ಕೊಲಂಬೊ: ಶುಭ್ಮನ್ ಗಿಲ್ (121) ಅವರ ಅಮೋಘ ಶತಕದ ಹೊರತಾಗಿಯೂ ಉಳಿದ ಬ್ಯಾಟರ್ಗಳ ನೆರವು ಲಭಿಸದ ಹಿನ್ನೆಲೆಯಲ್ಲಿ ಏಷ್ಯಾ ಕಪ್ನ ಸೂಪರ್ 4 ಹಂತದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 6 ರನ್ಗಳ ಸೋಲಿಗೆ ಒಳಗಾಗಿದೆ. ಹಾಲಿ ಟೂರ್ನಿಯಲ್ಲಿ ಭಾರತ ತಂಡ ಈಗಾಗಲೇ ಫೈನಲ್ಗೆ ಪ್ರವೇಶ ಮಾಡಿರುವ ಕಾರಣ ಭಾರತ ತಂಡಕ್ಕೆ ಹೆಚ್ಚಿನ ನಷ್ಟ ಉಂಟಾಗುವುದಿಲ್ಲ. ಇದೇ ವೇಳೆ ಬಾಂಗ್ಲಾದೇಶ ತಂಡಕ್ಕೆ ಏಷ್ಯಾ ಕಪ್ನಲ್ಲಿ ಭಾರತ ವಿರುದ್ಧ ಎರಡನೇ ಜಯ ಲಭಿಸಿತು.
What a win! 👏
— ICC (@ICC) September 15, 2023
Bangladesh end their #AsiaCup2023 campaign on a high by beating finalists India in the final Super 4 game 💪#INDvBAN | https://t.co/ZOsknWbjNs pic.twitter.com/LKJJ7hdJ4b
ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ತಂಡವನ್ನು ಸಣ್ಣ ಮೊತ್ತಕ್ಕೆ ಕಟ್ಟಿ ಹಾಕಿ ಜಯ ಸಾಧಿಸುವುದು ರೋಹಿತ್ ಶರ್ಮಾ ಅವರ ಯೋಜನೆಯಾಗಿತ್ತು. ಆದರೆ ಬಾಂಗ್ಲಾ ಬ್ಯಾಟರ್ಗಳು ಉತ್ತಮವಾಗಿ ಬ್ಯಾಟ್ ಬೀಸಿ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 49.5 ಓವರ್ಗಳಲ್ಲಿ 259 ರನ್ಗಳಿಗೆ ಆಲ್ಔಟ್ ಆಗಿ ಸೋಲೊಪ್ಪಿಕೊಂಡಿತು. ಈ ಸೋಲಿನೊಂದಿಗೆ ಶುಭ್ ಮನ್ ಗಿಲ್ ಅವರ ಶತಕ ವ್ಯರ್ಥವಾಯಿತು. ಅಂದ ಹಾಗೆ ಏಷ್ಯಾ ಕಪ್ನಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ಧ ಸೋತಿದ್ದ 2012ರಲ್ಲಿ. ಆ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಶತಕ ಬಾರಿಸಿದ್ದರು. ಹೀಗಾಗಿ ಅದೇ ರೀತಿಯ ಸೋಲು ಭಾರತಕ್ಕೆ ಎದುರಾಗಿದ್ದು ಕಾಕತಾಳೀಯ.
ಗಿಲ್ ಅಬ್ಬರ
ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಬೆನ್ನಟ್ಟಲು ಮುಂದಾದ ಭಾರತ ತಂಡ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ಹಿಂದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದ ಅವರು ಈ ಬಾರಿ ಶೂನ್ಯಕ್ಕೆ ಔಟಾದರು. ಪದಾರ್ಪಣೆ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದ ತಿಲಕ್ ವರ್ಮಾ ಕೇವಲ 5 ರನ್ಗೆ ಔಟಾದರು.
ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಕೆ. ಎಲ್ ರಾಹುಲ್ ಸ್ವಲ್ಪ ಹೊತ್ತು ಆಡಿದರೂ ಅವರಿಂದ ಗಮನಾರ್ಹ ಪ್ರದರ್ಶನ ಮೂಡಿ ಬರಲಿಲ್ಲ. ಅವರು 19 ರನ್ಗೆ ಔಟಾದರು. ಇಶಾನ್ ಕಿಶನ್ ಕೊಡುಗೆ ಕೇವಲ 5 ರನ್. ಸೂರ್ಯಕುಮಾರ್ ಯಾದವ್ ಪೇಚಾಡಿ 26 ರನ್ ಬಾರಿಸಿದರೆ, ರವೀಂದ್ರ ಜಡೇಜಾ 7 ರನ್ಗೆ ತೃಪ್ತಿಪಟ್ಟರು. ಕೊನೆಯಲ್ಲಿ ಅಕ್ಷರ್ ಪಟೇಲ್ ಹೋರಾಟ ಸಂಘಟಿಸಿ 34 ಎಸೆತಗಳಲ್ಲಿ 42 ರನ್ ಬಾರಿಸಿ ಗೆಲುವಿನ ಆಸೆ ಮೂಡಿಸಿದರು. ಅದರೆ, ಅವರಿಗೆ ತಂಡವನ್ನು ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ. ಶಾರ್ದೂಲ್ ಠಾಕೂರ್ 11 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಬಾಂಗ್ಲಾ ಪರ ಬೌಲಿಂಗ್ನಲ್ಲಿ ಮುಸ್ತಾಫೀಜುರ್ ರಹ್ಮಾನ್ 50 ರನ್ಗೆ 3 ವಿಕೆಟ್ ಉರುಳಿಸಿದರೆ ಮೆಹೆದಿ ಹಸರ್ ಹಾಗೂ ತಂಜಿಮ್ ಹಸನ್ ತಲಾ ಎರಡು ವಿಕೆಟ್ ಉರುಳಿಸಿದರು.
ಶಕಿಬ್ ಅರ್ಧ ಶತಕದ ನೆರವು
ಬ್ಯಾಟಿಂಗ್ ಆಹ್ವಾನ ಪಡೆದ ಬಾಂಗ್ಲಾ ತಂಡ ಕಳಪೆ ಆರಂಭ ಪಡೆಯಿತು. ಲಿಟನ್ ದಾಸ್ ಶೂನ್ಯಕ್ಕೆ ಔಟಾದರೆ, ಅನ್ಮುಲ್ ಹಕ್ 4 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಅದೇ ರೀತಿ 28 ರನ್ಗಳಿಗೆ ಮೊದಲ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಮೆಹೆದಿ ಹಸನ್ ಕೂಡ 13 ರನ್ಗಳಿಗೆ ಔಟಾಗುವ ಮೂಲಕ ಬಾಂಗ್ಲಾ ತಂಡ 59 ರನ್ಗೆ ನಾಲ್ಕು ವಿಕೆಟ್ ನಷ್ಟ ಮಾಡಿಕೊಂಡಿತು. ಆದೆರ, ಈ ವೇಳೆ ಜತೆಯಾದ ಶಕಿಬ್ ಅಲ್ ಹಸನ್ (80) ಹಾಗೂ ಹೃದೋಯ್ (54) ಐದನೇ ವಿಕೆಟ್ಗೆ 101 ರನ್ಗಳ ಜತೆಯಾಟ ನೀಡಿದರು. ಇವರ ಸಾಹಸದಿಂದಾಗಿ ಬಾಂಗ್ಲಾ ತಂಡ ಚೇತರಿಕೆ ಪಡೆಯಿತು.
ಇದನ್ನೂ ಓದಿ: Shubhman Gill : ಕಿಂಗ್ ಕೊಹ್ಲಿ ಅಲಭ್ಯತೆಯಲ್ಲಿ ಮಿಂಚಿದ ಪ್ರಿನ್ಸ್, ಐದನೇ ಶತಕ ಬಾರಿಸಿದ ಗಿಲ್
ಅಂತಿ ಹಂತದಲ್ಲಿ ನಾಸುಮ್ ಅಹ್ಮದ್ (44) ಹಾಗೂ ಮೆಹೆದಿ ಹಸನ್ (29) ಬಿರುಸಾಗಿ ಬ್ಯಾಟ್ ಬೀಸಿದರು. ತಂಜಿಮ್ ಹಸನ್ ಕೂಡ 14 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.
ಭಾರತದ ಬೌಲಿಂಗ್ ಪರ ಶಾರ್ದುಲ್ ಠಾಕೂರ್ 65 ರನ್ಗಳಿಗೆ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 32 ರನ್ಗಳಿಗೆ 2 ವಿಕೆಟ್ ಪಡೆದರು. ಪ್ರಸಿದ್ದ್ ಕೃಷ್ಣ, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.