ಕರಾಚಿ: ಏಷ್ಯಾ ಕಪ್(Asia Cup) ಆತಿಥ್ಯದ ವಿಚಾರದಲ್ಲಿ ಪದೇಪದೆ ಬಿಸಿಸಿಐ(BCCI) ವಿರುದ್ಧ ಕಿಡಿಕಾರುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಮತ್ತೆ ಆರೋಪವೊಂದನ್ನು ಮಾಡಿದೆ. ಸೋಮವಾರ ದುಬೈಯಲ್ಲಿ ನಡೆಯುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಸಭೆಗೂ ಮುನ್ನ ಬಿಸಿಸಿಐ ವಿಶ್ವ ಕ್ರಿಕೆಟ್‌ನಲ್ಲಿ ಭಾರಿ ಪ್ರಭಾವ ಹೊಂದಿದೆ ಎಂದು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ(Najam Sethi) ಹೇಳಿದ್ದಾರೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಸದಸ್ಯರು ಸೋಮವಾರ(ಮಾರ್ಚ್ 20) ದುಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಿ, 2023ರ ಏಷ್ಯಾಕಪ್ ಪಂದ್ಯಾವಳಿಯ ಆತಿಥ್ಯದ ಕುರಿತು ಅಂತಿಮ ತೀರ್ಮಾನಕ್ಕೆ ಬರಲು ನಿರ್ಧರಿಸಿದ್ದಾರೆ. ಈ ಸಭೆಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ನಜಮ್ ಸೇಥಿ ಎಸಿಸಿಯ ಇತರ ಸದಸ್ಯರ ಬೆಂಬಲಕ್ಕೆ ಕರೆ ನೀಡಿದ್ದಾರೆ.
ಎಸಿಸಿ ಮುಖ್ಯಸ್ಥ ಮತ್ತು ಬಿಸಿಸಿಐ ಕಾರ್ಯದರ್ಶಿ ಆಗಿರುವ ಜಯ್ ಶಾ(Jay Shah) ಅವರು ಮುಂಬರುವ ಏಷ್ಯಾಕಪ್ ಟೂರ್ನಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ, ಒಂದೊಮ್ಮೆ ಈ ಟೂರ್ನಿಯನ್ನು ತಟಸ್ಥ ತಾಣದಲ್ಲಿ ನಡೆಸಿದರೆ ಭಾರತ ಈ ಟೂರ್ನಿಯಲ್ಲಿ ಆಡಲಿದೆ, ಬಹುತೇಕ ಈ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ ಎಂದು ಕಳೆದ ಅಕ್ಟೋಬರ್ನಲ್ಲಿ ಬಹಿರಂಗ ಹೇಳಿಕೆ ನೀಡಿದ್ದರು.
ಜಯ್ ಶಾ ಅವರ ಹೇಳಿಕೆಯಿಂದ ಕೆಂಡಾಮಂಡಳವಾದ ಆಗಿನ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ, ಭಾರತ ತಂಡ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಆಡಲು ಬಾರದಿದ್ದರೆ ಭಾರತ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಆಡುವುದಿಲ್ಲ ಎಂದು ಹೇಳಿದ್ದರು. ಇದಾದ ಬಳಿಕ ರಮೀಜ್ ರಾಜಾ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು.
ನೂತನ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ನಜಮ್ ಸೇಥಿ ಕೂಡ ರಮೀಜ್ ರಾಜಾ ಅವರ ನಿಲುವನ್ನೇ ಮುಂದುವರಿಸಿದ್ದರು. ಟೂರ್ನಿಯ ಆತಿಥ್ಯದ ಹಕ್ಕನ್ನು ತಮ್ಮಿಂದ ಕಿತ್ತುಕೊಂಡರೆ, ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಇದೀಗ ಎಸಿಸಿಯ ಸಭೆಗೂ ಮುನ್ನ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತರ ಸದಸ್ಯರು ಏಷ್ಯಾಕಪ್‌ನಲ್ಲಿ ನಮ್ಮ ನಿಲುವನ್ನು ಹೇಗೆ ನೋಡುತ್ತಾರೆ ಎಂಬುದು ಮುಖ್ಯ. ಅವರು ಏನು ಯೋಚಿಸುತ್ತಾರೆ ಎಂಬುದು ಸದ್ಯದ ಪ್ರಶ್ನೆ. ಆದರೆ ಅಂತಿಮವಾಗಿ ಬಿಸಿಸಿಐ ತನ್ನ ಆರ್ಥಿಕ ಶಕ್ತಿಯೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು” ಎಂದು ಸೇಥಿ ಹೇಳಿದ್ದಾರೆ.
ಇದನ್ನೂ ಓದಿ Asia Cup: ಏಷ್ಯಾ ಕಪ್ ಟೂರ್ನಿ ಪಾಕಿಸ್ತಾನದಲ್ಲೇ ನಡೆಯಲಿದೆ; ಬಿಸಿಸಿಐಗೆ ಎಚ್ಚರಿಕೆ ನೀಡಿದ ನಜಮ್ ಸೇಥಿ
“ನಾನು ಎಸಿಸಿಯ ಹಿರಿಯ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇನೆ. ನಮ್ಮ ಸಮಸ್ಯೆಗಳ ಬಗ್ಗೆ ನಾನು ಅವರಿಗೆ ತಿಳಿಸಿದ್ದೇನೆ ಮತ್ತು ನಾವು ಸಮಸ್ಯೆಗಳಿಗೆ ಗೌರವಯುತ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ,” ಎಂದು ಅವರು ಹೇಳಿದರು. ಸದ್ಯ ಸೋಮವಾರ ನಡೆಯುವ ಸಭೆಯ ಬಳಿಕ ಪಾಕ್ ಕ್ರಿಕೆಟ್ ಮಂಡಳಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.