ಬೆಂಗಳೂರು: ಏಷ್ಯಾಕಪ್ನ(Asia Cup 2023) ಅತ್ಯಂತ ಬಲಿಷ್ಠ ತಂಡಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯವನ್ನು ಕಣ್ತುಂಬಿಕ್ಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಇದಕ್ಕೂ ಮುನ್ನ ಉಭಯ ತಂಡಗಳ ಏಷ್ಯಾಕಪ್ ರೆಕಾರ್ಡ್ ಕುರಿತ ಮಾಹಿತಿ ಇಂತಿದೆ.
ಮೊದಲ ಮುಖಾಮುಖಿ
ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದು 1984ರಲ್ಲಿ ಸುನೀಲ್ ಗವಾಸ್ಕರ್ ಭಾರತ ತಂಡದ ನಾಯಕನಾಗಿದ್ದರು. ಇದು ಚೊಚ್ಚಲ ಆವೃತ್ತಿಯ ಏಷ್ಯಾಕಪ್ ಕೂಡ ಆಗಿತ್ತು. ಈ ಪಂದ್ಯದಲ್ಲಿ ಭಾರತ ತಂಡ 54 ರನ್ಗಳಿಂದ ಗೆದ್ದು ಬೀಗಿತ್ತು. ಇದಲ್ಲದೆ ಭಾರತ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟ ಕೂಡ ಅಲಂಕರಿಸಿತ್ತು.
ಪಾಕ್ಗೆ ಮೊದಲ ಗೆಲುವು
ಏಷ್ಯಾಕಪ್ನಲ್ಲಿ ಪಾಕಿಸ್ತಾನ ತಂಡ ಭಾರತ ವಿರುದ್ಧ ಮೊದಲ ಬಾರಿ ಗೆಲುವು ಸಾಧಿಸಿದ್ದು 1995ರಲ್ಲಿ. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಪಾಕಿಸ್ತಾನ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 266 ರನ್ ಬಾರಿಸಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ್ದ ಭಾರತ 42.2 ಓವರ್ಗಳಲ್ಲಿ 169 ರನ್ಗೆ ಸರ್ವಪತನ ಕಂಡು 97 ರನ್ಗಳ ಹೀನಾಯ ಸೋಲು ಕಂಡಿತ್ತು. ಇದು ಏಷ್ಯಾಕಪ್ನಲ್ಲಿ ಪಾಕ್ ವಿರುದ್ಧ ಎದುರಾದ ಮೊದಲ ಸೋಲು. ಇದಾದ ಬಳಿಕ ಪಾಕ್ ತಂಡ 2000, 2004, 2008, 2014 ಮತ್ತು 2022ರಲ್ಲಿ ಭಾರತ ವಿರುದ್ಧ ಗೆಲುವು ಸಾಧಿತ್ತು.
ಇತ್ತಂಡಗಳ ಒಟ್ಟು ಮುಖಾಮುಖಿ
ಪಾಕಿಸ್ತಾನ ಮತ್ತು ಭಾರತ ಏಷ್ಯಾಕಪ್ನಲ್ಲಿ ಇದುವರೆಗೆ ಒಟ್ಟು 17 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 9 ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ 6 ಪಂದ್ಯಗಳಲ್ಲಿ ಗೆಲುವು ಕಂಡಿದೆ. 2 ಪಂದ್ಯಗಳು ರದ್ದಾಗಿದೆ. ಪಾಕ್ ಕಳೆದ ವರ್ಷದ ಆವೃತ್ತಿಯ ಲೀಗ್ ಪಂದ್ಯದಲ್ಲಿ ಭಾರತ ವಿರುದ್ಧ ಸೋತರೂ ಸೂಪರ್-4 ಪಂದ್ಯದಲ್ಲಿ ಭಾರತಕ್ಕೆ ಆಘಾತವಿಕ್ಕಿ ಟೂರ್ನಿಯಿಂದ ಹೊರದಬ್ಬಿತ್ತು. ಹೀಗಾಗಿ ಈ ಬಾರಿ ಭಾರತ ಎಚ್ಚರಿಕೆಯ ಆಟವಾಡಬೇಕು.
ಪಂದ್ಯ ನಡೆಯುವುದೇ ಅನುಮಾನ
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಇದು ಭಾರತಕ್ಕೆ ಈ ಕೂಟದ ಮೊದಲ ಪಂದ್ಯವಾದರೆ, ಪಾಕ್ಗೆ ಎರಡನೇ ಪಂದ್ಯ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಆದರೆ ಅಭಿಮಾನಿಗಳ ಈ ಆಸೆಗೆ ಮಳೆ ತಣ್ಣೀರೆರಚುವ ಸಾಧ್ಯತೆ ಇದೆ. ಹೌದು ಪಂದ್ಯ ನಡೆಯುವ ದಿನ ಕ್ಯಾಂಡಿಯಲ್ಲಿ ಶೇ. 90ರಷ್ಟು ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).
ಇದನ್ನೂ ಓದಿ Asia Cup 2023: ಬುಮ್ರಾ vs ಬಾಬರ್, ಕೊಹ್ಲಿ vs ಯಾರು? ಭಾರತ-ಪಾಕ್ ಪಂದ್ಯ ಇದಕ್ಕೇ ಹೈವೋಲ್ಟೇಜ್
ಪಾಕಿಸ್ತಾನ ತಂಡ
ಬಾಬರ್ ಅಜಂ (ನಾಯಕ), ಶಾದಾಬ್ ಖಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಸೌದ್ ಶಕೀಲ್ (ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಮಾತ್ರ) ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರಾವುಫ್, ನಸೀಮ್ ಶಾ, ಶಾಹೀನ್ ಅಫ್ರಿದಿ, ತಯ್ಯಬ್ ತಾಹಿರ್, ಮೊಹಮ್ಮದ್ ಹ್ಯಾರಿಸ್, ಫಹೀಮ್ ಅಶ್ರಫ್, ಮೊಹಮ್ಮದ್ ವಾಸಿಮ್