ರಕಾರ ಭಾರತ ಒಂದು ಪಂದ್ಯವನ್ನಾಡಲು ಪಾಕ್ಗೆ ತೆರಳಬೇಕಾದ ಅನಿವಾರ್ಯತೆ ಇದೆ. ಇದು ಭಾರತಕ್ಕೆ ಚಿಂತೆಗೀಡು ಮಾಡಿದೆ.
ಪ್ರಯಾಣ ವಿಚಾರದಲ್ಲಿ ಕಿತ್ತಾಟ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭದ್ರತಾ ಕಾರಣದಿಂದ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿತ್ತು. ಇದೇ ವಿಚಾರವಾಗಿ ಪಾಕ್ ಮತ್ತು ಬಿಸಿಸಿಐ ಕ್ರಿಕೆಟ್ ಮಂಡಳಿ ಮಧ್ಯೆ ಕಿತ್ತಾಡ ನಡೆಯುತ್ತಲೇ ಇತ್ತು. ಅಂತಿಮವಾಗಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ನಾಲ್ಕು ಪಂದ್ಯಗಳು ಪಾಕ್ನಲ್ಲಿ ನಡೆಸಿ ಫೈನಲ್ ಸೇರಿ ಉಳಿದ 9 ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸುವ ನಿರ್ಧಾರ ಮಾಡಲಾಯಿತು. ಅದರಂತೆ ವೇಳಾಪಟ್ಟಿಯೂ ಪ್ರಕಟಗೊಂಡಿತು. ಆದರೆ ವೇಳಾಪಟ್ಟಿಯಲ್ಲಿ ಸೂಪರ್-4ನ ಒಂದು ಪಂದ್ಯ ಲಹೋರ್ನಲ್ಲಿ ನಡೆಯುತ್ತಿರುವುದು ಬಿಸಿಸಿಐಗೆ ಮತ್ತು ಭಾರತ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಭಾರತ ಅಗ್ರಸ್ಥಾನ ಪಡೆದರೆ…
ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹೀಗಾಗಿ ಲೀಗ್ನಲ್ಲಿ ನಡೆಯುವ ಎಲ್ಲ ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದರೆ, ಆಗ ಸೂಪರ್ ಫೋರ್ ಹಂತದಲ್ಲಿ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಭಾರತ ಎದುರಿಸಬೇಕು. ಈ ಪಂದ್ಯ ಪಾಕ್ನ ಲಾಹೋರ್ನಲ್ಲಿ ನಡೆಯಲಿದೆ. ಸೆಪ್ಟೆಂಬರ್ 6ಕ್ಕೆ ಈ ಪಂದ್ಯ ನಡೆಯಲಿದೆ. ಒಂದೊಮ್ಮೆ ಭಾರತ ಲೀಗ್ನಲ್ಲಿ ಮೊದಲ ಸ್ಥಾನ ಪಡೆದರೆ ಪಾಕ್ನಲ್ಲಿ ಪಂದ್ಯ ಆಡಲಿದೆಯಾ ಎನ್ನುವುದು ಇದೀಗ ಎಲ್ಲರ ಕುತೂಹಲವಾಗಿದೆ.
ಇದನ್ನೂ ಓದಿ Asia Cup 2023: 15 ಆವೃತ್ತಿಯ ಏಷ್ಯಾಕಪ್ನಲ್ಲಿ ಭಾರತ ತಂಡದ್ದೇ ಪಾರುಪತ್ಯ
ಇದೊಂದೆ ಉಪಾಯ
ಭಾರತ ತಂಡಕ್ಕೆ ಪಾಕ್ಗೆ ಹೋಗದೇ ಇರಲು ಒಂದು ಉಪಾಯವಿದೆ. ಸೂಪರ್ ಫೋರ್ ಘಟ್ಟದಲ್ಲಿ ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದರೆ, ಆಗ ಭಾರತ ಶ್ರೀಲಂಕಾದಲ್ಲಿ ಪಂದ್ಯವನ್ನು ಆಡಬಹುದಾಗಿದೆ. ಇದಕ್ಕೆ ಭಾರತ ಹಲವು ಲೆಕ್ಕಾಚಾರದ ಮೂಲಕ ಆಡಿ ಕೆಲ ಪಂದ್ಯಗಳನ್ನು ಸೋಲಬೇಕಿದೆ. ಈ ಒಂದು ಉಪಾಯದಿಂದ ಭಾರತ ಪಾಕ್ಗೆ ಹೋಗುವುದನ್ನು ತಪ್ಪಿಸಬಹುದು. ಇದಲ್ಲದೆ ಸದ್ಯ ಬೇರೆ ಯಾವುದೇ ದಾರಿ ಭಾರತದ ಮುಂದಿಲ್ಲ. ಆದರೆ ಕುತಂತ್ರಿ ಪಾಕ್ ಕೂಡ ಹೇಗಾದರೂ ಮಾಡಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಬರುವಂತೆ ಮಾಡದೇ ಇರದು.
ಅಟ್ಟಾರಿ-ವಾಘಾ ಗಡಿ ಮೂಲಕ ಪಾಕ್ಗೆ ರೋಜರ್ ಬಿನ್ನಿ,ರಾಜೀವ್ ಶುಕ್ಲಾ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ರೋಜರ್ ಬಿನ್ನಿ(Roger Binny) ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಅವರು ಏಷ್ಯಾಕಪ್ನ(Asia Cup 2023) ಪಂದ್ಯಕ್ಕೆ ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಈ ವಿಚಾರವನ್ನು ಈಗಾಗಲೇ ಉಭಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆರಂಭದಲ್ಲಿ ಪಾಕ್ ಆಹ್ವಾನವನ್ನು ತಿರಸ್ಕರಿದ್ದರು. ಆ ಬಳಿಕ ಭಾರತ ಸರಕಾರದ ಒಪ್ಪಿಗೆ ಪಡೆದ ಕಾರಣ ಬಿನ್ನಿ ಮತ್ತು ಶುಕ್ಲಾ ಪಾಕ್ಗೆ ಹೋಗಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ Asia Cup 2023: ನಾಳೆಯಿಂದ ಏಷ್ಯಾಕಪ್; 15 ದಿನಗಳ ಅಂತರದಲ್ಲಿ 3 ಬಾರಿ ಇಂಡೋ-ಪಾಕ್ ಮುಖಾಮುಖಿ!
ಕಳೆದ ತಿಂಗಳು ಚೆನ್ನೈಯಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ(Asian Champions Trophy hockey 2023) ಹಾಕಿ ಟೂರ್ನಿಗೆ ಪಾಕಿಸ್ತಾನ ತಂಡ(Pakistan hockey team) ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಬಂದಿದ್ದರು. ಇದೀಗ ರೋಜರ್ ಬಿನ್ನಿ ಮತ್ತು ರಾಜೀವ್ ಶುಕ್ಲಾ ಕೂಡ ಇದೇ ಮಾರ್ಗದಲ್ಲಿ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.