ದುಬೈ : ಭಾರತ ತಂಡ ಫೈನಲ್‌ಗೇರುವ ಮೊದಲೇ ಏಷ್ಯಾ ಕಪ್ ಟೂರ್ನಿಯಿಂದ ಹೊರಕ್ಕೆ ಬಿದ್ದಿರುವುದು ಆಯೋಜಕರ ಲಾಭಕ್ಕೆ ಪೆಟ್ಟುಕೊಟ್ಟಿದೆ. ಆದಾಗ್ಯೂ ಅಚ್ಚರಿ ರೀತಿಯಲ್ಲಿ ಪ್ರದರ್ಶನ ನೀಡಿ ಫೈನಲ್‌ಗೇರಿರುವ ಶ್ರೀಲಂಕಾ ಹಾಗೂ ಪ್ರಶಸ್ತಿ ಫೇವರಿಟ್ ಪಾಕಿಸ್ತಾನ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವ ಕಾರಣ ಭರ್ಜರಿ ಫೈಟ್‌ನ ನಿರೀಕ್ಷೆ ಮೂಡಿದೆ.
ದುಬೈನ ಅಂತಾರಾಷ್ಟ್ರಿಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಈ ಹಣಾಹಣಿ ನಡೆಯಲಿದ್ದು, ಎಂದಿನಂತೆ ಇತ್ತಂಡಗಳ ಆರಂಭಿಕ ಆಟಗಾರರ ಪ್ರದರ್ಶನದ ಆಧಾರದಲ್ಲಿ ಫಲಿತಾಂಶ ಪ್ರಕಟಗೊಳ್ಳಬಹುದು. ಪಾಕಿಸ್ತಾನ ತಂಡ ಟ್ರೋಫಿ ಗೆದ್ದರೆ ಮೂರನೇ ಬಾರಿ ಏಷ್ಯಾ ಕಪ್ ಚಾಂಪಿಯನ್‌ಪಟ್ಟ ಅಲಂಕರಿಸಿದ ಸಾಧನೆ ಮಾಡಲಿದ್ದು, ಲಂಕಾ ಜಯಿಸಿದರೆ ಆರನೇ ಟ್ರೋಫಿಯನ್ನು ಗೆದ್ದಂತಾಗುತ್ತದೆ.
ಲಂಕಾ ಭರ್ಜರಿ ಚೇತರಿಕೆ
ಗುಂಪು ಹಂತದ ಮೊದಲ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದ ಶ್ರೀಲಂಕಾ ತಂಡ ನಂತರದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಬಗ್ಗು ಬಡಿದು ಸೂಪರ್-೪ ಹಂತ್ಕೇರಿತ್ತು. ಈ ಹಂತದ ಮೂರು ಪಂದ್ಯಗಳನ್ನು (ಭಾರತ, ಅಫಘಾನಿಸ್ತಾನ ಹಾಗೂ ಪಾಕಿಸ್ತಾನ ವಿರುದ್ಧ) ಗೆಲ್ಲುವ ಮೂಲಕ ಭರ್ಜರಿ ಚೇತರಿಕೆಯೊಂದಿಗೆ ಮೊದಲ ತಂಡವಾಗಿ ಫೈನಲ್‌ಗೇರಿದೆ. ಹೀಗಾಗಿ ಭಾನುವಾರದ ಪಂದ್ಯದಲ್ಲೂ ವಿಜಯ ಸಾಧಿಸುವ ವಿಶ್ವಾಸದಲ್ಲಿದೆ. ಅತ್ತ ಪಾಕಿಸ್ತಾನ ತಂಡ ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಸೋಲು ಕಂಡಿತ್ತು. ಆದರೆ, ಹಾಂಕಾಂಗ್ ವಿರುದ್ಧ ಜಯ ಸಾಧಿಸಿ ಸೂಪರ್-೪ ಹಂತಕ್ಕೇರಿತ್ತು. ಈ ಹಂತದಲ್ಲಿ ಭಾರತ ಹಾಗೂ ಅಫಘಾನಿಸ್ತಾನ ವಿರುದ್ಧ ವಿರೋಚಿತ ಜಯ ಸಾಧಿಸಿ, ಲಂಕಾ ವಿರುದ್ಧ ಸೋಲು ಕಾಣುವ ಮೂಲಕ ಅಂಕಪಟ್ಟಿಯ ಎರಡನೇ ತಂಡವಾಗಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.
ಕುಸಾಲ್ ಮೆಂಡಿಸ್ ಮತ್ತು ಪಾಥುಮ್ ನಿಸ್ಸಾಂಕ ಆರಂಭಿಕ ಜತೆಯಾಟ ಲಂಕಾ ತಂಡಕ್ಕೆ ದೊಡ್ಡ ಅನುಕೂಲಕರ ಸಂಗತಿ. ಮಧ್ಯಮ ಕ್ರಮಾಂಕದಲ್ಲಿ ಧನುಷ್ಕಾ ಗುಣತಿಲಕ, ಭಾನುಕಾ ರಾಜಪಕ್ಷ ಮತ್ತು ದಸುನ್ ಶನಕ ಸ್ಫೋಟಿಸುತ್ತಿದ್ದಾರೆ. ವಾನಿಂದು ಹಸರಂಗ ಸ್ಪಿನ್ ಆಲ್‌ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ. ಮಹೀಶ್ ತೀಕ್ಷಣ ಸ್ಪಿನ್ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ.
ಬಾಬರ್ ವೈಫಲ್ಯ
ಪಾಕಿಸ್ತಾನ ತಂಡದ ಬ್ಯಾಟಿಂಗ್ ಕೂಡ ಉತ್ತಮ ಲಯದಲ್ಲಿದೆ. ಅದರೆ, ನಾಯಕ ಹಾಗೂ ಆರಂಭಿಕ ಬ್ಯಾಟರ್ ಬಾಬರ್ ಅಜಮ್ ವೈಫಲ್ಯ ಕಾಣುತ್ತಿದ್ದಾರೆ. ಮೊಹಮ್ಮದ್ ರಿಜ್ವಾನ್ ತಂಡಕ್ಕೆ ಅಧಾರವಾಗುತ್ತಿದ್ದಾರೆ. ಫಖರ್ ಜಮಾನ್, ಇಫ್ತಿಕಾರ್ ಅಹ್ಮದ್, ಖುಷ್ದಿಲ್ ಹಾಗೂ ನವಾಜ್ ಅಗತ್ಯ ಸಂದರ್ಭದಲ್ಲಿ ನೆರವಾಗುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ನಾಸಿಮ್ ಶಾ, ಹ್ಯಾರಿಸ್ ರವೂಫ್, ಮೊಹಮ್ಮದ್ ಹಸ್ನೈನ್ ವೇಗದ ಮೂಲಕ ನೆರವು ಕೊಟ್ಟರೆ, ಶದಾಬ್ ಖಾನ್, ನವಾಜ್ ಸ್ಪಿನ್ ಅಸ್ತ್ರಗಳು.
ಸ್ಪರ್ಧಾತ್ಮಕ ಪಿಚ್ ಆದರೆ ಟಾಸ್ ನಿರ್ಣಾಯಕ
ದುಬೈ ಕ್ರಿಕೆಟ್ ಸ್ಟೇಡಿಯಮ್ ಸ್ಪರ್ಧಾತ್ಮಕವಾಗಿದೆ. ಬ್ಯಾಟಿಂಗ್ ಹೌಗೂ ಬೌಲಿಂಗ್‌ಗೆ ಸಮಾನ ನೆರವು ನೀಡುತ್ತದೆ. ೧೬೦ರಿಂದ ೧೭೦ ರನ್‌ಗಳನ್ನು ಪೇರಿಸಿದರೆ ಗೆಲವು ಸಾಧಿಸಬಹುದು. ಆದರೂ, ಟಾಸ್ ಇಲ್ಲಿ ನಿರ್ಣಾಯಕ. ಗೆದ್ದವರು ಮೊದಲು ಬೌಲಿಂಗ್ ಆಯ್ಕೆ ಪಡೆದುಕೊಳ್ಳುತ್ತಾರೆ.
ಸಂಭಾವ್ಯ ತಂಡ
ಶ್ರೀಲಂಕಾ: ದಸುನ್ ಶನಕ (ನಾಯಕ), ಧನುಷ್ಕಾ ಗುಣತಿಲಕ, ಪಾಥುಮ್ ನಿಸ್ಸಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭಾನುಕಾ ರಾಜಪಕ್ಷ, ವಾನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಾಣ.
ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಇಫ್ತಿಕಾರ್ ಅಹ್ಮದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಆಸಿಫ್ ಅಲಿ,ಖುಶ್ದಿಲ್ ಶಾ, ಹ್ಯಾರಿಸ್ ರವೂಫ್, ನಾಸೀಮ್ ಶಾ, ಮೊಹಮ್ಮದ್ ಹಸ್ನೈನ್.
ಪಂದ್ಯದ ವಿವರ
ಸ್ಥಳ : ದುಬೈ ಅಂತಾರಾಷ್ಟ್ರಿಯ ಕ್ರಿಕೆಟ್ ಸ್ಟೇಡಿಯಮ್
ಸಮಯ : ರಾತ್ತಿ ೭.೩೦ರಿಂದ
ನೇರ ಪ್ರಸಾರ : ಸ್ಟಾರ್ ನೆಟ್ವರ್ಕ್, ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್.