ಮುಂಬಯಿ : ಮುಂಬರುವ ಏಷ್ಯಾ ಕಪ್ (Asia Cup 2023) ಕ್ರಿಕೆಟ್ ಟೂರ್ನಿ ಎಲ್ಲಿ ನಡೆಯಬೇಕು ಎಂಬ ವಿವಾದಕ್ಕೆ ಕೊನೆ ಹಾಡಲು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಮುಂದಾಗಿದೆ. ಆತಿಥ್ಯ ಪಡೆದಿರುವ ಪಾಕಿಸ್ತಾನದಲ್ಲೇ ಟೂರ್ನಿ ನಡೆಸಲು ನಿರ್ಧರಿಸಿದೆ. ಆದರೆ, ಭಾರತದ ಪಂದ್ಯಗಳು ತಟಸ್ಥ ತಾಣಗಳಲ್ಲಿ ನಡೆಯಲಿವೆ ಎಂಬುದಾಗಿ ವರದಿಯಾಗಿದೆ. ಇದರಿಂದಾಗಿ ಏಷ್ಯಾ ಕಪ್ನಲ್ಲಿ ಪಾಲ್ಗೊಳ್ಳುವುದಕ್ಕೆ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡುವ ಅಗತ್ಯ ಇರುವುದಿಲ್ಲ. ಅದೇ ರೀತಿ ನಮ್ಮ ನೆಲದಲ್ಲಿಯೇ ಟೂರ್ನಿ ನಡೆಯಬೇಕು ಎಂಬ ಪಾಕಿಸ್ತಾನದ ವಾದಕ್ಕೂ ಮನ್ನಣೆ ಸಿಕ್ಕಂತಾಗುತ್ತದೆ.
ಆರು ದೇಶಗಳನ್ನು ಒಳಗೊಂಡಿರುವ ಏಷ್ಯಾ ಕಪ್ ಸೆಪ್ಟೆಂಬರ್ ಆರಂಭದಲ್ಲಿ ನಡೆಯಲಿದೆ. 13 ದಿನ ನಡೆಯುವ 13 ಪಂದ್ಯಗಳಿಗೆ ಪಾಕಿಸ್ತಾನ ತಂಡ ಆತಿಥ್ಯ ವಹಿಸಲಿದೆ. ಈ ಬಾರಿ ಏಕ ದಿನ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಮೂರು ತಂಡಗಳ ಎರಡು ಗುಂಪುಗಳ ನಡುವೆ ಪಂದ್ಯ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿ ಇರಲಿದ್ದು ಎರಡು ಬಾರಿ ಪರಸ್ಪರ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಒಂದು ವೇಳೆ ಎರಡೂ ತಂಡಗಳು ಫೈನಲ್ಗೇರಿದರೆ ಮೂರನೇ ಬಾರಿ ಪರಸ್ಪರ ಎದುರಾಗುವ ಸಾಧ್ಯತೆಗಳಿವೆ.
ತಟಸ್ಥ ತಾಣ ಯಾವುದೆಂಬುದು ಇನ್ನೂ ಗೊತ್ತಾಗಿಲ್ಲ. ಶ್ರೀಲಂಕಾ ಅಥವಾ ಯುಎಇನಲ್ಲಿ ಪಂದ್ಯಗಳು ನಡೆಯಬಹುದು ಎಂದು ಹೇಳಲಾಗಿದೆ.
ಇಎಸ್ಪಿಎನ್ ಕ್ರಿಕ್ ಇನ್ಫೋ ಪ್ರಕಾರ, ವೇಳಾಪಟ್ಟಿ ಹಾಗೂ ತಾಣಗಳನ್ನು ನಿಗದಿಪಡಿಸಲು ತಂಡವೊಂದನ್ನು ರಚಿಸಲಾಗಿದೆ. ಯುಎಇ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹಣಾಹಣಿಗೆ ಪ್ರಶಸ್ತ ತಾಣವಾಗಿದ್ದರೂ ಆ ವೇಳೆ ಅಲ್ಲಿ 40 ಡಿಗ್ರಿ ಉಷ್ಣಾಂಶವಿರುತ್ತದೆ. ಒಮನ್ ಮತ್ತು ಮಸ್ಕತ್ನಲ್ಲಿಯೂ ಅದೇ ಮಾದರಿಯ ತಾಪಮಾನವಿರುತ್ತದೆ. ಆದರೆ, ಇಂಗ್ಲೆಂಡ್ನಲ್ಲಿ ಪೂರಕ ವಾತಾವರಣ ಇರುತ್ತದೆ.
ಕೊನೆಗೂ ಜಗಳ ಅಂತ್ಯ
ಏಷ್ಯಾ ಕಪ್ನಲ್ಲಿ ಪಾಲ್ಗೊಳ್ಳಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿ್ಲ್ಲ ಎಂಬುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೆಲವು ತಿಂಗಳ ಹಿಂದೆ ಹೇಳಿಕೆ ಕೊಟ್ಟಿದ್ದರು. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಕೆರಳಿಸಿತ್ತು. ಹಾಗಾದರೆ ನಾವು ಕೂಡ ಭಾರತದ ಆತಿಥ್ಯದಲ್ಲಿ ನಡೆಯುವ ವಿಶ್ವ ಕಪ್ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ಪದೇ ಪದೇ ಎರಡೂ ದೇಶಗಳ ಕ್ರಿಕೆಟ್ ಮಂಡಳಿಯಿಂದ ಹೇಳಿಕೆಗಳು ಬರುತ್ತಿದ್ದವು. ಭಾರತ ತಂಡದ ಆಟಗಾರರು ಪಾಕಿಸ್ತಾನಕ್ಕೆ ಹೋಗಲು ಸರಕಾರದ ಅನುಮತಿ ಸಿಗುವುದಿಲ್ಲ ಎಂದು ಕಾರಣ ನೀಡಲಾಗಿತ್ತು. ಪಾಕಿಸ್ತಾನದಲ್ಲಿ ನಿರಂತರವಾಗಿ ಭಯೋತ್ಪಾದನಾ ಚಟುವಟಿಕೆಗಳು ನಡೆಯುವ ಕಾರಣ ನಮ್ಮ ಸ್ಟಾರ್ ಆಟಗಾರರು ಆ ನೆಲದಲ್ಲಿ ಸುರಕ್ಷಿತವಲ್ಲ ಎಂಬುದೇ ಸರಕಾರದ ಅಭಿಪ್ರಾಯವಾಗಿದೆ
ಭಾರತ ತಂಡ ಪಾಕಿಸ್ತಾನಕ್ಕೆ ಹೋಗದಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ತಟಸ್ಥ ತಾಣದಲ್ಲಿ ನಡೆಸುವುದು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಉದ್ದೇಶವಾಗಿತ್ತು. ಆದರೆ, ನಮ್ಮ ಆತಿಥ್ಯದಲ್ಲಿ ನಡೆಯುವುದಾದರೆ ನಮ್ಮಲ್ಲೇ ನಡೆಯಲಿ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಟ್ಟು ಹಿಡಿದು ಕುಳಿತಿದೆ. ಹೀಗಾಗಿ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅದಕ್ಕೊಂದು ಪರಿಹಾರ ಕಂಡುಹುಡುಕಿದೆ.